Wednesday, September 2, 2026

BDA Apartments

Home Front Page ಆಹಾರ ಇಲಾಖೆಯಲ್ಲಿ ಅಲ್ಪಾವಧಿಯಲ್ಲೇ ದೊಡ್ಡ ಬದಲಾವಣೆ- ಸಚಿವ ರಿಜ್ವಾನ್ ಅರ್ಷದ್

ಆಹಾರ ಇಲಾಖೆಯಲ್ಲಿ ಅಲ್ಪಾವಧಿಯಲ್ಲೇ ದೊಡ್ಡ ಬದಲಾವಣೆ- ಸಚಿವ ರಿಜ್ವಾನ್ ಅರ್ಷದ್

ಮೈಸೂರು,ಸೆಪ್ಟಂಬರ್,2,2026 (www.justkannada.in): ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ಅಲ್ಪಾವಧಿಯಲ್ಲೇ ದೊಡ್ಡ ಮಟ್ಟದ ಬದಲಾವಣೆ ತರಲು ಪ್ರಯತ್ನಿಸಲಾಗುವುದು ಎಂದು ಸಚಿವ ರಿಜ್ವಾನ್ ಅರ್ಷದ್ ಹೇಳಿದರು.

ಮೈಸೂರಿನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಸಚಿವ ರಿಜ್ವಾನ್ ಅರ್ಷದ್ ಅವರು, “ನನಗೆ ಮಹತ್ವದ ಖಾತೆಯ ಜವಾಬ್ದಾರಿ ನೀಡಲಾಗಿದೆ. ಯಾವುದೇ ಲಾಬಿ ಮಾಡದಿದ್ದರೂ ಸಚಿವ ಸ್ಥಾನ ದೊರೆತಿದೆ. ವಿಶೇಷವಾಗಿ ಸಿದ್ದರಾಮಯ್ಯನವರು ಮೈಸೂರಿನ ಹುಡುಗನಿಗೆ ಅವಕಾಶ ನೀಡಬೇಕು ಎಂದು ಹೇಳಿದ್ದರಿಂದ ಸಚಿವ ಸ್ಥಾನ ಸಿಕ್ಕಿದೆ” ಎಂದರು.

ಸಿದ್ದರಾಮಯ್ಯ ಅವರು ಅನ್ನಭಾಗ್ಯ ಯೋಜನೆ ಆರಂಭಿಸಿದ್ದು ಆಹಾರ ಇಲಾಖೆಯ ಮೂಲಕವೇ. ಇದೀಗ ನನಗೂ ಇದೇ ಇಲಾಖೆಯ ಜವಾಬ್ದಾರಿ ದೊರೆತಿರುವುದು ವಿಶೇಷ ಎಂದು ಸಚಿವ ರಿಜ್ವಾನ್ ಅರ್ಷದ್ ಹೇಳಿದರು.

ಅರ್ಹರಿಗೆ ಪಡಿತರ ಚೀಟಿ: ಅನರ್ಹರ ಪತ್ತೆ

ರಾಜ್ಯದಲ್ಲಿ ಪ್ರಸ್ತುತ ಸುಮಾರು 4.5 ಕೋಟಿ ಜನರು ಪಡಿತರ ವ್ಯವಸ್ಥೆಯ ವ್ಯಾಪ್ತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆ 5 ಕೋಟಿ ದಾಟುವ ನಿರೀಕ್ಷೆಯಿದೆ. ಅರ್ಹ ಫಲಾನುಭವಿಗಳಿಗೆ ಇನ್ನೂ ಪಡಿತರ ಚೀಟಿ ಸಿಗದಿರುವ ಬಗ್ಗೆ ಗಮನ ಹರಿಸಲಾಗುವುದು. ಅನರ್ಹರು ಪಡೆದಿರುವ ಪಡಿತರ ಚೀಟಿಗಳನ್ನು ಪತ್ತೆಹಚ್ಚುವ ಕಾರ್ಯವೂ ನಡೆಯುತ್ತಿದೆ ಎಂದು ತಿಳಿಸಿದರು.

ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬ್ಲಾಕ್ ಮಾರ್ಕೆಟ್‌ ಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದರು.

ಪಡಿತರ ಸಾಗಿಸುವ ವಾಹನಗಳಿಗೆ ಕಡ್ಡಾಯವಾಗಿ GPS ಅಳವಡಿಸುವಂತೆ ಸೂಚನೆ ನೀಡಲಾಗಿದ್ದು, ಈಗಾಗಲೇ 65ರಷ್ಟು ವಾಹನಗಳಿಗೆ GPS ಅಳವಡಿಕೆ ಪೂರ್ಣಗೊಂಡಿದೆ. ಉಳಿದ ವಾಹನಗಳಿಗೂ ಶೀಘ್ರದಲ್ಲೇ GPS ಅಳವಡಿಸಲಾಗುವುದು. ಗೋದಾಮುಗಳಲ್ಲಿ CCTV ಕ್ಯಾಮೆರಾ ಅಳವಡಿಸುವಂತೆಯೂ ಸೂಚಿಸಲಾಗಿದೆ ಎಂದು ಸಚಿವ ರಿಜ್ವಾನ್ ಅರ್ಷದ್ ಹೇಳಿದರು.

