ಮೈಸೂರು, ಆ.29, 2026: ದೇಶದಲ್ಲಿ ಮಾಧ್ಯಮದ ವಿಶ್ವಾಸಾರ್ಹತೆ ಕುರಿತು ಪ್ರಶ್ನೆಗಳು ಮೂಡುತ್ತಿದೆ. ಜನರ ವಿಶ್ವಾಸ ಸಾಧಿಸುವುದು ಮಾಧ್ಯಮದ ಮುಂದಿರುವ ದೊಡ್ಡ ಸವಾಲಾಗಿದ್ದು, ಜನರ ವಿಶ್ವಾಸಗಳಿಸುವುದು ಅಥವಾ ಕಳೆದುಕೊಳ್ಳುವುದು ಪತ್ರಕರ್ತರ ಕೈಯಲ್ಲಿದೆ ಎಂದು ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ನಗರದ ಕೆಎನ್ಎಸ್ ಬಡಾವಣೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಪತ್ರಕರ್ತರ ಭವನದ ಕಟ್ಟಡ ಕಾಮಗಾರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿ ಶುಭ ಹಾರೈಸಿದರು.
ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಪ್ರತಿಕಾ ದಿನಾಚರಣೆ, ಹಿರಿಯ ಪತ್ರಕರ್ತರಿಗೆ ಅಭಿನಂದನೆ, ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಸಚಿವ ಯತೀಂದ್ರ ಸಿದ್ದರಾಮಯ್ಯ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಇತ್ತೀಚೆಗೆ ದೆಹಲಿಯಲ್ಲಿ ಜೆನ್ಜೀಗಳು ನಡೆಸಿದ ಹೋರಾಟದಲ್ಲಿ ಪ್ರಮುಖ ಮಾಧ್ಯಮಗಳ ವರ್ತನೆಯಿಂದ ಜನಸಾಮಾನ್ಯರು ಪತ್ರಕರ್ತರ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಗೋದಿ ಮೀಡಿಯಾಗಳು ಎಂದು ಟೀಕಿಸುವ ಸ್ಥಿತಿ ನಿರ್ಮಾಣವಾಗಿದೆ.

ಆದರೆ ಪತ್ರಕರ್ತರು ವಸ್ತುನಿಷ್ಠ ಹಾಗೂ ನಿಷ್ಪಕ್ಷಪಾತವಾಗಿ ಕೆಲಸ ಮಾಡುವ ಮೂಲಕ ಜನರ ವಿಶ್ವಾಸವನ್ನು ಮತ್ತೆ ಗಳಿಸಬಹುದು. ಇದಕ್ಕಾಗಿ ಪತ್ರಕರ್ತರು ವಸ್ತುನಿಷ್ಠ ಹಾಗೂ ನಿಷ್ಪಕ್ಷಪಾತ ವರದಿ ಮಾಡಬೇಕು. ಅನ್ಯಾಯದ ವಿರುದ್ಧ ಮತ್ತು ಜನಪರ ವಿಚಾರಗಳ ಪರವಾಗಿ ನಿಂತು ಕೆಲಸ ಮಾಡಿದಾಗ ಮಾತ್ರ ಮಾಧ್ಯಮ ಜನರ ವಿಶ್ವಾಸ ಹಾಗೂ ಗೌರವವನ್ನು ಮರಳಿ ಪಡೆಯಲು ಸಾಧ್ಯವಿದ್ದು, ಪ್ರಜಾಪ್ರಭುತ್ವದ ಆಶಯಗಳನ್ನು ಬಲಪಡಿಸುವಲ್ಲಿ ಪತ್ರಕರ್ತರು ಪ್ರಮುಖ ಪಾತ್ರ ವಹಿಸಬೇಕು ಎಂದರು.

