ಮೈಸೂರು, ಅಕ್ಟೋಬರ್,9,2026 (www.justkannada.in): ಈ ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾ ಅಕ್ಟೋಬರ್ 11 ರಿಂದ 21 ರವೆಗೆ ನಡೆಯುತ್ತಿದ್ದು ಎರಡು ಹಂತದಲ್ಲಿ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಿಕೊಂಡಿದ್ದೇವೆ ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ತಿಳಿಸಿದರು.
ಮೈಸೂರು ದಸರಾ ಮಹೋತ್ಸವ ಹಿನ್ನಲೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ಈ ಬಾರಿ ದಸರಾಗೆ 5161 ಸಿವಿಲ್ ಹಾಗೂ ಟ್ರಾಫಿಕ್ ಪೊಲೀಸ್, 33 ಕೆ ಎಸ್ ಅರ್ ಪಿ ತುಕಡಿ, 25 ಸಿಎಅರ್ ತುಕಡಿ, 24 ಎಸಿಎಸ್ ಟೀಮ್,1500 ಹೋಮ್ ಗಾರ್ಡ್ ಸೇರಿದಂತೆ ಒಟ್ಟು 6719 ಪೊಲೀಸರನ್ನು ನಿಯೋಜನೆ ಮಾಡಲಿದ್ದೇವೆ. ಈ ಬಾರಿ ದಸರಾಗೆ 18 ಪೊಲೀಸ್ ಸಹಾಯ ಕೇಂದ್ರ ತೆರಯಲಾಗಿದೆ ಎಂದು ತಿಳಿಸಿದರು.
ಜಂಬೂ ಸವಾರಿಯ ದಿನ ಶಿಥಲ ಕಟ್ಟಡಗಳು ಹಾಗೂ ಮರದ ಮೇಲೆ ಕುಳಿತು ಜಂಬೂಸವಾರಿ ವೀಕ್ಷಣೆ ಮಾಡುವುದನ್ನು ನಿಷೇಧ ಮಾಡಲಾಗಿದೆ. ಹಳೆಯ ದಸರಾ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಮೈಸೂರು ನಗರದ ಅನೇಕ ಕಡೆ ಸಂಚಾರ ಬದಲಾವಣೆ ಮಾಡಲಾಗಿದೆ. ದಸರಾಗೆ ಬರುವ ಪ್ರವಾಸಿಗರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಈ ಬಾರಿ ಅಚ್ಚುಕಟ್ಟಾಗಿ ಮಾಡಲಾಗಿದೆ. ಈ ಬಾರಿ ದಸರಾದಲ್ಲಿ ಪ್ರಮುಖ ಸ್ಥಳದಲ್ಲಿ 35,794 ಸಿಸಿ ಕ್ಯಾಮರಾಗಳನ್ನು ಅಳವಡಿಕೆ ಮಾಡಲಾಗಿದೆ. 28 ಆ್ಯಂಬುಲೆನ್ಸ್ , 33 ಅಗ್ನಿಶಾಮಕ ವಾಹನವನ್ನು ದಸರಾಗೆ ನಿಯೋಜನೆ ಮಾಡಲಾಗುತ್ತಿದೆ ಎಂದರು.
ಈ ಬಾರಿ ಹೀಲಿಯಂ ಬಲೂನ್ ಗಳ ಮಾರಾಟ ನಿಷೇಧ
ದಸರಾ ಸಮಯದಲ್ಲಿ ಈ ಬಾರಿ ಹೀಲಿಯಂ ಬಲೂನ್ ಗಳ ಮಾರಾಟವನ್ನು ನಿಷೇಧ ಮಾಡಿದ್ದೇವೆ. 48 ಸಾವಿರ ಆಸನಕ್ಕೆ ಮಾತ್ರ ಈ ಬಾರಿ ವ್ಯವಸ್ಥೆ ಮಾಡುತ್ತೇವೆ. ಗೊಲ್ಡ್ ಪಾಸ್ ಜೊತೆಗೆ ಅವರ ಸೀಟ್ ನಂಬರ್ ನ್ನು ನಿಗದಿ ಮಾಡುತ್ತೇವೆ ಎಂದು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ತಿಳಿಸಿದರು.






