ಮೈಸೂರು,ಅಕ್ಟೋಬರ್,9,2026 (www.justkannada.in): ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ತಮಿಳುನಾಡಿಗೆ ಮುಂದಿನ 15 ದಿನಗಳವರೆಗೆ ನಿತ್ಯ 3 ಸಾವಿರ ಟಿಎಂಸಿ ನೀರು ಹರಿಸುವಂತೆ ಆದೇಶಿಸಿರುವುದು ಅವೈಜ್ಞಾನಿಕವಾಗಿದ್ದು, ಇದು ರಾಜ್ಯದ ಜನರ ಮೂಲಭೂತ ಹಕ್ಕನ್ನು ಕಸಿಯುವ ಆದೇಶವಾಗಿದೆ ಎಂದು ನಗರ ಕಾಂಗ್ರೆಸ್ ಉಪಾಧ್ಯಕ್ಷ ಕೆ.ವಿ. ಮಲ್ಲೇಶ್ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ಮೂಲಕ ಪ್ರತಿಕ್ರಿಯಿಸಿರುವ ಕೆ.ವಿ ಮಲ್ಲೇಶ್, ರಾಜ್ಯದಲ್ಲಿ ಈಗಾಗಲೇ ಬರ ಆವರಿಸಿದೆ. ಕೆಂದ್ರ ಸರಕಾರ ಕೂಡ ರಾಜ್ಯದ ಅನೇಕ ಪ್ರದೇಶಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ. ಈ ಪ್ರದೇಶಗಳಲ್ಲಿ ಕಾವೇರಿ ಕೊಳ್ಳವೂ ಸೇರಿದೆ. ಕಾವೇರಿ ಉಗಮ ಸ್ಥಾನವಾದ ತಲಕಾವೇರಿಯಲ್ಲಿಯೇ ಈ ಬಾರಿ ವಾಡಿಕೆ ಮಳೆಯಾಗದಿರುವುದು ಅತ್ಯಂತ ಗಮನಾರ್ಹ. ಮಾತ್ರವಲ್ಲದೇ ಕೊಡಗು, ಮೈಸೂರು, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ವಾಡಿಕೆ ಮಳೆಯಿರಲಿ ಅದರ ಕಾಲುಭಾಗವೂ ಮಳೆಯಾಗಿಲ್ಲ. ಇದರಿಂದ ಕೆರೆಕಟ್ಟೆಗಳು ಒಣಗುತ್ತಿವೆ. ಜಲಾಶಯ, ನದಿಯಲ್ಲಿನ ನೀರಿನ ಪ್ರಮಾಣ ತೀವ್ರವಾಗಿ ಕುಸಿದಿದೆ. ಜನರಿಗಿರಲಿ, ಪ್ರಾಣಿ, ಪಕ್ಷಿಗಳೂ ನೀರಿಲ್ಲದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಪ್ರಸ್ತುತ ಕೃಷ್ಣರಾಜ ಸಾಗದ ಅಣೆಕಟ್ಟೆ 102 ಅಡಿಗೆ ಕುಸಿದಿದೆ. ಇದೇ ನೀರನ್ನು ಮೈಸೂರು, ಮಂಡ್ಯ, ಬೆಂಗಳೂರಿನ ಜನ ಅವಲಂಬಿಸಿದ್ದಾರೆ. ಇದೇ ನೀರನ್ನು ಮುಂದಿನ ಮೇವರೆಗೂ ಬಳಸಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶ ಅತ್ಯಂತ ಜವಾಬ್ದಾರಿರಹಿತವಾಗಿದೆ ಎಂದು ಕಿಡಿಕಾರಿದರು.
