ಮೈಸೂರು,ಅಕ್ಟೋಬರ್,10,2026 (www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು ಈ ಹಿನ್ನೆಲೆಯಲ್ಲಿ ಅಂತಿಮ ಹಂತದ ಸಿದ್ದತೆಗಳು ನಡೆಯುತ್ತಿದೆ.
ಚಾಮುಂಡಿ ಬೆಟ್ಟದಲ್ಲಿ ನಾಳೆ ಬೆಳಿಗ್ಗೆ 11.50 ರಿಂದ 12.5 ನಿಮಿಷದ ಒಳಗೆ ಕೊಪ್ಪಳದ ಗವಿಮಠದ ಗವಿಸಿದ್ದೇಶ್ವರ ಶ್ರೀಗಳು ದಸರಾ ಉದ್ಘಾಟನೆ ಮಾಡಲಿದ್ದು ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಚಾಮುಂಡೇಶ್ವರಿ ದೇವಾಲಯದಲ್ಲಿ ಶುಚಿಕಾರ್ಯ ನಡೆಸಲಾಗುತ್ತಿದ್ದು, ದೇವಾಲಯದ ಹೊರಗಡೆ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಸಂಜೆ ವೇಳೆ ವೇದಿಕೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ.
ಚಾಮುಂಡಿ ಬೆಟ್ಟದಲ್ಲಿ ಅಂತಿಮ ಹಂತದ ಸಿದ್ದತೆಯನ್ನ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಪರಿಶೀಲನೆ ನಡೆಸಿದರು. ವೇದಿಕೆ ಮುಂಭಾಗ 2 ಸಾವಿರಕ್ಕೂ ಹೆಚ್ಚಿನ ಆಸನದ ವ್ಯವಸ್ಥೆ ಮಾಡಲಾಗಿದ್ದು, ಈ ಬಾರಿ ದಸರಾಗೆ ಎಲ್ಲಾ ಧರ್ಮದ ಪ್ರಮುಖ ಶ್ರೀಗಳು ಅಗಮನ ಹಿನ್ನಲೆ ಜಿಲ್ಲಾಡಳಿತವು ಶ್ರೀಗಳಿಗೆ ವಿಶೇಷ ಆಸನದ ವ್ಯವಸ್ಥೆ ಮಾಡಿದೆ. 
ಅಂತಿಮ ಹಂತದ ಸಿದ್ದತೆ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ, ನಾಳೆ ಮುಖ್ಯಮಂತ್ರಿಗಳು ಸೇರಿದಂತೆ ಅನೇಕ ಗಣ್ಯರು ದಸರಾಗೆ ಬರುತ್ತಿದ್ದಾರೆ. ಈಗಾಗಲೇ ಚಾಮುಂಡಿ ಬೆಟ್ಟದಲ್ಲಿ ಅಂತಿಮ ಹಂತದ ಸಿದ್ದತೆಗಳು ನಡೆಯುತ್ತಿದೆ. ಬೆಟ್ಟದ ಮೇಲೆ ಸುಮಾರು 2 ಸಾವಿರ ಜನಕ್ಕೆ ಆಸನದ ವ್ಯವಸ್ಥೆಯನ್ನು ಮಾಡಲಾಗಿದೆ. ರಾಜ್ಯದ ಅನೇಕ ಮಠದ ಸುಮಾರು 200ಕ್ಕೂ ಹೆಚ್ಚು ಮಠಾಧೀಶರು ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿಲಿದ್ದಾರೆ. ಎಲ್ಲಾ ಮಠಾಧೀಶರಿಗೆ ವಿಶೇಷ ಆಸನದ ವ್ಯವಸ್ಥೆಯನ್ನು ಮಾಡಲಾಗಿದೆ. ದಸರಾಗೆ ಬೇಕಾದ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿಕೊಂಡಿದೆ ಎಂದು ತಿಳಿಸಿದರು.






