ಮಾಲ್ಗುಡಿ ವಸ್ತು ಸಂಗ್ರಹಾಲಯ: ಸಮಸ್ಯೆ ಬಗೆಹರಿಸಲು ಮಧ್ಯಸ್ಥಿಕೆ ಪ್ರಕ್ರಿಯೆಗಳಿಗೆ ಒಪ್ಪಿಕೊಳ್ಳುವಂತೆ ಮತ್ತೆ ಮನವಿ- ಡಾ.ಮಂಜುನಾಥ್ ಕನಮಡಿ

ಮೈಸೂರು,ನವೆಂಬರ್,19,2021(www.justkannada.in): ಮಾಲ್ಗುಡಿ ವಸ್ತು ಸಂಗ್ರಹಾಲಯಕ್ಕೆ ಸಂಬಂಧಿಸಿದಂತೆ ನೈರುತ್ಯ ರೈಲ್ವೆ ವಲಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಮತ್ತು ಜಾನ್ ದೇವರಾಜ್ ನಡುವೆ ನಡೆದ ಸಭೆಯಲ್ಲಿ, ಸಮಸ್ಯೆಯನ್ನು ಬಗೆಹರಿಸಲು ಮಧ್ಯಸ್ಥಿಕೆ ಪ್ರಕ್ರಿಯೆಗಳಿಗೆ ಒಪ್ಪಿಕೊಳ್ಳುವಂತೆ ಮತ್ತೊಮ್ಮೆ ಅವರಿಗೆ ಸಲಹೆ ನೀಡಲಾಗಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ ಮೈಸೂರು ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ್ ಕನಮಡಿ, ಹೆಸರಾಂತ ಇಂಗ್ಲಿಷ್ ಕಾದಂಬರಿಕಾರ ಆರ್.ಕೆ.ನಾರಾಯಣ್ ಅವರ ಸಣ್ಣ ಕಥೆಗಳನ್ನು ಆಧರಿಸಿದ ಜನಪ್ರಿಯ ಟೆಲಿ ಧಾರಾವಾಹಿ ‘ಮಾಲ್ಗುಡಿ ಡೇಸ್’ನ ಕೆಲವು ಸಂಚಿಕೆಗಳನ್ನು ಮೈಸೂರು ವಿಭಾಗ ಪ್ರಾದೇಶಿಕ ವ್ಯಾಪ್ತಿಗೆ ಬರುವ ಅರಸಾಳು ರೈಲು ನಿಲ್ದಾಣದ ಸುತ್ತಮುತ್ತಲ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದೆ. ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ರೈಲ್ವೆಯ ಸಂಪೂರ್ಣ ಧನಸಹಾಯದೊಂದಿಗೆ, ಟೆಲಿ ಧಾರಾವಾಹಿಯ ಕಲಾ ನಿರ್ದೇಶಕ ಜಾನ್ ದೇವರಾಜ್ ಅವರ ಸೇವೆಯನ್ನು ತೊಡಗಿಸಿಕೊಳ್ಳುವ ಮೂಲಕ ಕಾಲ್ಪನಿಕ ಪಟ್ಟಣ ಮಾಲ್ಗುಡಿಯ ಮಾಂತ್ರಿಕ ವಾತಾವರಣವನ್ನು ಮರುಕಳಿಸಲು ಅರಸಾಳುವಿನಲ್ಲಿ ಪಾಳುಬಿದ್ದ ಮತ್ತು ಶಿಥಿಲಗೊಂಡ ರೈಲ್ವೆ ನಿಲ್ದಾಣದ ಕಟ್ಟಡವನ್ನು ಮರುಸ್ಥಾಪಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಾರಂಭಿಸಿತು. ಭಾರತೀಯ ರೈಲ್ವೆ ತನ್ನ ವಿಶಾಲವಾದ ವ್ಯವಸ್ಥೆಯಲ್ಲಿ ಪರಂಪರೆಯನ್ನು ಸಂರಕ್ಷಿಸಲು ಯಾವಾಗಲೂ ಮುಂಚೂಣಿಯಲ್ಲಿದೆ ಮತ್ತು ಆದ್ದರಿಂದಾಗಿ 1980 ರ ದಶಕದಲ್ಲಿ ರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ್ದ ‘ಮಾಲ್ಗುಡಿ ಡೇಸ್’ ರಚನೆಯ ಹಿಂದಿನ ಸಂಪೂರ್ಣ ತಂಡದ ಕೊಡುಗೆಯನ್ನು ಪ್ರದರ್ಶಿಸಲು ಮೈಸೂರು ವಿಭಾಗವು ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಆಲೋಚಿಸಿತು.

ಜಾನ್ ದೇವರಾಜ್ ಅವರು ಮಾಲ್ಗುಡಿ ವಸ್ತು ಸಂಗ್ರಹಾಲಯವನ್ನು ಸಾರ್ವಜನಿಕರಿಗೆ ತೆರೆದಾಗಿನಿಂದ ಸ್ವಲಾಭ ಪಡೆಯಲು ಸತ್ಯಗಳನ್ನು ತಿರುಚುವ ಮೂಲಕ ರೈಲ್ವೆ ವಿರುದ್ಧ ಒತ್ತಡ ಹೇರುತ್ತಿರುವುದು ವಿಷಾದನೀಯವಾಗಿದೆ.

