ಆಸ್ಪತ್ರೆಗೆ ಭೇಟಿ ನೀಡಿ ತನ್ವೀರ್ ಸೇಠ್ ಆರೋಗ್ಯ ವಿಚಾರಿಸಿದ ಗೃಹ ಸಚಿವ ಬಸವರಾಜು ಬೊಮ್ಮಾಯಿ: ತನಿಖೆಯ ಬಗ್ಗೆ ಪ್ರತಿಕ್ರಿಯಿಸಿದ್ದು ಹೀಗೆ…?

ಮೈಸೂರು,ನ,20,2019(www.justkannada.in): ತನ್ವೀರ್ ಸೇಠ್ ಆರೋಗ್ಯದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಕೊಲೆ ಯತ್ನ ಪ್ರಕರಣದ ಬಂಧಿತ ಆರೋಪಿ ಪಿಎಫ್ ಐ ಮತ್ತು ಎಸ್ ಡಿ ಪಿ ಐ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು.

ಇಂದು ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಭೇಟಿ ನೀಡಿದ ಗೃಹಸಚಿವ ಬಸವರಾಜು ಬೊಮ್ಮಾಯಿ ತನ್ವೀರ್ ಸೇಠ್ ಆರೋಗ್ಯ ವಿಚಾರಿಸಿ ತನ್ವೀರ್ ಸೇಠ್ ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಬಳಿಕ ಮಾತನಾಡಿದ ಅವರು, ತನ್ವೀರ್ ಸೇಠ್ ಆರೋಗ್ಯದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ತನ್ವೀರ್ ಸೇಠ್ ಇಂದು ಬೆಳಗ್ಗೆ ವಾರ್ಡ್ ನಲ್ಲಿ ವಾಕಿಂಗ್ ಮಾಡಿದ್ದಾರೆ, ಉಸಿರಾಟವೂ ಚೆನ್ನಾಗಿದೆ. ಬೆಳಿಗ್ಗೆ ಚೇರ್ ನಲ್ಲಿ ಕುಳಿತು ತಿಂಡಿ ತಿಂದಿದ್ದಾರೆ. ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದರು.

ತನಿಖಾ ಪ್ರಗತಿ ಬಗ್ಗೆ ಮಾಹಿತಿ  ನೀಡಿದ ಸಚಿವ ಬಸವರಾಜ ಬೊಮ್ಮಾಯಿ, ಬಂಧಿತ ಆರೋಪಿ ಪಿಎಫ್ ಐ ಮತ್ತು ಎಸ್ ಡಿ ಪಿ ಐ ಸಂಘಟನೆಯಲ್ಲಿ ಸಕ್ರಿಯನಾಗಿದ್ದ. ಪೊಲೀಸ್ ತನಿಖೆಯಲ್ಲಿ ಇದು ಸ್ಪಷ್ಟವಾಗಿದೆ. ಸೈದ್ದಾಂತಿಕ ಭಿನ್ನಾಭಿಪ್ರಾಯ, ರಾಜಕೀಯ ಪೈಪೋಟಿ ಮತ್ತು ರಾಜಕೀಯ ಅಸ್ಥಿತ್ವಕ್ಕಾಗಿ ನಡೆದಿರುವ ಹತ್ಯೆ ಯತ್ನ ಇದು. ಪ್ರಾಥಮಿಕ ತನಿಖೆಯಲ್ಲಿ ಈ ಎಲ್ಲಾ ಅಂಶಗಳು ಸ್ಪಷ್ಟವಾಗಿದೆ. ಇನ್ನು ಎರಡು ದಿನದಲ್ಲಿ ತನಿಖೆ ಸಂಪೂರ್ಣ ಮುಕ್ತಾಯವಾಗಲಿದೆ ಎಂದರು.

ರಾಜು ಹತ್ಯೆ ಮತ್ತು ಬೆಂಗಳೂರಿನಲ್ಲಿ ನಡೆದು ಕೆಲವು ಹತ್ಯೆ ಪ್ರಕರಣಕ್ಕೂ ಈ ಹತ್ಯೆ ಯತ್ನ ಪ್ರಕರಣಕ್ಕೂ ಲಿಂಕ್ ಇದ್ದಂತೆ ಇದೆ. ಆ ದೃಷ್ಟಿಯಿಂದ ತನಿಖೆಯು ಚುರುಕಾಗಿದೆ. ತನಿಖೆ ಮುಗಿದ ಮೇಲೆ ಎಲ್ಲಾ ಅಂಶ ಸತ್ಯವಾಗಿದ್ದರೆ ಅಂತಹ ಸಂಘಟನೆ ಬ್ಯಾನ್ ಬಗ್ಗೆಯು ಚಿಂತನೆ ಮಾಡುತ್ತೇವೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ತನಿಖೆ ಮೇಲೆ ಗೃಹ ಸಚಿವ ಪುತ್ರನ ಒತ್ತಡದ ಆರೋಪ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಇದೆಲ್ಲಾ ಸುಳ್ಳು ಸುದ್ದಿ. ನನ್ನ ಮಗನಿಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ಖುದ್ದಾಗಿ ನಾನೆ ಪ್ರಕರಣದ ತನಿಖೆಯನ್ನು ಅತ್ಯಂತ ಕಠಿಣವಾಗಿ ಮಾಡಿ ಅಂತ ಆದೇಶ ಮಾಡಿದ್ದೇನೆ. ನಾನು ಕ್ರಿಕೆಟಿಗ ನನ್ನ ಮಗನೂ ಕ್ರಿಕೆಟಿಗ  ಹೀಗಂದ ಮಾತ್ರಕ್ಕೆ ಈ ರೀತಿ ಆರೋಪ ಮಾಡುವುದು ಸರಿಯಲ್ಲ. ನನ್ನ ಮಗ ಒತ್ತಡ ಹಾಕಿದ್ದಾನೋ ಇಲ್ಲವೋ ಎಂಬುದನ್ನು ಪೊಲೀಸರನ್ನೆ ಬೇಕಾದರೆ ಕೇಳಿ ಎಂದು ಸ್ಪಷ್ಟನೆ ನೀಡಿದರು.

Key words: Home Minister -Basavaraj Bommai – visit- hospital­ – Tanveer Seth’s- health