ಮೈಸೂರು,ಅಕ್ಟೋಬರ್,28,2026 (www.justkannada.in): ಮೈಸೂರು ಅರಮನೆ ಸರ್ಕಾರದ ಆಸ್ತಿ. ನಾನು ನನ್ನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ಕ್ಷಮೆ ಕೇಳುವ ಪ್ರಮೇಯವೇ ಇಲ್ಲ ಎಂದು ಹೇಳುವ ಮೂಲಕ ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ, ಈ ಕುರಿತು ನಾನು ವಿಚಾರವನ್ನು ಸ್ಪಷ್ಟಪಡಿಸಿದ್ದೇನೆ. ಅದನ್ನೇ ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಈ ವಿಚಾರದಲ್ಲಿ ನಾನು ಯಾವುದೇ ತಪ್ಪೆಸಗಿಲ್ಲ. ರಾಜಮನೆತನದವರ ಜೊತೆ ಮುಖ್ಯಮಂತ್ರಿಗಳೇ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಹಾಗಾಗಿ ನಾನು ಹೋಗಿ ಮಾತನಾಡುವ ಅಗತ್ಯತೆ ಇಲ್ಲ. ಅಂಬಾರಿ, ಅರಮನೆ ವಿಚಾರದಲ್ಲಿ ನಾನು ತಪ್ಪಾಗಿ ಮಾತನಾಡಿಲ್ಲ. ಅರಮನೆ ಸ್ವಾಧೀನ ಕಾಯ್ದೆ ಪ್ರಕಾರವೇ ನಾನು ಮಾತನಾಡಿದ್ದೇನೆ. ಈ ವಿಚಾರವನ್ನು ತಪ್ಪಾಗಿ ಅರ್ಥೈಸಿ ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ. ನಾನು ಪ್ರಜ್ಞಾಪೂರ್ವಕವಾಗಿ ಮಾತನಾಡಿದ್ದೇನೆ. ತಪ್ಪಾಗಿದ್ದರೇ ಕ್ಷಮೆ ಕೇಳಬಹುದಿತ್ತು. ನಾನು ಯಾವುದೇ ತಪ್ಪು ಎಸಗಿಲ್ಲ ಕ್ಷಮೆ ಕೇಳಲ್ಲ. ಸರ್ಕಾರಿ ಕಾರ್ಯಕ್ರಮ ಏಳು ದಿನ ಮಾಡಿ.ಅಂಬಾರಿ ಕೊಡಲ್ಲ ಎಂದು ಪತ್ರ ಬರೆದಿದ್ದರು. ಆ ಪತ್ರಕ್ಕೆ ನಾನು ಪ್ರತಿಕ್ರಿಯೆ ನೀಡಿದ್ದೇನೆ. ಅಂಬಾರಿ ಇಲ್ಲದೇ ಜಂಬೂಸವಾರಿ ಮಾಡಲಾಗಲ್ಲ. ಇದು ಪ್ರಜಾಪ್ರಭುತ್ವ. ಈಗಿರುವುದು ಜನರ ಸರ್ಕಾರ. ಜನರಿಗಾಗಿ ನಾವು ದಸರಾ ಮಾಡುತ್ತೇವೆ. ನನ್ನ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಎಂದರು.
