Sunday, August 2, 2026

BDA Apartments

Home Front Page ಕನ್ನಡ ಗೊತ್ತಿಲ್ಲ ಎಂದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳ ಗುಂಪು

ಕನ್ನಡ ಗೊತ್ತಿಲ್ಲ ಎಂದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳ ಗುಂಪು

ಬೆಂಗಳೂರು:ಜುಲೈ-27:(www.justkannada.in) ಖಾಸಗಿ ಕಂಪನಿಯಲ್ಲಿ ಹೆಚ್ ಆರ್ ಆಗಿ ಕೆಲಸಮಾಡುತ್ತಿದ್ದ ವ್ಯಕ್ತಿಯೊಬ್ಬ ಕನ್ನಡ ಮಾತನಾಡಲು ಬರುವುದಿಲ್ಲ ಎಂದಿದ್ದಕ್ಕೆ ದುಷ್ಕರ್ಮಿಗಳ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಆರ್ ಟಿ ನಗರದಲ್ಲಿ ನಡೆದಿದೆ.

ಉತ್ತರ ಪ್ರದೇಶ ಮೂಲದ ದೃವ್ ಗುಪ್ತಾ (35) ಹಲ್ಲೆಗೊಳಗಾದ ಉದ್ಯೋಗಿ. ಜುಲೈ 24ರಂದು ರಾತ್ರಿ 11.30ರ ಸುಮಾರಿನಲ್ಲಿ ಆರ್ ಟಿ ನಗರದಲ್ಲಿ ಈ ಘಟನೆ ನಡೆದಿದೆ.

ದೃವ್ ತನ್ನ ಸ್ನೇಹಿತರಿಬ್ಬರ ಜತೆ ಸಿಗರೇಟ್ ಅಂಗಡಿಗೆ ತೆರಳಿ, ಹಿಂದಿಯಲ್ಲಿ ಸಿಗರೇಟ್ ಕೊಡುವಂತೆ ಕೇಳಿದ್ದಾನೆ. ಅಂಗಡಿಯ ಸಮೀಪವೇ ನಿಂತಿದ್ದ ಹುಡುಗರ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ದೃವ್ ಬಳಿ ಬಂದು ಕನ್ನಡದಲ್ಲಿ ಮಾತನಾಡುವಂತೆ ಹೇಳಿದ್ದಾನೆ. ಆತನ ಮಾತನ್ನು ದೃವ್ ನಿರ್ಲಕ್ಷ್ಯ ಮಾಡಿದ್ದಾನೆ. ಗುಂಪಿನಲ್ಲಿದ್ದ ಉಳಿದವರೂ ಸಮೀಪಕ್ಕೆ ಬಂದಿದ್ದಾರೆ. ಕನ್ನಡದಲ್ಲಿ ಮಾತನಾಡುವಂತೆ ಜೋರಾಗಿ ಹೇಳಿದ್ದಾರೆ. ಆಗ ದೃವ್ ತನಗೆ ಕನ್ನಡ ಗೊತ್ತಿಲ್ಲ. ತಾನು ಉತ್ತರ ಪ್ರದೇಶದ ಲಖನೌ ನಿಂದ ಬಂದಿದ್ದಾಗಿ, ಈಗ ಬೆಂಗಳೂರಿಗೆ ಶಿಫ್ಟ್ ಆಗಿದ್ದು, ಕನ್ನಡ ಮಾತನಾಡಲು ಕಲಿಯುತ್ತಿರುವುದಾಗಿ ಹೇಳಿದ್ದಾರೆ.

ಪರಸ್ಪರ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದೆ. ಯುವಕರ ಗುಂಪು ದೃವ್ ವಿವರಣೆಯನ್ನು ಕೇಳದೇ ದೃವ್ ಮೂಗಿಗೆ ಗುದ್ದಿದ್ದಾರೆ. ಮೂಗಿನಿಂದ ರಕ್ತ ಸುರಿಯಲಾರಂಭಿಸಿದೆ. ತಕ್ಷಣ ಸ್ಥಳಕ್ಕೆ ಬಂದ್ ದೃವ್ ಸ್ನೇಹಿತರು ಗಲಾಟೆಯನ್ನು ತಡೆದು ದೃವ್ ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ದೃವ್ ಗುಪ್ತಾ ಆರ್ ಟಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ದುಷ್ಕರ್ಮಿಗಳನ್ನು ಬಂಧಿಸುವಂತೆ ಮನವಿ ಮಾಡಿದ್ದಾರೆ. ಐಪಿಸಿ ಸೆಕ್ಷನ್ 341, 504, 324ರ ಅಡಿಯಲ್ಲಿ ಎಫ್ ಐ ಆರ್ ದಾಖಲಿಸಿಕೊಂಡಿರುವ ಪೊಲೀಸರು ಹಲ್ಲೆ ನಡೆಸಿದವರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಕನ್ನಡ ಗೊತ್ತಿಲ್ಲ ಎಂದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳ ಗುಂಪು
Kannada gottilla,’ says man; gets a bloody nose