ಕನ್ನಡ ಗ್ರಾಮಗಳ ಹೆಸರನ್ನು ಮಲಯಾಳಂ ಭಾಷೆಗೆ ಬದಲಾಯಿಸುವ ಪ್ರಕ್ರಿಯೆ ಕೈಬಿಡಿ –ಕೇರಳ ಸರ್ಕಾರಕ್ಕೆ ಆಗ್ರಹ.

ಕಾಸರಗೂಡು,ಜೂನ್,25,2021(www.justkannada.in): ಕಾಸರಗೋಡು ಜಿಲ್ಲೆಯ ಮಂಜೇಶ್ವರ ಮತ್ತು ಕಾಸರಗೋಡಿನ ಕೆಲವು ಗ್ರಾಮಗಳಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿದ್ದ  ಕನ್ನಡ ಗ್ರಾಮಗಳ ಹೆಸರನ್ನು ಮಲಯಾಳಂ ಭಾಷೆಗೆ ಬದಲಾವಣೆ ಮಾಡಲು ಕೇರಳ ಸರ್ಕಾರ ಮುಂದಾಗಿದೆ. ಹೀಗಾಗಿ ಈ ಪಕ್ರಿಯೆಯೆನ್ನ ಕೈ ಬಿಡಬೇಕು. ಈ ಬಗ್ಗೆ  ಕೇರಳ ಸರ್ಕಾರಕ್ಕೆ ಪತ್ರ ಬರೆಯಬೇಕೆಂದು ಕರ್ನಾಟಕ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರಿಗೆ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಮನವಿ ಸಲ್ಲಿಸಲಾಯಿತು.jk

ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿ.ಸೋಮಶೇಖರ್  ಹಾಗೂ ಗಡಿ ಪ್ರಾಧಿಕಾರದ ಕಾರ್ಯದರ್ಶಿಗಳಾದ  ಪ್ರಕಾಶ  ಮತ್ತೀಹಳ್ಳಿ ಅವರು ಇಂದು  ಕರ್ನಾಟಕದ ಮುಖ್ಯ ಕಾರ್ಯದರ್ಶಿ  ಪಿ. ರವಿಕುಮಾರ್ ರವರನ್ನು ಭೇಟಿಯಾಗಿ ಈ ಮನವಿ ಸಲ್ಲಿಸಿದರು.

ಕರ್ನಾಟಕದ ಗಡಿಭಾಗದಲ್ಲಿ ಕನ್ನಡ ಭಾಷೆಯನ್ನೇ ಹೆಚ್ಚು ಬಳಸುವಂತಹ ಕನ್ನಡಿಗರಿರುವ ಹಾಗೂ ಅಪಾರ ಭಾಷಾ ಅಭಿಮಾನವುಳ್ಳ ಗಡಿಭಾಗದ ಕೇರಳ ರಾಜ್ಯದಲ್ಲಿರುವ ಪ್ರಖ್ಯಾತ ತಾಣಗಳಾದ ಮಂಜೇಶ್ವರ ಮತ್ತು ಕಾಸರಗೋಡಿನ ಕನ್ನಡ ಸಾಂಸ್ಕೃತಿಕ ಪರಂಪರೆಯನ್ನು ಸೂಚಿಸುವ ಹೆಸರುಗಳನ್ನು ಹೊಂದಿದ್ದ ಕೆಲವು ಹಳ್ಳಿಗಳ ಹೆಸರನ್ನು ಕೇರಳ ಸರ್ಕಾರ ಸ್ಥಳೀಯ ಸಂಸ್ಥೆಗಳು ಬದಲಾಯಿಸುವಂತಹ ಪ್ರಕ್ರಿಯೆ ನಡೆಸುತ್ತಿರುವುದು ನಮ್ಮ ಪ್ರಾಧಿಕಾರದ ಗಮನಕ್ಕೆ ಬಂದಿದೆ.

ಕೇರಳ ಸರ್ಕಾರವು ಮಂಜೇಶ್ವರ ಹಾಗೂ ಕಾಸರಗೋಡಿನ ಕೆಲವು ಹಳ್ಳಿಗಳ ಹೆಸರನ್ನು ಬದಲಾಯಿಸಿ ಮಲಯಾಳಂ ಭಾಷೆಯ ಹೆಸರುಗಳನ್ನು ನೀಡಲು ಹೊರಟಿರುವುದು ಆ ಭಾಗದ ಕನ್ನಡಿಗರ ಪರಂಪರಾಗತ ಭಾವನೆಗಳಿಗೆ ಧಕ್ಕೆ ತರುವಂತಾಗಿರುತ್ತದೆ. ಇಂತಹ ಬದಲಾವಣೆಗಳನ್ನು ತರಲು ಪ್ರಯತ್ನಿಸುವ ಮುನ್ನ ಆ ಭಾಗದ ಕನ್ನಡಿಗರ ಅಭಿಪ್ರಾಯವನ್ನು ಅಥವಾ ಅಲ್ಲಿನ ನಾಗರೀಕರ ಅಭಿಪ್ರಾಯವನ್ನು  ಕೇಳಿಲ್ಲ.