ರಾಜಮನೆತನಕ್ಕೆ ನಾವು ಹಿಂದಿನಿಂದಲೂ ಗೌರವ ನೀಡುತ್ತಿದ್ದೇವೆ. ನಾಲ್ವಡಿ ಅವರು ಸಾಮಾಜಿಕ ನ್ಯಾಯದ ಚಾಂಪಿಯನ್. ನಾವು ಅದೇ ರೀತಿಯಲ್ಲಿ ರಾಜಕಾರಣ ಮಾಡಿದ್ದೇವೆ. ಈಗ ಪ್ರಜಾಪ್ರಭುತ್ವದಲ್ಲಿ ಸಂವಿಧಾನಕ್ಕೆ ಸುಪ್ರೀಂ. ರಾಣಿಯವರ ಪತ್ರಕ್ಕೆ ನಾನು ಪ್ರತಿಕ್ರಿಯೆ ನೀಡಿದ್ದೇನೆ.. ನಾವು ಅವರಿಗೆ ಯಾವುದೇ ಅವಮಾನ ಮಾಡಿಲ್ಲ. ರಥೋತ್ಸವದ ದಿನ ಜಂಬೂಸವಾರಿ ನಡೆಸಲು ಸಾಧ್ಯವಿಲ್ಲ. ಬಾಡಿಗೆ ಕೊಟ್ಟು ನಾವು ಅಂಬಾರಿ ಪಡೆಯುತ್ತಿದ್ದೇವೆ. ರಥೋತ್ಸವ, ಅಂಬಾರಿ ವಿಚಾರಕ್ಕೆ ರಿಯಾಕ್ಷನ್ ನೀಡಿದ್ದೆ. ರಾಜಮನೆತನ- ಸರ್ಕಾರ ಒಟ್ಟಿಗೆ ಕೆಲಸ ಮಾಡಬೇಕು ಎಂದರು.
ಈ ಚುನಾವಣೆಯ ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿ ಆಗುವುದಿಲ್ಲ.
ವಿಧಾನ ಪರಿಷತ್ ಚುನಾವಣೆವಲ್ಲಿ ನಾಲ್ಕು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸೋಲು ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಯತೀಂದ್ರ ಸಿದ್ದರಾಮಯ್ಯ, ನಾಲ್ಕು ಚುನಾವಣೆಯಲ್ಲಿ ಸೋಲಾಗಿದೆ. ಈ ಚುನಾವಣೆಯ ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿ ಆಗುವುದಿಲ್ಲ. ನಮಗೆ ಆಗಿರುವ ಸೋಲನ್ನು ನಾವು ಆತ್ಮಲೋಕನ ಮಾಡಿಕೊಳ್ಳುತ್ತೇವೆ. ಮುಂದಿನ ಚುನಾವಣೆಯ ಮೇಲೆ ಏನೂ ಪರಿಣಾಮ ಬೀರುವುದಿಲ್ಲ.ಸಿದ್ದರಾಮಯ್ಯ ಅವರು ರಾಜೀನಾಮೆ ಕೊಟ್ಟಿದ್ದು ಮತ್ತೆ ಸ್ಟಿಂಗ್ ವಿಚಾರಕ್ಕೆ ಏನೂ ಸೋಲು ಆಗಿಲ್ಲ. ಸೋಲಾಗಿದಕ್ಕೆ ಕಾರಣ ಏನಿದೆ ಎಂಬುದನ್ನ ನಾವು ಚರ್ಚೆ ಮಾಡ್ತೇವೆ ಎಂದರು.
ಸ್ಟಿಂಗ್ ವಿಚಾರದಲ್ಲಿ ತಂದೆಯವರು ಅಸಮಾಧಾನಗೊಂಡಿಲ್ಲ.
ಸ್ಟಿಂಗ್ ವಿಚಾರದಲ್ಲಿ ತಂದೆಯವರು ಅಸಮಾಧಾನಗೊಂಡಿಲ್ಲ. ತನಿಖೆ ಸರಿಯಾಗಿ ಆಗುತ್ತಿದೆ. ಪೊಲೀಸರ ಮೇಲೆ ಸಂಪೂರ್ಣ ನಂಬಿಕೆ ಇದೆ. ಪಾರದರ್ಶಕ ತನಿಖೆ ಮುಗಿಯುವ ತನಕ ಮಾತನಾಡಲ್ಲ. ಸ್ಟಿಂಗ್ ವಿಡಿಯೋದಲ್ಲಿ ಕೃಪಾ ಆಳ್ವಾ ಇದ್ದಾರೆ. ಕೃಪಾ ಆಳ್ವಾರನ್ನ ಬಂಧಿಸಿ, ವಿಚಾರಣೆ ಮಾಡಬೇಕು. ತನಿಖೆ ಸರಿಯಾಗಿ ನಡೆಯಬೇಕಾದರೆ ಅವರನ್ನ ಬಂಧಿಸಬೇಕು ಎಂದು ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.






