“ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಸರಕಾರ ಬದ್ಧ” : ಡಿಸಿಎಂ ಡಾ ಸಿ.ಎನ್.ಅಶ್ವತ್ಥನಾರಾಯಣ

ರಾಮನಗರ,ಜನವರಿ,26,2021(www.justkannada.in) : ರೈತರಿಗೆ ಪೂರಕವಾದ ಕೃಷಿ ಮತ್ತು ನೀರಾವರಿ ಯೋಜನೆಗಳನ್ನು ಕಾರ್ಯಗತ ಮಾಡುವ ವಿಷಯದಲ್ಲಿ ರಾಜ್ಯ ಸರಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಅದೇ ರೀತಿ, ಜಿಲ್ಲೆಯಲ್ಲಿ ಮೇಕೆದಾಟು ಯೋಜನೆಯನ್ನು ಶೀಘ್ರವೇ ಕೇಂದ್ರ ಸರ್ಕಾರದ ಅನುಮೋದನೆಯೊಂದಿಗೆ ಪ್ರಾರಂಭಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.jk72ನೇ ಗಣರಾಜ್ಯೋತ್ಸವ ದಿನ ಅಂಗವಾಗಿ ಇಂದು ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಲಭ್ಯವಿರುವ ವಿವಿಧ ಜಲ ಮೂಲಗಳಿಂದ ಶಾಶ್ವತ ಶುದ್ಧ ಕುಡಿಯುವ ನೀರನ್ನು ಗ್ರಾಮೀಣ ಭಾಗದ ಎಲ್ಲಾ ಮನೆಗಳಿಗೂ ಪೂರೈಸಲು ಒತ್ತು ನೀಡಲಾಗಿದೆ. ಇದಕ್ಕಾಗಿ 250 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಕಾಮಗಾರಿಗಳು ಜಿಲ್ಲೆಯಲ್ಲಿ ಪೂರ್ಣಪ್ರಮಾಣದಲ್ಲಿ ನಡೆಯುತ್ತಿವೆ ಎಂದರು.

ನಾಲ್ಕು ತಾಲ್ಲೂಕಿಗೆ ನೀರು : ಕಾವೇರಿ ನದಿಯ ಸತ್ತೆಗಾಲ ಅಣೆಕಟ್ಟೆಯಿಂದ ಗುರುತ್ವಾಕರ್ಷಣೆ ತಂತ್ರಜ್ಞಾನದ ಮೂಲಕ ಇಗ್ಗಲೂರು ಬ್ಯಾರೇಜಿಗೆ ನೀರು ಹರಿಸಿ, ಅಲ್ಲಿಂದ ಮೊಗೇನಹಳ್ಳಿ ಕೆರೆ, ಕಣ್ವ ಮತ್ತು ಮಂಚನಬೆಲೆ ಜಲಾಶಯಗಳಿಗೆ ಹಾಗೂ ವೈ.ಜಿ.ಗುಡ್ಡ ಕೆರೆಗೆ ನೀರನ್ನು ತುಂಬಿಸಲಾಗುವುದು. ನಾಲ್ಕು ತಾಲ್ಲೂಕುಗಳಿಗೆ ನೀರೊದಗಿಸುವ ಈ ಯೋಜನೆಯನ್ನು 540 ಕೋಟಿ ರೂ. ವೆಚ್ಚದಲ್ಲಿ ಕಾರ್ಯಗತ ಮಾಡಲಾಗುತ್ತಿದೆ. ಈಗಾಗಲೇ ಶೇ. 50ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು ಪ್ರಸಕ್ತ ವರ್ಷದ ಅಂತ್ಯಕ್ಕೆ ಈ ಯೋಜನೆ ಪೂರ್ಣಗೊಳ್ಳಲಿದೆ. ಈ ಮೂಲಕ ಜಿಲ್ಲೆಯ ಎಲ್ಲ ಮನೆಗಳಿಗೂ ಶಾಶ್ವತವಾಗಿ ನದಿ ನೀರನ್ನು ಪೂರೈಕೆ ಮಾಡಲಾಗುವುದು ಎಂದರು.