ಈ ವಿಷಯಕ್ಕೆ  ಸಂಬಂಧಿಸಿದಂತೆ ಒಪ್ಪಂದಕ್ಕೆ ಸಹಿ ಹಾಕಿ 24.05.2019 ರಂದು ಅವರಿಗೆ ‘ಔಪಚಾರಿಕ ಒಪ್ಪಂದ ಪತ್ರ’ವನ್ನು ನೀಡಿ ಒಪ್ಪಂದದ ಸಾಮಾನ್ಯ ಷರತ್ತುಗಳ ಕಲಂಗಳ ಮಾರ್ಗದರ್ಶನದಲ್ಲಿ ಹಾಕಿರುವಂತೆ ಸಂಪೂರ್ಣ ವಿವರಗಳೊಂದಿಗೆ ಶಿವಮೊಗ್ಗ ಜಿಲ್ಲೆಯ ಅರಸಾಳು ನಿಲ್ದಾಣದಲ್ಲಿರುವ ಮಾಲ್ಗುಡಿ ವಸ್ತುಸಂಗ್ರಹಾಲಯದ ಅಭಿವೃದ್ಧಿಯ ಕಾಮಗಾರಿಯನ್ನು ಕಾರ್ಯಗತಗೊಳಿಸಲಾಯಿತು.

ಅಂತಿಮ ಪಾವತಿಯನ್ನು ಪ್ರಕ್ರಿಯೆಗೊಳಿಸುವಾಗ ಒಪ್ಪಂದದ ವಿಶೇಷ ಕಲಂಗಳ ಮತ್ತು ಇತರ ನಿಯಮಗಳು ಹಾಗು ಷರತ್ತುಗಳಿಗೆ ಮೌಲ್ಯಮಾಪನ ಮಾಡಿ ಅವುಗಳ ಅನುಗುಣವಾಗಿಯೆ ಕೆಲಸವನ್ನು ಕಾರ್ಯಗತಗೊಳಿಸಲಾಯಿತು. ವಿವರವಾಗಿ ಚರ್ಚೆಗಳು ಮತ್ತು ರೈಲ್ವೆಯ ವಿತ್ತೀಯ ಖಾತೆ ಒಪ್ಪಿಗೆಯ ನಂತರವೇ ಕೆಲಸ ಕಾರ್ಯಗತಗೊಳಿಸುವ ಸಂಸ್ಥೆಗೆ ಅಂತಿಮ ಪಾವತಿಯನ್ನು ಮಾಡಲಾಯಿತು. ಕಾರ್ಯಕ್ಷಮತೆಯ ಖಾತರಿ ಹಣ ಮತ್ತು ಭದ್ರತಾ ಠೇವಣಿಯ ಜೊತೆಗೆ ಮುಂಗಡ ಹಣದ ಠೇವಣಿ ಕೂಡ ಸಂಪೂರ್ಣವಾಗಿ ಮರುಪಾವತಿಸಲಾಗಿದೆ.

ಸಂಸ್ಥೆಯು ರೈಲ್ವೆಯು ಮಾಡಿದ ಅಂತಿಮ ಪಾವತಿಯನ್ನು ಒಪ್ಪಲಿಲ್ಲ ಹಾಗು ಅಕ್ಟೋಬರ್ 2020 ರಲ್ಲಿ ಅದು ಮಾಡಿದ ಮನವಿಯನ್ನು ಸರಿಯಾಗಿ ಪರಿಶೀಲಿಸಿ ಅದು ಸ್ವೀಕರಿಸಲು ಯೋಗ್ಯವಲ್ಲ ಎಂದು ತಿಳಿಸಲಾಯಿತು. ನಂತರದ ಮೇಲ್ಮನವಿಯ ಮೇರೆಗೆ ಒಪ್ಪಂದದ ನಿಯಮಗಳು ಮತ್ತು ಷರತ್ತುಗಳ ಪ್ರಕಾರ ರಾಜಿ ಪ್ರಕ್ರಿಯೆಗಳನ್ನು ಜಾನ್ ದೇವರಾಜ್ ಅವರೊಂದಿಗೆ ನಡೆಸಲಾಯಿತಾದರೂ ವಿವಾದವನ್ನು ಇತ್ಯರ್ಥಪಡಿಸಲು ಸಾಧ್ಯವಾಗಲಿಲ್ಲ.

