ಕನ್ನಡ ಕಡ್ಡಾಯವಾಗಿ ಕಲಿಸುವುದು ನಾಟಕೀಯವಾಗಬಾರದು: ಸಚಿವ ಎಸ್.ಸುರೇಶ್‌ಕುಮಾರ್

ಮೈಸೂರು,ಜನವರಿ,30,2021 : ಕನ್ನಡವನ್ನು ಕರ್ನಾಟಕದಲ್ಲಿ ಒಂದು ಭಾಷೆಯಾಗಿ ಕಲಿಸಬೇಕು ಎಂಬುದು ಕಾಯಿದೆ. ಆದರೆ, ಅನೇಕ ಶಾಲೆಗಳಲ್ಲಿ ಈ ಮನಸ್ಥಿತಿ ಇಲ್ಲ. ಕನ್ನಡವನ್ನು ಕಲಿಸುವುದು, ನಾಟಕೀಯ, ಯಾಂತ್ರೀಕೃತವಾಗಬಾರದು. ಅರ್ಥಪೂರ್ಣ ಕಾರ‌್ಯವಾಗಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಹೇಳಿದರು.
ಕನ್ನಡ ಅಕ್ಯಾಡೆಮಿ ವತಿಯಿಂದ ಮೈಸೂರು ವಿಶ್ವವಿದ್ಯಾನಿಲಯದ “ಕನ್ನಡ ಸರ್ಟಿಫಿಕೇಟ್ ಕೋರ್ಸ್‌ಗಳ ಉದ್ಘಾಟನೆ” ವರ್ಚುವಲ್ ಕಾರ‌್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮೂರು ಬಿಟ್ಟು ದೂರ ಹೋದಾಗ ನಮ್ಮೂರು ಹಾಗೂ ನಮ್ಮ ಭಾಷೆಯ ಮೇಲೆ ಪ್ರೇಮ ಜಾಸ್ತಿಯಾಗುತ್ತದೆ. ಗುಜರಾತಿ ಸೇರಿದಂತೆ ಅನೇಕ ಸಮುದಾಯಗಳು ಎಲ್ಲಿ ಹೋದರೂ ತಮ್ಮ ಮಾತೃ ಭಾಷೆ ಬಿಡುವುದಿಲ್ಲ. ಅದರಲ್ಲಿಯೇ ವ್ಯವಹರಿಸುತ್ತಾರೆ. ಇದು ಭಾಷೆಯ ಮೇಲಿನ ಹೆಮ್ಮೆಯಾಗಿದೆ. ಭಾಷೆಯ ಮೇಲಿನ ಹೆಮ್ಮೆಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಕಾರ‌್ಯಕ್ರಮಗಳ ರೂಪಿಸಬೇಕಿದೆ ಎಂದರು.
ಇಂಗ್ಲಿಷ್ ಭಾಷೆಗೆ ಒತ್ತು ನೀಡುವಂತಹ ಶಾಲೆಗಳನ್ನು ಸೇರಿಸಿ ಕನ್ನಡ ಭಾಷೆಯನ್ನು ಕಲಿಸುವಂತೆ ಸಂವಾದ ನಡೆಸಲಾಗಿದೆ. ಕನ್ನಡ ಅಕ್ಯಾಡೆಮಿಯು ಕನ್ನಡದ ದೀಪವನ್ನು ಬೆಳಗುವ ಕಾರ‌್ಯಮಾಡುತ್ತಿರುವುದಕ್ಕೆ ಧನ್ಯವಾದಗಳು. ಮೈಸೂರು ವಿವಿ ಈ ಕಾರ್ಯಕ್ಕೆ ಮುಂದೆ ಬಂದಿರುವುದು ಚೈತನ್ಯ ತುಂಬಿದಂತ್ತಾಗಿದೆ ಎಂದು ಮೆಚ್ಚುಗೆವ್ಯಕ್ತಪಡಿಸಿದರು.
ಅಮ್ಮನನ್ನು ಅಮ್ಮ ಎಂದು ಕರೆಯುವುದಕ್ಕೆ ಒಂದು ರೀತಿಯ ಸಂತೋಷ. ಆದರೆ, ಮಕ್ಕಳು ಅಮ್ಮ ಎಂದು ಕರೆದರೆ ಎಷ್ಟೋ ಮಂದಿ ಬೇಸರಿಸಿಕೊಳ್ಳುತ್ತಾರೆ. ಪೋಷಕರು ಮಕ್ಕಳಲ್ಲಿ ಭಾಷಾಪ್ರೇಮವನ್ನು ತುಂಬುವ ಕಾರ್ಯಮಾಡಬೇಕು. ಕನ್ನಡದ ಬಗ್ಗೆ ಅಕ್ಕರೆ, ಪ್ರೀತಿ ಹೆಚ್ಚಿಸುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕೆಲಸ ಮಾಡುತ್ತಿದೆ ಎಂದರು.
