ಬೆಂಗಳೂರು,ಸೆಪ್ಟಂಬರ್,1,2026 (www.justkannada.in): 2026ರ SSLC ಪರೀಕ್ಷೆಯಲ್ಲಿ ದಾಖಲೆ ಫಲಿತಾಂಶ ಬಂದಿದ್ದು, 800 ಅರ್ಹ ವಿದ್ಯಾರ್ಥಿಗಳಿಗೆ ತಲಾ 50,000 ರೂ. ನಗದು ಪುರಸ್ಕಾರ ನೀಡಲು ತೀರ್ಮಾನಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಈ ಕುರಿತು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಸಚಿವ ಮಧು ಬಂಗಾರಪ್ಪ, ನಮ್ಮ ಸರ್ಕಾರಿ ಶಾಲಾ ಮಕ್ಕಳು ಈ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಚಾರಿತ್ರಿಕ ದಾಖಲೆ ಬರೆದಿದ್ದರು. 2026ರ ಕ್ರೋಢೀಕೃತ ಉತ್ತೀರ್ಣ ಪ್ರಮಾಣ 2025ರ ಶೈಕ್ಷಣಿಕ ಸಾಲಿಗಿಂತ 20.89% ರಷ್ಟು ಹೆಚ್ಚಾಳವಾಗಿತ್ತು. ಈ ಸಾಧನೆ ಮಾಡಿದ ನಮ್ಮ ಮಕ್ಕಳಿಗೆ ನಾವು ಪ್ರೋತ್ಸಾಹ ನೀಡದಿದ್ದರೆ ಹೇಗೆ? ಇದನ್ನು ಯೋಚಿಸಿ ನಮ್ಮ ಸರ್ಕಾರ 2025-26 ನೇ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ, ಶೈಕ್ಷಣಿಕ ಜಿಲ್ಲಾವಾರು ಗರಿಷ್ಠ ಅಂಕ ಪಡೆದ ಮೂವರು ವಿದ್ಯಾಥಿಗಳಿಗೆ ಹಾಗೂ ಶೈಕ್ಷಣಿಕ ಬ್ಲಾಕ್ ವಾರು ಗರಿಷ್ಠ ಅಂಕ ಪಡೆದ ಮೂವರು ವಿದ್ಯಾರ್ಥಿಗಳಿಗೆ (ಜಿಲ್ಲಾವಾರು ಆಯ್ಕೆಯಾದ ವಿದ್ಯಾರ್ಥಿಗಳನ್ನು ಹೊರತುಪಡಿಸಿ) ಒಟ್ಟಾರೆ ರಾಜ್ಯದ ಅಂದಾಜು 800 ಅರ್ಹ ವಿದ್ಯಾರ್ಥಿಗಳಿಗೆ ತಲಾ 50,000 ರೂ. ನಂತೆ ನಗದು ಪುರಸ್ಕಾರ ನೀಡಲು ತೀರ್ಮಾನಿಸಿದೆ ಈಗಾಗಲೇ ಈ ಸಂಬಂಧ ಆದೇಶ ಕೂಡ ಹೊರಡಿಸಿದ್ದೇವೆ ಎಂದು ತಿಳಿಸಿದ್ದಾರೆ.
ಈ ನಗದು ಪುರಸ್ಕಾರವನ್ನು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಪಾವತಿಸಲು ಸೂಚನೆ ನೀಡಲಾಗಿದೆ. ವಿದ್ಯಾರ್ಥಿ ಪ್ರೇರಣಾ ಉಪಕ್ರಮದಡಿ ಅನುಮೋದನೆಯಾದ 3.25 ಕೋಟಿ ರೂ.ಗಳ ಅನುದಾನವನ್ನುಇದಕ್ಕೆ ಬಿಡುಗಡೆ ಮಾಡಲಾಗಿದೆ. ನಮ್ಮ ಇಲಾಖೆಯ ಅಧಿಕಾರಿಗಳು ಆದಷ್ಟು ಬೇಗ ಪ್ರತಿಭಾವಂತ ವಿದ್ಯಾರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ ಅವರಿಗೆ 50 ಸಾವಿರ ರೂ. ನಗದು ಪುರಸ್ಕಾರ ಸಂದಾಯವಾಗುವಂತೆ ನೋಡಿಕೊಳ್ಳಲಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ಓದಿ, ಹೆಚ್ಚು ಅಂಕಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ಈ ಹಣ ಖಂಡಿತವಾಗಿಯೂ ನೆರವಾಗಲಿದೆ ಎಂಬ ನಂಬಿಕೆ ನನ್ನದು. ಈ ಎಲ್ಲಾ ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು, ನಾಡು ಹೆಮ್ಮೆಪಡುವಂತಹ ಸಾಧನೆ ಮಾಡಲಿ ಎಂದು ಆಶಿಸುತ್ತೇನೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
Key words: 2026 SSLC exam result, students, Rs. 50,000 cash, Minister, Madhu Bangarappa