ಅಂತಹ ವಿವಾದಗಳನ್ನು ಪರಿಹರಿಸಲು ನಿಗದಿತ ನಿಯಮಾನುಸಾರ ನೈಋತ್ಯ ರೈಲ್ವೆ ಪ್ರಧಾನ ಕಾರ್ಯಾಲಯವು ಈ ಪ್ರಕರಣದಲ್ಲಿ ಮಧ್ಯಸ್ಥಗಾರರ ನೇಮಕಾತಿಗೆ ಅನುಮೋದಿಸಲಾಯಿತು ಹಾಗು ದಿನಾಂಕ 16.09.2021 ರ ಪತ್ರದಲ್ಲಿ ಈ ವಿಷಯವನ್ನು  ಜಾನ್ ದೇವರಾಜ್ ಅವರಿಗೆ ತಿಳಿಸಲಾಗಿದೆ. ಸಮಸ್ಯೆ ಬಗೆಹರಿಸಲು ವಿವಿಧ ಹಂತಗಳಲ್ಲಿ ಅವರೊಂದಿಗೆ ಚರ್ಚೆಯನ್ನೂ ನಡೆಸಲಾಯಿತು.

ಒಪ್ಪಂದದ ನಿಯಮಗಳು ಮತ್ತು ಷರತ್ತುಗಳಲ್ಲಿ ವಿವರಿಸಿರುವಂತೆ ಈ ತರಹದ ಪ್ರಕರಣಗಳಿಗೆ ನಿಗದಿಯಾದ ಕಾರ್ಯವಿಧಾನದ ಮೂಲಕ ಈ ವಿವಾದವನ್ನು ಪರಿಹರಿಸಲು ಇರುವ ಅವಕಾಶವನ್ನು ಬಳಸಿಕೊಳ್ಳುವ ಬದಲು, ಜಾನ್ ದೇವರಾಜ್ ಅವರು ಬೇರೆಯದೇ ರೀತಿಯಲ್ಲಿ ಕಾರ್ಯನಿರ್ವಹಿಸಲು ಆದ್ಯತೆ ನೀಡಿದ್ದಾರೆ.

ರೈಲ್ವೆಯು ಪ್ರಮುಖ ಮತ್ತು ಜವಾಬ್ದಾರಿಯುತ ಸರ್ಕಾರಿ ಸಂಸ್ಥೆಯಾಗಿರುವುದರಿಂದ ಅದು ನೇಮಿಸಿದ ಸಂಸ್ಥೆಗಳಿಗೆ ಅವುಗಳು ಕಾರ್ಯಗತಗೊಳಿಸಿದ ಕೆಲಸದ ಅನುಸಾರವಾಗಿ ಮತ್ತು ಉತ್ತಮವಾಗಿ ರೂಪಿಸಲಾದ ಸಾಮಾನ್ಯ ಒಪ್ಪಂದದ ಷರತ್ತುಗಳಿಗೆ (ಜನರಲ್ ಕಂಡೀಶನ್ಸ್ ಆಫ್ ಕಾಂಟ್ರಾಕ್ಟ್ – GCC) ಅನುಗುಣವಾಗಿ ಎಲ್ಲಾ ಪಾವತಿಗಳನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯನ್ನು ಹೊಂದಿದೆ. ಮಾಡಿದ ಎಲ್ಲಾ ಪಾವತಿಗಳನ್ನು ರೈಲ್ವೆಯ ವಿತ್ತೀಯ ವಿಭಾಗ ಪರಿಶೀಲನೆಗೆ ಒಳಪಡಿಸಿದೆ ಮತ್ತು ನಿರ್ಧಾರಗಳು ಏಕಪಕ್ಷೀಯವಾಗಿವೆ ಎಂಬ ಹೇಳಿಕೆಯು ಸತ್ಯಕ್ಕೆ ದೂರವಾಗಿದೆ. ಮೇಲೆ ತಿಳಿಸಿದಂತೆ ಮತ್ತು ಒಪ್ಪಂದಕ್ಕೆ ಸಹಿ ಮಾಡುವ ಸಮಯದಲ್ಲಿ ಒಪ್ಪಿಕೊಂಡಂತೆ, ಬಾಧಿತ ಸಂಸ್ಥೆಯು ತನ್ನ ಹಕ್ಕನ್ನು ಸಮರ್ಥಿಸಲು ಮಧ್ಯಸ್ಥಿಕೆಯನ್ನು ಪಡೆಯಲು ಕಾನೂನುಬದ್ಧ ಹಕ್ಕನ್ನು ಹೊಂದಿದೆ ಮತ್ತು ಅದನ್ನು ಈಗಾಗಲೇ ಅವರಿಗೆ ನೀಡಲಾಗಿದೆ. ಅವರು ಒಪ್ಪಿರುವಂತೆಯೆ ಇತರೆ ಕಾನೂನು ನೆರವು ಮಾರ್ಗಗಳು ಈಗಾಗಲೇ ಲಭ್ಯವಿರುವಾಗ, ರೈಲ್ವೆ ಆಡಳಿತವನ್ನು ಬಲವಂತಪಡಿಸಲು ರೈಲ್ವೆಯ ಬಗ್ಗೆ ಪೂರ್ವಾಗ್ರಹದಿಂದ ಪತ್ರಿಕಾಗೋಷ್ಠಿಗಳನ್ನು ನಡೆಸುವುದು ಸ್ವೀಕಾರಾರ್ಹವಲ್ಲ ಎಂದು ಆಕ್ಷೇಪಿಸಿದ್ದಾರೆ.

Key words: Malgudi Museum- Requests – acceptance -mediation -processes –resolve- problem- Dr. Manjunath Kanamadi