ಕೇಂದ್ರ ಸರಕಾರದ ಜಾಣ ಮೌನ ಸರಿಯಲ್ಲ:
ಒಂದೆಡೆ ಬರ ಪೀಡಿತ ಪ್ರದೇಶಗಳನ್ನು ಘೋಷಣೆ ಮಾಡುತ್ತಿರುವ ಕೇಂದ್ರ ಸರಕಾರ ಮತ್ತೊಂದೆಡೆ ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ಎಲ್ಲವನ್ನೂ ಪ್ರಾಧಿಕಾರದ ಹೆಗಲಿಗೆ ಹಾಕಿ ಜಾಣ ಮೌನ ವಹಿಸುತ್ತಿರುವುದು ಸರಿಯಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ರಾಜ್ಯಗಳ ನಡುವೆ ಭಿನ್ನಾಭಿಪ್ರಾಯ ಉಂಟಾದಾಗ ಅವುಗಳನ್ನು ನಿವಾರಿಸಬೇಕಾದ ಗುರುತರ ಹೊಣೆ ಕೇಂದ್ರ ಸರಕಾರದ್ದು, ಆದರೆ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ತೋರಿಸುತ್ತಿರುವ ಅಸಡ್ಡೆ ಸರಿಯಲ್ಲ. ಎರಡೂ ರಾಜ್ಯಗಳ ವಾಸ್ತವ ಪರಿಸ್ಥಿತಿಯನ್ನು ತಿಳಿದು ಎರಡೂ ರಾಜ್ಯಗಳಿಗೂ ಅನ್ಯಾಯವಾಗದಂತೆ ಇರುವ ನೀರನ್ನು ಕುಡಿಯಲು ಬಳಸುವುದಕ್ಕೆ ಪ್ರಥಮ ಆದ್ಯತೆ ನೀಡಿ ಹಂಚಿಕೆ ಮಾಡಬೇಕು. ಆದರೆ, ಮೋದಿ ಸರಕಾರ ಎರಡು ರಾಜ್ಯಗಳ ವೈಮನಸ್ಸುನ್ನು ತಣಿಸುವುದು ಬಿಟ್ಟು ಪ್ರಾಧಿಕಾರದ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಬಾರದು ಎಂದು ಕೆ.ವಿ ಮಲ್ಲೇಶ್ ವಾಗ್ದಾಳಿ ನಡೆಸಿದ್ದಾರೆ.
ಪ್ರಾಣಿಗಳಿಗೂ ಬೇಕು ನೀರು:
ರಾಜ್ಯದ ಜಲಾಶಗಳಲ್ಲಿರುವ ನೀರು ಕೇವಲ ರಾಜ್ಯದ ಜನರಿಗೆ ಮಾತ್ರವಲ್ಲ. ಅದರಲ್ಲಿ ಪ್ರಾಣಿಗಳಿಗೂ ಪಾಲು ನೀಡಬೇಕು ಎಂಬುದನ್ನು ಪ್ರಾಧಿಕಾರ ಮರೆತಂತಿದೆ. ಕಬಿನಿ, ಹಾರಂಗಿ ಜಲಾಶಗಳ ನೀರನ್ನು ಸಾಕಷ್ಟು ವನ್ಯಪ್ರಾಣಿಗಳು ಅವಲಂಭಿಸಿವೆ ಎಂಬುದನ್ನು ಯಾರೂ ಮರೆಯಬಾರದು. ಅಲ್ಲದೆ, ಈ ಹಿಂದಿನ ಸುಪ್ರೀಂ ಕೋರ್ಟ್ ಆದೇಶದಂತೆ ಕಬಿನಿ ಜಲಾಶಯದಲ್ಲಿನ ಸುಮಾರು 7ರಿಂದ 8ಟಿಎಂಸಿ ನೀರನ್ನು ವನ್ಯಪ್ರಾಣಿಗಳ ಬಳಕೆಗೆ ನಿಗದಿಪಡಿಸಲಾಗಿದೆ. ಆದರೆ, ಪ್ರಾಧಿಕಾರ ಮಾತ್ರ ಇದ್ಯಾವುದನ್ನೂ ಗಮನಿಸದೆ ನೀರು ಬಿಡುಗಡೆಗೆ ಆದೇಶಿಸಿರುವುದು ದೂರದೃಷ್ಟಿಯ ಕೊರತೆಯನ್ನು ತೋರಿಸುತ್ತಿದೆ ಎಂದಿದ್ದಾರೆ.