ಕುಡಿಯುವ ನೀರು : ಜಿಲ್ಲೆಯಲ್ಲಿ ಗ್ರಾಮೀಣ ಕುಡಿಯುವ ನೀರಿನ ಕಾಮಗಾರಿಗೆ ಆದ್ಯತೆ ನೀಡಿ ವಿವಿಧ ಕಾಮಗಾರಿಗಳನ್ನು ಚುರುಕು ಗೊಳಿಸಲಾಗಿದೆ. ಅದರಲ್ಲೂ, ಪ್ರಮುಖವಾಗಿ ಬಹುಗ್ರಾಮ ಕುಡಿಯುವ ನೀರಿನ ಸರಬರಾಜು ಯೋಜನೆಯಡಿ 210 ಕೋಟಿ ರೂ.ಗಳ ವೆಚ್ಚದಲ್ಲಿ ಕನಕಪುರ ತಾಲ್ಲೂಕಿನ ಕೋಡಿಹಳ್ಳಿ ಹಾಗೂ ಇತರೆ 298 ಹಳ್ಳಿಗಳಿಗೆ, 4 ಕೋಟಿ ರೂ.ಗಳ ವೆಚ್ಚದಲ್ಲಿ ಸಾತನೂರು ಹಾಗೂ ಇತರೆ 29 ಹಳ್ಳಿಗಳಿಗೆ ಹಾಗೂ 2 ಕೋಟಿ ರೂ.ಗಳ ವೆಚ್ಚದಲ್ಲಿ ಹಾರೋಹಳ್ಳಿ ಗ್ರಾಮಕ್ಕೆ ಕುಡಿಯುವ ನೀರಿನ ಸರಬರಾಜು ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಕೆರೆಗೆ ನೀರು : ಅರ್ಕಾವತಿ ಜಲಾಶಯದ ಹಿನ್ನೀರಿನಿಂದ ಕನಕಪುರ ತಾಲ್ಲೂಕಿನ ಗರಳಾಪುರ ಹಾಗೂ ಇನ್ನಿತರ 12 ಕೆರೆಗಳಿಗೆ ಎರಡು ಹಂತಗಳಲ್ಲಿ 70 ಕೋಟಿ ರೂ.ಗಳ ವೆಚ್ಚದಲ್ಲಿ ನೀರು ತುಂಬಿಸಲಾಗುವುದು. ಭೂಸ್ವಾಧೀನದ ಸಮಸ್ಯೆ ಪರಿಹರಿಸಿಕೊಂಡು ಕಾಮಗಾರಿಯನ್ನು ಚುರುಕುಗೊಳಿಸಲಾಗುತ್ತಿದೆ. ಮಾಗಡಿ ತಾಲ್ಲೂಕಿನಲ್ಲಿರುವ 66 ಕೆರೆಗಳನ್ನು ತುಂಬಿಸಿ 211 ಗ್ರಾಮಗಳಿಗೆ ನೀರು ಪೂರೈಸುವ ಶ್ರೀರಂಗ ಏತ ನೀರಾವರಿ ಯೋಜನೆಯಡಿ ಹೇಮಾವತಿ ನದಿಯಿಂದ ನೀರು ತರಲಾಗುತ್ತಿದೆ. ಒಟ್ಟು 450 ಕೋಟಿ ರೂ.ಗಳ ವೆಚ್ಚದ ಯೋಜನೆಗಾಗಿ ಈಗಾಗಲೇ 277 ಕೋಟಿ ರೂ.ಗಳು ಬಿಡುಗಡೆಯಾಗಿದೆ. ಜೊತೆಗೆ, 173 ಕೋಟಿ ರೂ.ಗಳ ಹೆಚ್ಚುವರಿ ಅನುದಾನ ಬಿಡುಗಡೆ ಆಗಲಿದೆ. ಇದುವರೆಗೆ 175 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದ್ದು, ಪ್ರಸಕ್ತ ವರ್ಷದ ಅಂತ್ಯದೊಳಗೆ ಈ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದರು.

ಚನ್ನಪಟ್ಟಣ ತಾಲ್ಲೂಕಿನ ಮಳೂರಿಗೆ ಸೇರಿದ ಮಾಕಳಿ, ಹೊಸಹಳ್ಳಿ, ಕೃಷ್ಣಾಪುರ ಹಾಗೂ ಇತರ ಸುತ್ತಮುತ್ತಲ ಗ್ರಾಮಗಳಿಗೆ ಕುಡಿಯವ ನೀರು ಹಾಗೂ ಅಂತರ್ಜಲ ಅಭಿವೃದ್ಧಿಪಡಿಸಲು ಮತ್ತು ಹದಿನೆಂಟು ಕೆರೆಗಳನ್ನು ತುಂಬಿಸುವ ಕಣ್ವ ಜಲಾಶಯದಿಂದ ನೀರೆತ್ತುವ ಏತ ನೀರಾವರಿ ಯೋಜನೆಯ 28,85 ಕೋಟಿ ರೂ.ಗಳ ಮೊತ್ತದ ಟೆಂಡರ್ ಕಾಮಗಾರಿಗಳು ಪ್ರಗತಿಯಲ್ಲಿವೆ. ಪ್ರಸಕ್ತ ವರ್ಷದ ಅಂತ್ಯಕ್ಕೆ ಯೋಜನೆ ಪೂರ್ಣಗೊಳ್ಳಲಿದೆ. ಪ್ರಸಕ್ತ ಗರಕಹಳ್ಳಿ ಮತ್ತು ಕಣ್ವ ಕುಡಿಯುವ ನೀರಿನ ಯೋಜನೆಯಿಂದ ಚನ್ನಪಟ್ಟಣದ 120 ಕೆರೆಗಳನ್ನು ತುಂಬಿಸಲಾಗುತ್ತಿದೆ. ಕಣ್ವ ಜಲಾಶಯದ ಕಾಲುವೆಗಳ ಆಧುನೀಕರಣದ 40 ಕೋಟಿ ರೂ.ಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು. Irrigation-projects-implementation-Government-bound-DCM Dr.C.N.Ashwatthanarayanaಕೆರೆ ಪುನಶ್ಚೇತನ 110 ಕೋಟಿ ರೂ.ಗಳ ವೆಚ್ಚದಲ್ಲಿ ಬೈರಮಂಗಲ ಕೆರೆಯ ಪುನಶ್ಚೇತನ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು ಈ ಪೈಕಿ ಶೇ. 50ರಷ್ಟು ಕಾಮಗಾರಿ ಪೂರ್ಣಗೊಂಡಿದೆ. 252 ಕೋಟಿ ರೂ.ಗಳ ವೆಚ್ಚದಲ್ಲಿ ನಾರಾಯಣಪುರ, ಗರಳಪುರ ಮತ್ತು ಸಾತನೂರು ಏತ ನೀರವಾರಿ ಯೋಜನೆಗಳಿಂದ ಕೆರೆ ತುಂಬಿಸುವ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿವೆ ಎಂದು ಉಪಮುಖ್ಯಮಂತ್ರಿಗಳು ತಿಳಿಸಿದರು.

key words : Irrigation-projects-implementation-Government-bound-DCM Dr.C.N.Ashwatthanarayana