ಬೆಂಗಳೂರು, ನವೆಂಬರ್,7,2026 (www.justkannada.in): ಬೆಂಗಳೂರಿನಲ್ಲಿ ಬೆಂಗಳೂರು ನಗರಾಭಿವೃದ್ದಿ ಸಚಿವ ಕೃಷ್ಣಭೈರೇಗೌಡರ ಮುಂದೆಯೇ ಬಿಜೆಪಿ ಶಾಸಕ ಬೈರತಿ ಬಸವರಾಜ್ ಮತ್ತು ಕಾಂಗ್ರೆಸ್ ಮಾಜಿ ಎಂಎಲ್ ಸಿ ನಾರಾಯಣಸ್ವಾಮಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ನಡೆದಿದೆ.
ವೈಟ್ಫೀಲ್ಡ್ ಸಮೀಪದ ಟಿನ್ ಫ್ಯಾಕ್ಟರಿ ಬಳಿ ನಡೆದ ವಾರ್ಡ್ ಒನ್ ಕಾರ್ಯಕ್ರಮದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡರ ಮುಂದೆಯೇ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ನಡುವೆ ತೀವ್ರ ವಾದ ವಾಗ್ವಾದ ಗಲಾಟೆ ನಡೆದಿದೆ. ವಾರ್ಡ್ ಗಳ ಅಭಿವೃದ್ಧಿ ಮತ್ತು ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜಿಬಿಎ ವ್ಯಾಪ್ತಿಯಲ್ಲಿ ಒನ್ ವಾರ್ಡ್ ಅಭಿಯಾನ ನಡೆಯುತ್ತಾ ಇದೆ. ಮೊದಲ ಹಂತದ ಅಭಿಯಾನದಲ್ಲಿ 43 ವಾರ್ಡ್ ಗಳನ್ನ ಅಭಿವೃದ್ಧಿ ಮಾಡಿದ್ದಾರೆ. ಇಂದು 2ನೇ ಹಂತದ ವಾರ್ಡ್ ಒನ್ ಅಭಿಯಾನಕ್ಕೆ ಸಚಿವ ಕೃಷ್ಣಬೈರೇಗೌಡ ಕೆ.ಆರ್ ಪುರಂ ಕ್ಷೇತ್ರದ ಟಿನ್ ಫ್ಯಾಕ್ಟರಿ ಬಳಿ ಚಾಲನೆ ನೀಡಿದರು. ವಾರ್ಡ್ ಒನ್ ಅಭಿಯಾನಕ್ಕೆ ಚಾಲನೆ ನೀಡುವ ವೇಳೆ ಕೆ.ಆರ್ ಪುರಂ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಮತ್ತು ಎಂಎಲ್ ಸಿ ನಾರಾಯಣಸ್ವಾಮಿ ನಡುವೆ ಗಲಾಟೆ ಆಗಿದೆ.
ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬುದು ಕಾಂಗ್ರೆಸ್ ಕಾರ್ಯಕರ್ತರ ಆರೋಪ ಪ್ರಮುಖ ಆಕ್ರೋಶಕ್ಕೆ ಕಾರಣವಾಗಿತ್ತು. ಬಿಜೆಪಿ ಶಾಸಕರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದು ಗಲಾಟೆ ಶುರುವಾಯಿತು.
ರಸ್ತೆಗುಂಡಿ ಮುಚ್ಚಿಲ್ಲ ಎಂದು ಮೂಲಭೂತ ಸಮಸ್ಯೆಗಳ ಬಗ್ಗೆ ಸಚಿವರಿಗೆ ಸ್ಥಳೀಯರು ದೂರು ನೀಡಲು ಮುಂದಾದರು. ಈ ವೇಳೆ ನಾರಾಯಣ ಸ್ವಾಮಿ ಸ್ಥಳೀಯರಿಗೆ ಶಾಸಕರು ಏನು ಕೆಲಸ ಮಾಡಿಲ್ಲ ಎಂದು ಹೇಳಿದ್ದು ಈ ವೇಳೆ ಮಧ್ಯೆ ಪ್ರವೇಶಿಸಿದ ಶಾಸಕ ಬೈರತಿ ಬಸವರಾಜ್ ನಡುವೆ ಗಲಾಟೆ ಆಗಿದೆ. ಕೈ ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ಆಗಿ ಪೊಲೀಸರು ಮಧ್ಯೆ ಪ್ರವೇಶಿಸಿ ಗಲಾಟೆ ನಿಲ್ಲಿಸಿದರು.