ಮೈಸೂರು ವಿವಿಯಂತೆ ರಾಜ್ಯದ ಉಳಿದ ವಿವಿಗಳು ಕನ್ನಡ ಅಭಿವೃದ್ಧಿ ಕಾರ್ಯಗಳಿಗೆ ಬೆಂಬಲ ನೀಡಬೇಕು. ಈ ಮೂಲಕ ಕನ್ನಡವನ್ನು ಕಲಿಸುವ ಕಾರ್ಯಮಾಡಬೇಕು.
ಶಿವಗೌಡರ್ ನೇತೃತ್ವದ ತಂಡ ಕನ್ನಡದ ಪರಿಚಾರಕರಾಗಿ ಕೆಲಸ ಮಾಡುತ್ತಿದ್ದಾರೆ. ಸರಕಾರದ ಯಾವುದೇ ಸೌಲಭ್ಯಪಡೆಯದೇ ಕನ್ನಡ ಸೇವೆ ಮಾಡುತ್ತಿದ್ದಾರೆ. ನಾನು ಸರಕಾರದ ಪರವಾಗಿ ಕನ್ನಡದ ಅಭಿವೃದ್ಧಿ ಕೆಲಸ ಮಾಡಲು ಸಿದ್ಧವಾಗಿದ್ದೇನೆ. ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.
ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾತನಾಡಿ, ದ್ರಾವಿಡ ಭಾಷೆಗಳಲ್ಲಿ ಪ್ರಮುಖ ಹಾಗೂ ಪುರಾತನವಾದ ಭಾಷೆ ಕನ್ನಡವಾಗಿದೆ. ಕನ್ನಡದ ಲಿಪಿಗಳನ್ನು ಲಿಪಿಯ ರಾಣಿ ಎಂದು ಕರೆಯಲಾಗಿದೆ. ಕನ್ನಡ ಭಾಷೆಯ ಅಭಿವೃದ್ಧಿ ಕಾರ‌್ಯವು ವ್ಯಾಪಕವಾಗಿ ನಡೆಯುತಿದೆ ಎಂದು ಸಂತೋಷವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯವು ಸಂಪತ್ಭರಿತವಾಗಿದೆ. 8 ಜ್ಞಾನಪೀಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಒಂದು ಭಾಷೆ ನಿರಂತರವಾಗಿ ಬದಲಾವಣೆ ಹೊಂದುತಿರುತ್ತದೆ. ಆಧುನಿಕ ವಿಜ್ಞಾನ, ತಂತ್ರಜ್ಞಾನದೊಂದಿಗೆ ಭಾಷೆಯನ್ನು ಅಭಿವೃದ್ಧಿಪಡಿಸಬೇಕಿದೆ ಎಂದರು.
ಕನ್ನಡಿಗರು ಜಗತ್ತಿನ ಹಲವಾರು ದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸರ್ಟಿಫಿಕೇಟ್ ಕೊರ್ಸ್‌ಗಳ ಮೂಲಕ ವಿದೇಶದಲ್ಲಿ ನೆಲೆಸಿರುವ ಭಾರತೀಯರಿಗೆ ಕನ್ನಡ ಕಲಿಸುವ ನಿಟ್ಟಿನಲ್ಲಿ ಮನೆ, ಮನಮನಗಳಲ್ಲಿ ಹಚ್ಚೇವು ಕನ್ನಡದ ದೀಪ ಕಾರ‌್ಯಕ್ರಮವು ಉತ್ತಮವಾಗಿದೆ. ಕನ್ನಡ ಅಕ್ಯಾಡೆಮಿ ಲಾಭರಹಿತವಾಗಿ ಸೇವೆ ಸಲ್ಲಿಸುತ್ತಿದೆ. ಅನೇಕ ದೇಶಗಳ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಕಲಿಸುತ್ತಿದೆ. ಅಧಿಕೃತವಾಗಿ ಕನ್ನಡ ಕಲಿಸುವ ನಿಟ್ಟಿನಲ್ಲಿ ಮೈಸೂರು ವಿವಿಯೊಂದಿಗೆ ಸಂಯೋಜನೆ ಮಾಡಿಕೊಂಡಿದೆ ಎಂದು ತಿಳಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್.ನಾಗಭಾರಣ, ವಾಗ್ಮೀ ಪ್ರೊ.ಕೃಷ್ಣೇಗೌಡ, ಪ್ರಸಾರಾಂಗದ ನಿರ್ದೇಶಕ ಎನ್.ಎಂ.ತಳವಾರ್, ಕನ್ನಡ ಅಕಾಡೆಮಿ ಅಧ್ಯಕ್ಷ ಶಿವಗೌಡರ್ ಇತರರು ಹಾಜರಿದ್ದರು.