ಕಲಬುರಗಿ,ಸೆಪ್ಟಂಬರ್,3,2026 (www.justkannada.in): ಮಗನನ್ನು ಗಡಿಪಾರು ಮಾಡುವುದಾಗಿ ಬೆದರಿಸಿ 20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇರೆಗೆ ಬ್ರಹ್ಮಪುರ ಪೊಲೀಸ್ ಠಾಣೆಯ ಇಬ್ಬರು ಕಾನ್ಸ್ ಟೇಬಲ್ ಗಳನ್ನು ಲೋಕಾಯುಕ್ತ ಪೊಲೀಸರು ಬಲೆಗೆ ಕೆಡವಿದ್ದಾರೆ.
ಕರ್ನಾಟಕ ಲೋಕಾಯುಕ್ತ ಕಲಬುರಗಿ ಪೊಲೀಸ್ ಅಧೀಕ್ಷಕ ಸಿದ್ಧರಾಜು. ಸಿ. ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬ್ರಹ್ಮಪುರ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ಗಳಾದ ಪರಶುರಾಮ್ ಹಾಗೂ ವೀರೇಶ್ ಸಿಕ್ಕಿಬಿದ್ದಿದ್ದಾರೆ.
ಬಾಪುನಗರದ ನಿವಾಸಿ ಕನ್ನರಾಜು ಪಾಟೀಲ್ ಅವರು ನೀಡಿದ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಲಾಗಿದೆ. ದೂರುದಾರರ ಪುತ್ರ ಕಾರ್ತಿಕ್ ಕಳ್ಳತನ ಹಾಗೂ ರಾಬರಿ ಮಾಡುತ್ತಿದ್ದಾನೆ ಎಂದು ಆರೋಪಿಸಿ, ಆತನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ರಾತ್ರಿ ಇರಿಸಿ, ಗಡಿಪಾರು ಮಾಡುವುದಾಗಿ ಬೆದರಿಸಲಾಗುತ್ತಿತ್ತು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಪೊಲೀಸರು 1 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಮುಂಗಡವಾಗಿ 50 ಸಾವಿರ ರೂ ಪಡೆದಿದ್ದರು. ಬಳಿಕ 20 ಸಾವಿರ ರೂ. ನೀಡುವಂತೆ ಒತ್ತಾಯಿಸಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
20 ಸಾವಿರ ರೂ. ನಗದು ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಇಬ್ಬರು ಕಾನ್ಸ್ಟೇಬಲ್ಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ತನಿಖೆ ಬಳಿಕ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ENGLISH SUMMARY..
Two Cops Caught in Lokayukta Trap Over ₹20,000 Bribe
Kalaburagi: Two police constables attached to Brahmapur Police Station—Parashuram and Veeresh—were caught by Lokayukta officials while allegedly accepting a ₹20,000 bribe.
The complainant alleged that the cops threatened to extern his son and demanded money, after allegedly seeking ₹1 lakh and receiving ₹50,000 in advance.
The trap was conducted under the guidance of Kalaburagi Lokayukta SP Siddaraju C. Further investigation is underway, and the accused will be produced before the court.
Key words: Two Cops, Caught, Lokayukta, Trap