ಬಿಜೆಪಿ ಸಂಸದರೇ ಗಮನಹರಿಸಿ:
ಸಂಕಷ್ಟದ ಸಮಯದಲ್ಲಿ ಪ್ರಾಧಿಕಾರದ ಇಂತಹ ತೀರ್ಪುಗಳು ಒಕ್ಕೂಟ ವ್ಯವಸ್ಥೆಗೆ ಮಾರಕವಾಗುತ್ತವೆ. ರಾಜ್ಯ ರಾಜ್ಯಗಳನ್ನು ಎತ್ತಿ ಕಟ್ಟುವ ಕೆಲಸವನ್ನು ಕೇಂದ್ರ ಸರಕಾರ ಬಿಡಬೇಕು. ರಾಜ್ಯದ ಜನರು ಬಿಜೆಪಿಗೆ ಮತ ನೀಡಿರುವ ತಪ್ಪಿಗಾದರೂ ಇಲ್ಲಿನ ಸಂಸದರು ಪ್ರಧಾನಿ ಬಳಿಗೆ ನಿಯೋಗವನ್ನು ಕರೆದೊಯ್ದು ಪ್ರಾಧಿಕಾರದ ಆದೇಶಕ್ಕೆ ತಡೆಯೊಡ್ಡುವ ಕೆಲಸ ಮಾಡಬೇಕು. ಜನರಿಗೆ ಬೇಕಾಗಿರುವುದು ನಿಮ್ಮ ಕೋಮುವಾದವಲ್ಲ. ಯಾವಾಗಲೂ ಧರ್ಮಧಾರಿತ ರಾಜಕಾರಣದಿಂದಲೇ ಅಧಿಕಾರಕ್ಕೆ ಬರಲು ಹವಣಿಸುವ ಬಿಜೆಪಿ ನಾಯಕರು, ಸಂಕಷ್ಟದ ಪರಿಸ್ಥಿತಿಯಲ್ಲಾದರೂ ಧರ್ಮಾಧಾರಿತ, ಕೋಮು ಆಧಾರಿತ ರಾಜಕಾರಣವನ್ನು ಬದಿಗಿಟ್ಟು ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಲಿ. ಜನರಿಗೆ ಬೇಕಿರುವುದು ಹಸಿದ ಹೊಟ್ಟೆಗೆ ಅನ್ನ, ನೀರು. ಅಂತಹ ಅಗತ್ಯ ಮೂಲಸೌಲಭ್ಯವನ್ನೂ ಕಲ್ಪಿಸದಿದ್ದ ಮೇಲೆ ಒಕ್ಕೂಟ ವ್ಯವಸ್ಥೆ ಇದ್ದೂ ಪ್ರಯೋಜನವೇನು? ದೇಶವಾಸಿಗಳ ಸಂಕಷ್ಟ ಅರ್ಥವಾಗದಿದ್ದ ಮೇಲೆ ವಿಶ್ವನಾಯಕನಾದರೆ ಏನು ಪ್ರಯೋಜನ? ನರೇಂದ್ರ ಮೋದಿ ಅವರೇ ನೀವು ಅಧಿಕಾರಕ್ಕೆ ಬಂದು 13 ವರ್ಷಗಳಾಗುತ್ತಿವೆ. ಈಗಲಾದರೂ ದೇಶವಾಸಿಗಳಿಗೆ ಕನಿಷ್ಠ ಮೂಲಸೌಲಭ್ಯಗಳಾದ ಅನ್ನ, ನೀರು ಸಿಗುವಂತೆ ಮಾಡಿ ಎಂದು ಹರಿಹಾಯ್ದರು.






