ಸಿದ್ಧಗಂಗಾ ಮಠ ಸೇರಿ ಹಲವು ಸಂಘಸಂಸ್ಥೆಗಳಿಗೆ ನೀಡುತ್ತಿದ್ದ ಅಕ್ಕಿ, ಗೋಧಿಗೆ ಕತ್ತರಿ: ದಾಸೋಹ ಯೋಜನೆ ಸ್ಥಗಿತಕ್ಕೆ ಮಾಜಿ ಸಚಿವ ಯುಟಿ ಖಾದರ್ ಆಕ್ರೋಶ…

ಬೆಂಗಳೂರು,ಫೆ,4,2020(www.justkannada.in): ಹಿಂದಿನ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಯೋಜನೆಗಳನ್ನ ಬಿಜೆಪಿ ಸರ್ಕಾರ ರದ್ದುಗೊಳಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿರುವ ಬೆನ್ನಲ್ಲೆ ಇದೀಗ ದಾಸೋಹ ಯೋಜನೆಯನ್ನ ಸ್ಥಗಿತಗೊಳಿಸಿದೆ ಎಂಬ ಆರೋಪ ಕೇಳಿ ಬಂದಿದೆ.

ದಾಸೋಹ ಯೋಜನೆ ಸ್ಥಗಿತಗೊಳಿಸಿರುವ ಕುರಿತು ಮಾಜಿ ಸಚಿವ ಯು.ಟಿ ಖಾದರ್ ದಾಖಲೆ ಬಿಡುಗಡೆ ಮಾಡಿ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ. ಈ ವೇಳೆ ಮಾತನಾಡಿದ ಮಾಜಿ ಸಚಿವ ಯು.ಟಿ.ಖಾದರ್, ಉಚಿತ ಊಟ, ವಸತಿ ನೀಡುವ ಸಂಘಸಂಸ್ಥೆಗಳಿಗೆ ದಾಸೋಹ ಯೋಜನೆ  ಅನ್ವಯವಾಗುತ್ತಿತ್ತು. ಸುಮಾರು 454 ಸಂಘಸಂಸ್ಥೆಗಳು ಈ ಯೋಜನೆಯ ಪ್ರಯೋಜನ ಪಡೆದಿದ್ದವು.  ಸುಮಾರು ಸಾವಿರಾರು ಜನ ಫಲಾನುಭವಿಗಳಾಗಿದ್ದರು. ಆದರೆ ಈಗ ಈ ಯೋಜನೆಯನ್ನ ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿದೆ. ಬಿಜೆಪಿ ಸರ್ಕಾರಕ್ಕೆ ಕರುಣೆಯೇ ಇಲ್ಲ ಎಂದು ಕಿಡಿಕಾರಿದರು.

ಯೋಜನೆಯಡಿ  ಆಹಾರ  ಇಲಾಖೆಯಿಂದ ಸಿದ್ಧಗಂಗಾ ಮಠಕ್ಕೆ ಸುಮಾರು 7359 ವಿದ್ಯಾರ್ಥಿಗಳ ಊಟಕ್ಕೆ ಅಕ್ಕಿ ಮತ್ತು ಗೋಧಿ  ನೀಡಲಾಗುತ್ತಿತ್ತು. ಆದರೆ ಆರ್ಥಿಕ ಹೊರೆ ನೆಪ ಹೇಳಿ ಈ ಯೋಜನೆಗೆ ಸರ್ಕಾರ ಕತ್ತರಿ ಹಾಕಿದೆ. ಅಂದು ಕಾಂಗ್ರೆಸ್ ಸರ್ಕಾರದ ವೇಳೆ ಶ್ರೀರಾಮ ಶಾಲೆಗೆ ಅಕ್ಕಿ ನಿಲ್ಲಿಸಿದ್ರು ಅಂತ ಬಿಜೆಪಿ ನಾಯಕರು ರಮಾನಾಥ್ ರೈ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದರು. ಈಗ ಅನ್ನದಾಸೋಹ ಯೋಜನೆಯನ್ನು ಸಂಪೂರ್ಣ ರದ್ದು ಮಾಡಿದ್ದಾರೆ. ದಾಸೋಹ ಯೋಜನೆ ರದ್ದು ಪಡಿಸಿದ್ದರಿಂದ ತೊಂದರೆಯಾಗುತ್ತಿದೆ ಎಂದು  ಹರಿಹಾಯ್ದರು.

Key words: Rice -wheat -Siddhaganga Math- dasoha project- Former minister -UT Khadar- outrage