ಈ ಬಗ್ಗೆ ಕರ್ನಾಟಕದ ಗಡಿ ಪ್ರದೇಶ ಅಭಿವೃದ್ಧಿಯ ಅಧ್ಯಕ್ಷರು ಕೇರಳ ಸರ್ಕಾರದ ಮತ್ತು ಲೋಕೋಪಯೋಗಿ ಹಾಗೂ ಕಂದಾಯ ಸಚಿವರಿಗೆ ದಿನಾಂಕ: 24-06-2021 ರಂದು ಪತ್ರ ಬರೆದು ಕನ್ನಡದ ಗ್ರಾಮಗಳ ಹೆಸರುಗಳನ್ನು ಯಾವುದೇ ಕಾರಣಕ್ಕೂ ಬದಲಾಯಿಸಬಾರದೆಂದು ಮನವಿ ಸಲ್ಲಿಸಿದ್ದರು.

ಹಲವಾರು ದಶಕ ಮತ್ತು ಶತಮಾನಗಳಿಂದ ಬಂದಿರುವ ಗ್ರಾಮಗಳ ಹೆಸರುಗಳನ್ನೂ ಸೂಚಿಸುವ ಕನ್ನಡ ಭಾಷಾ ಸೂಚಕ ನಾಮಫಲಕಗಳನ್ನು ಬದಲಾಯಿಸುವ ಪ್ರಕ್ರಿಯೆಯನ್ನು ಕೈಬಿಡಬೇಕೆಂದು ಹಾಗೂ ಈ ಬಗ್ಗೆ ಕೇರಳ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಬೇಕೆಂದು ರಾಜ್ಯ ಮುಖ್ಯಕಾರ್ಯದರ್ಶಿಗೆ  ಮನವಿ ಸಲ್ಲಿಸಲಾಗಿದೆ ಎಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿ.ಸೋಮಶೇಖರ್ ತಿಳಿಸಿದ್ದಾರೆ.

ಕನ್ನಡ ಪ್ರದೇಶದ  ಗ್ರಾಮಗಳ ಹೆಸರು – ಬದಲಾಯಿಸಲು ಹೊರಟಿರುವ ಮಲಯಾಳಮ್ ಹೆಸರು

ಮಧೂರು-ಮಧುರಮ್

ಮಲ್ಲ-ಮಲ್ಲಮ್

ಕಾರಡ್ಕ  _ಕಡಗಮ್

ಬೇದಡ್ಕ  _ಬೆಡಗಮ್

ಪಿಳಿಕುಂಜೆ-_ಪಿಳಿಕುನ್ನು, ಆನೆಬಾಗಿಲು,_ಆನೆವಾಗಿಲ್

ಮಂಜೇಶ್ವರ-ಮಂಜೇಶ್ವರಮ್

ಹೊಸದುರ್ಗ-ಪುದಿಯಕೋಟ

ಕುಂಬಳೆ -ಕುಂಬ್ಳಾ, ಸಸಿಹಿತ್ಲು, ಶೈವಲಪ್

ನೆಲ್ಲಿಕುಂಜ -ನೆಲ್ಲಿಕುನ್ನಿ

ಈ ಭಾಗದ ಗ್ರಾಮಗಳ ಹೆಸರುಗಳನ್ನು ಬದಲಾಯಿಸುವ ಬಗ್ಗೆ ಅಲ್ಲಿನ ಕನ್ನಡ ಪರ ಸಂಘ ಸಂಸ್ಥೆಗಳು ತಮ್ಮ ಅಸಮಾಧಾನವನ್ನು ಸಹ ವ್ಯಕ್ತಪಡಿಸಿರುವ ಅಂಶವನ್ನು ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಲಾಗಿದೆ.

ಈ ಭಾಗದ ಗ್ರಾಮಗಳ ಹೆಸರುಗಳನ್ನು ಬದಲಾಯಿಸುವ ಬಗ್ಗೆ ಅಲ್ಲಿನ ಕನ್ನಡಪರ ಸಂಘ ಸಂಸ್ಥೆಗಳು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿರುತ್ತವೆ ಎಂಬ ಅಂಶವನ್ನು ಕೇರಳ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಮಾಹಿತಿ ನೀಡಿದರು.

Key words: Quit – process – changing -name -Kannada villages -Border Development Authority -Kerala