ಬೆಂಗಳೂರು,ಅಕ್ಟೋಬರ್,1,2026 (www.justkannada.in) ರಾಜ್ಯದಲ್ಲಿ ಎಸ್ ಐಆರ್ ನೆಪದಲ್ಲಿ ದಲಿತರು ಹಾಗೂ ಅಲ್ಪಸಂಖ್ಯಾತರ ಮತಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಕುತಂತ್ರ ನಡೆಯುತ್ತಿದೆ. ಎಲ್ಲೆಲ್ಲಿ ಅಕ್ರಮವಾಗಿ ಫಾರ್ಮ್ 7 ಸಲ್ಲಿಕೆ ಮಾಡಲಾಗಿದೆಯೋ ಆ ಎಲ್ಲಾ ವಿವರಗಳನ್ನು ನೀಡುವಂತೆ ಪಕ್ಷದ ಬಿಎಲ್‌ಎ ಹಾಗೂ ಬಿಎಲ್‌ಓ ಗಳಿಗೆ ಸಿಎಂ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.
ಈ ಸಂಬಂಧ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಡಿಕೆ ಶಿವಕುಮಾರ್, ಮತದಾನವು ದೇಶದ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕು. ಆದರೆ, ಬಿಜೆಪಿಯವರು ಎಸ್ಐಆರ್ ನೆಪದಲ್ಲಿ ಜನರಿಂದ ಈ ಹಕ್ಕನ್ನು ಕಿತ್ತುಕೊಳ್ಳುತ್ತಿದ್ದಾರೆ. ದೀನ ದಲಿತರು, ಬಡವರು ಹಾಗೂ ಅಲ್ಪಸಂಖ್ಯಾತರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಉದ್ದೇಶದಿಂದ ತಪ್ಪು ಮಾಹಿತಿಯೊಂದಿಗೆ ‘ಫಾರ್ಮ್-7’ ಸಲ್ಲಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇಂತಹ ಕೃತ್ಯವೆಸಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಈ ರೀತಿ ತಪ್ಪು ಮಾಹಿತಿ ನೀಡಿ ನಾಗರಿಕರನ್ನು ಮತದಾರರ ಪಟ್ಟಿಯಿಂದ ದೂರವಿಡುವವರ ಬಗ್ಗೆ ಬಿಎಲ್ಎಗಳು ನನಗೆ ನಿಖರ ಮಾಹಿತಿ ನೀಡಬೇಕು. ದಯವಿಟ್ಟು ಈ ಮಾಹಿತಿಯನ್ನು dkshivakumarlistens@gmail.com ಗೆ ಕಳುಹಿಸಿ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.










