ಮಂಡ್ಯ ಅಖಾಡ : ಅಂಚೆ ಮತದಾನದ ವೇಳೆ ಬ್ಯಾಲೆಟ್ ಪೇಪರ್ ಪ್ರದರ್ಶಿಸಿದ್ದ ಸಿಆರ್ ಪಿಎಫ್ ಯೋಧನ ಮತ ಅಸಿಂಧು…!

 

ಬೆಂಗಳೂರು, ಮೇ 09, 2019 : (www.justkannada.in news) : ಮತದಾನದ ವೇಳೆ ಗೌಪ್ಯತೆ ಕಾಪಾಡುವಲ್ಲಿ ವಿಫಲವಾದ ಸಿಆರ್ ಪಿಎಫ್ ಪೇದೆಯ ಮತ ಅಸಿಂಧುಗೊಳಿಸಲು ಚುನಾವಣಾ ಆಯೋಗ ನಿರ್ದೇಶ ನೀಡಿದೆ.

ಈ ಸಂಬಂಧ ಇಂದು ಮಂಡ್ಯ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ರಾಜ್ಯ ಚುನಾವಣಾಧಿಕಾರಿ, ಮತ ಎಣಿಕೆ ವೇಳೆ ರಾಜ ನಾಯಕ್ ಅವರ ಮತವನ್ನು ಗಣನೆಗೆ ತೆಗೆದುಕೊಳ್ಳದೆ ಅದನ್ನು ತಿರಸ್ಕರಿಸುವಂತೆ ಸೂಚಿಸಿದೆ. ಜತೆಗೆ ಈ ಸಂಬಂಧ ತೆಗೆದುಕೊಂಡಿರುವ ಕ್ರಮದ ಬಗ್ಗೆ ಮಾಧ್ಯಮಗಳ ಮೂಲಕ ಪ್ರಚಾರ ನೀಡಿ ಮತದಾರರಿಗೆ ಮತ ಗೌಪ್ಯದ ಅರಿವು ಮೂಡಿಸುವಂತೆಯೂ ಸೂಚಿಸಿದ್ದಾರೆ.

ಏನಿದು ಘಟನೆ :

ಮಂಡ್ಯ ಮೂಲದ ಸಿಆರ್ ಪಿಎಫ್ ಯೋಧ ರಾಜನಾಯಕ್ ಅವರು ಚುನಾವಣೆ ಗೌಪ್ಯತೆಯನ್ನು ಹಾಳು ಮಾಡಿದ್ದು ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಏ. 10 ರಂದು ದೂರು ನೀಡಲಾಗಿತ್ತು.
ಬೆಂಗಳೂರು ಮೂಲದ ಕಿರಣ್ ಕುಮಾರ್ ಹಾಗೂ ಇತರೆ ಐದು ಮಂದಿ ವಕೀಲರು ಈ ದೂರು , ಅಂಚೆ ಮತದಾನದ ವೇಳೆ ಯೋಧ ರಾಜನಾಯಕ್ , ತಾವು ಯಾರಿಗೆ ಮತದಾನ ಮಾಡಿದ್ದೇನೆ ಎಂಬುದನ್ನು ಬ್ಯಾಲೆಟ್ ಪೇಪರ್ ಅನ್ನು ಫೋಟೋ ತೆಗೆದು ಅದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗ ಪಡಿಸಿದ್ದಾರೆ. ಇದು ಮತದಾನದ ಗೌಪ್ಯತೆಯನ್ನು ಹಾಳು ಮಾಡಿದಂತೆ. ಜತೆಗೆ ಸಂವಿಧಾನ ದತ್ತವಾಗಿ ನೀಡಿರುವ ಹಕ್ಕಿನ ದುರ್ಬಳಕೆ ಮಾಡಿಕೊಂಡಂತೆ. ಆದ್ದರಿಂದ ಇವರ ವಿರುದ್ಧ ರಿಪ್ರಸೆಂಟೇಷನ್ ಆಫ್ ಪಿಪಲ್ ಆಕ್ಟ್ ಹಾಗೂ ಚುನಾವಣೆ ನಿಯಮಗಳ ಪ್ರಕಾರ ಶಿಸ್ತು ಕ್ರಮ ಜರುಗಿಸುವಂತೆ ಈ ವಕೀಲರು ಕೋರಿದ್ದರು.

– JUSTKANNADA.IN

mandya-election-crpf-vote-regected