ಬಯೋಮೆಟ್ರಿಕ್ ಸಮಸ್ಯೆಗೆ ಸಾಫ್ಟ್‌ ವೇರ್ ಕಾರಣ

ನ್ಯಾಯಬೆಲೆ ಅಂಗಡಿಗಳಲ್ಲಿನ ಬಯೋಮೆಟ್ರಿಕ್ ಸಮಸ್ಯೆ ಇರುವುದು ನಿಜ ಎಂದು ಒಪ್ಪಿಕೊಂಡ ಸಚಿವ ರಿಜ್ವಾನ್ ಅರ್ಷದ್, ಸಾಫ್ಟ್‌ವೇರ್ ಸಮಸ್ಯೆಯಿಂದ ಸರ್ವರ್ ಡೌನ್ ಆಗುತ್ತಿರುವುದು ಇದಕ್ಕೆ ಪ್ರಮುಖ ಕಾರಣ ಎಂದರು.

ಎರಡು ತಿಂಗಳ ಪಡಿತರವನ್ನು ಒಂದೇ ಬಾರಿ ವಿತರಿಸಿದ ಸಂದರ್ಭದಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಒಮ್ಮೆಲೆ ಎರಡು ಬಾರಿ ಬಳಸಿದ್ದರಿಂದ ಹಾಗೂ ವ್ಯವಸ್ಥೆಯ ಮೇಲಿನ ಅತಿಯಾದ ಒತ್ತಡದಿಂದ ಸಮಸ್ಯೆ ಉಂಟಾಗಿದೆ. ಸರ್ವರ್‌ ಗಳನ್ನು ಉನ್ನತೀಕರಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

“ನ್ಯಾಯಬೆಲೆ ಅಂಗಡಿ ಸೈಡ್ ಬ್ಯುಸಿನೆಸ್ ಆಗಬಾರದು”

ನ್ಯಾಯಬೆಲೆ ಅಂಗಡಿ ನಡೆಸುವವರಿಗೆ ಪ್ರಸ್ತುತ ಆದಾಯ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ, ಅವರ ಆದಾಯ ಹೆಚ್ಚಿಸಲು ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು.

ಆದಾಯ ತೆರಿಗೆ ಪಾವತಿಸುತ್ತಿದ್ದ ಕಾರಣಕ್ಕೆ ಸುಮಾರು 4.5 ಲಕ್ಷ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗಿದೆ. ಆದರೆ, ತಾವು ಸಚಿವರಾದ ಬಳಿಕ ಇನ್ನು ಮುಂದೆ ಯಾವುದೇ ಪಡಿತರ ಚೀಟಿಯನ್ನು ರದ್ದು ಮಾಡದಂತೆ ಸೂಚಿಸಿರುವುದಾಗಿ ತಿಳಿಸಿದರು.

“ಮನೆಯಲ್ಲಿ ಒಬ್ಬ ವ್ಯಕ್ತಿ ತೆರಿಗೆ ಪಾವತಿಸುತ್ತಾನೆ ಎಂಬ ಕಾರಣಕ್ಕೆ ಇಡೀ ಕುಟುಂಬದ ಸದಸ್ಯರ ಪಡಿತರ ಚೀಟಿ ರದ್ದು ಮಾಡುವುದು ಸರಿಯಾದ ಕ್ರಮವಲ್ಲ. ಈ ಬಗ್ಗೆ ಸೂಕ್ತ ಮಾನದಂಡಗಳನ್ನು ಅನುಸರಿಸಲು ಕ್ರಮ ಕೈಗೊಳ್ಳುತ್ತೇವೆ” ಎಂದು ಸಚಿವ ರಿಜ್ವಾನ್ ಅರ್ಷದ್ ಹೇಳಿದರು.

ಸಿಬ್ಬಂದಿ ಕೊರತೆ ನೀಗಿಸಲು ಕ್ರಮ

ಆಹಾರ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದನ್ನು ಒಪ್ಪಿಕೊಂಡ ಸಚಿವರು, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

“ಸಿಕ್ಕಿರುವ ಅವಧಿಯಲ್ಲಿ ಆಹಾರ ಇಲಾಖೆಯಲ್ಲಿ ಗಣನೀಯ ಪ್ರಮಾಣದ ಅಭಿವೃದ್ಧಿ ಹಾಗೂ ಬದಲಾವಣೆ ತರಲು ಶ್ರಮಿಸುತ್ತೇನೆ” ಎಂದು ಸಚಿವ ರಿಜ್ವಾನ್ ಅರ್ಷದ್ ಹೇಳಿದರು.

ENGLISH SUMMARY…

Major Reforms Planned in Food Department: Rizwan Arshad

Mysuru: Food and Civil Supplies Minister Rizwan Arshad said the government plans to bring major changes to the department within a short period.

He said 4.5 crore people are currently covered under the ration system, with the number expected to cross 5 crore. Steps will be taken to ensure eligible beneficiaries get ration cards and to identify ineligible beneficiaries.

To prevent black marketing and diversion of ration rice, GPS will be mandatory for ration transport vehicles. GPS installation has already been completed in 65% of vehicles, while CCTV cameras will be installed in warehouses.

Addressing biometric issues at fair price shops, Arshad said server and software problems were causing disruptions and assured that the system would be upgraded.

He also said ration cards should not be cancelled merely because one family member pays income tax, adding that 4.5 lakh cards had earlier been cancelled on this basis.

The minister further assured that vacant posts in the Food Department would be filled and measures would be taken to improve the income of fair price shop operators.

Key words: Major, Reforms, Planned ,Food Department, Minister, Rizwan Arshad