ಬೆಂಗಳೂರು, ಅಕ್ಟೋಬರ್,6,2026 (www.justkannada.in): “ರಾಜ್ಯದ ಮಠಗಳು, ಸ್ವಾಮೀಜಿಗಳ ಬಗ್ಗೆ ನನಗೆ ಅಪಾರವಾದ ಗೌರವವಿದ್ದು, ಪ್ರತಿ ಸಂದರ್ಭದಲ್ಲಿಯೂ ಪಂಚಪೀಠಗಳ ಸ್ವಾಮೀಜಿಗಳ ಪಾದಗಳಿಗೆ ನಮಸ್ಕರಿಸಿ ಗೌರವ ತೋರಿದ್ದೇನೆ. ಸ್ವಾಮೀಜಿಗಳ ಬಗ್ಗೆ ಅಗೌರವವಾಗಿ ನಾನು ಮಾತನಾಡಿಲ್ಲ” ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸ್ಪಷ್ಟಪಡಿಸಿದರು.
ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್ , ಇತ್ತೀಚೆಗೆ ವೀರಶೈವ ಸ್ವಾಮೀಜಿಗಳ ಕಾರ್ಯಕ್ರಮದಲ್ಲಿ ನಾನು ಯಾವ ಸ್ವಾಮೀಜಿಗಳಿಗೂ ಅಗೌರವದಿಂದ ಮಾತನಾಡಿಲ್ಲ. ಅಲ್ಲಿ ನೆರೆದಿದ್ದ ಜನರಿಗೆ ‘ನೀವು ನಮ್ಮ ರಕ್ಷಣೆ, ಸೇವೆ ಮಾಡಬೇಕು, ನಾವೂ ನಿಮಗೆ ಸಹಾಯ ಮಾಡುತ್ತೇವೆ ಎಂದಿದ್ದೆ’. ರಾಜ್ಯದ ಮಠಗಳು, ಸ್ವಾಮೀಜಿಗಳ ಬಗ್ಗೆ ಯಾರಿಗೆ ಗೌರವ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನನಗೆ ಮಾತ್ರ ಅಪಾರವಾದ ಗೌರವವಿದೆ. ನಾನೂ ಕೂಡ ದೈವಭಕ್ತ. ನನ್ನ ಧರ್ಮದ ಮೇಲೆ ನನಗೆ ನಂಬಿಕೆಯಿದೆ. ಮಾನವ ಧರ್ಮಕ್ಕೆ ಜಯವಾಗಲಿ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ನಂಬಿರುವವನು ನಾನು” ಎಂದರು.
ನನಗೆ ಮದವಿದ್ದರೆ ಇಳಿಸಲಿ: ಬೇಜಾರು ಮಾಡಿಕೊಳ್ಳುವುದಿಲ್ಲ
“ಕ್ರೈಸ್ತರು, ಬೌದ್ಧರು, ಪರಿಶಿಷ್ಟರು, ಒಕ್ಕಲಿಗರು, ಲಿಂಗಾಯತರು, ಹಿಂದುಳಿದವರು, ಅಲ್ಪಸಂಖ್ಯಾತರೆಲ್ಲರೂ ಒಂದೇ ಎನ್ನುವ ಭಾವನೆಯಿಂದ ರಾಜಕೀಯ ಬದುಕನ್ನು ಪ್ರಾರಂಭಿಸಿದವನು ನಾನು. ಇದನ್ನು ಕೆಲವರು ತಿರುಚಿ, ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಡಿ ಕೆ ಶಿವಕುಮಾರ್ ಗೆ ಅಧಿಕಾರದ ಮದ ಬಂದಿದೆ ಎಂದು ಹೇಳುತ್ತಾರೆ. ನನಗೆ ಮದವಿದ್ದರೆ ಇಳಿಸಳಿ. ನಾನೇನು ಬೇಜಾರು ಮಾಡಿಕೊಳ್ಳುವುದಿಲ್ಲ” ಎಂದರು.