ಸುಲಭವಾದ ವೃತ್ತಿಯಲ್ಲ:
ಪತ್ರಕರ್ತರ ಕೆಲಸ ಸುಲಭವಾದ ವೃತ್ತಿಯಲ್ಲ, ಪ್ರಜಾಪ್ರಭುತ್ವದ 4ನೇ ಅಂಗವಾದ ಮಾಧ್ಯಮಗಳ ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದೆ. ಆದ್ದರಿಂದ ಪತ್ರಕರ್ತರು ತಮ್ಮ ಕೆಲಸವನ್ನು ಕೇವಲ ಉದ್ಯೋಗವೆಂದು ಮಾತ್ರವೇ ಪರಿಗಣಿಸದೆ ಸಾಮಾಜಿಕ ಹೊಣೆಗಾರಿಕೆಯಾಗಿ ನಿರ್ವಹಿಸಬೇಕಿದೆ. ವಿಶೇಷವಾಗಿ ವರದಿಗಾರರು ಸ್ಥಳಕ್ಕೆ ತೆರಳಿ ವರದಿ ಮಾಡುವ ಸಂದರ್ಭದಲ್ಲಿ ಹಲವು ಸವಾಲುಗಳು ಹಾಗೂ ಸಮಸ್ಯೆಗಳನ್ನು ಎದುರಿಸುತ್ತಾರೆ. ಅವುಗಳನ್ನೆಲ್ಲಾ ಮೆಟ್ಟಿನಿಂತು ಸಮಾಜಕ್ಕೆ ಕೊಡುಗೆ ನೀಡುವ ಉದ್ದೇಶದಿಂದ ಪತ್ರಕರ್ತರು ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯವಾಗಿದ್ದು, ಈ ನಿಟ್ಟಿನಲ್ಲಿ ಪತ್ರಕರ್ತರ ಸೇವೆಗೆ ಎಲ್ಲರೂ ಗೌರವ ಸಲ್ಲಿಸಬೇಕು ಎಂದರು.
ಭವನ ಸದುಪಯೋಗವಾಗಲಿ:
ಪತ್ರಕರ್ತರ ಭವನ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದರೂ ಹಣ ಬಿಡುಗಡೆ ಸ್ವಲ್ಪ ವಿಳಂಬವಾಗಿತ್ತು. ಸಂಘದ ಅಧ್ಯಕ್ಷ ಕೆ. ದೀಪಕ್ ಅವರು ಅನುದಾನ ಬಿಡುಗಡೆ ಸಂಬಂಧವಾಗಿ ನಡೆಸಿದ ಪ್ರಯತ್ನಿಸಿದ ಪರಿಣಾಮ ಇದೀಗ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮೂರು ಕೋಟಿ ರೂ.ಗೂ ಹೆಚ್ಚಿನ ವೆಚ್ಚದಲ್ಲಿ ಪತ್ರಕರ್ತರ ಭವನ ನಿರ್ಮಾಣವಾಗುತ್ತಿದ್ದು, ಭವನದ ಕಾಮಗಾರಿ ಶೀಘ್ರ ಪೂರ್ಣಗೊಂಡು, ಜಿಲ್ಲೆಯ ಎಲ್ಲ ಪತ್ರಕರ್ತರಿಗೆ ಇದರ ಸದುಪಯೋಗವಾಗಲಿ ಎಂದು ಹಾರೈಸಿದರು.
ಪತ್ರಕರ್ತರಿಗೆ ವಿಶಿಷ್ಟ ಸ್ಥಾನವಿದೆ:
ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ಮೈಸೂರು ಪತ್ರಕರ್ತರಿಗೆ ದೇಶ ಹಾಗೂ ರಾಜ್ಯದ ಪತ್ರಿಕಾ ಇತಿಹಾಸದಲ್ಲಿ ವಿಶಿಷ್ಟ ಸ್ಥಾನವಿದೆ. ಮೈಸೂರಿನ ಪತ್ರಿಕಾ ರಂಗದ ಬೆಳವಣಿಗೆಯಲ್ಲಿ ರಾಜಶೇಖರ ಕೋಟಿ ಹಾಗೂ ಕೆ.ಬಿ. ಗಣಪತಿ ಅವರಂತಹ ಹಿರಿಯ ಪತ್ರಕರ್ತರ ಪರಿಶ್ರಮ ಮಹತ್ವದ್ದಾಗಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಸಂಘಕ್ಕೆ 62 ವರ್ಷಗಳ ಇತಿಹಾಸವಿದ್ದು, ಸಂಘದ ಮೂಲಕ ಹಿರಿಯರು ಪತ್ರಿಕಾ ಕ್ಷೇತ್ರಕ್ಕೆ ಹಲವು ಮಹತ್ವದ ಕೊಡುಗೆ ನೀಡಿದ್ದಾರೆ. ಮಹಾತ್ಮ ಗಾಂಧೀಜಿಯವರೂ ಪತ್ರಿಕಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು. ಪತ್ರಕರ್ತರು ಹಲವು ಕಷ್ಟಗಳ ನಡುವೆಯೂ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದ ಅವರು, ಪತ್ರಕರ್ತರು ಸತ್ಯ ಮಾರ್ಗದಲ್ಲಿ ನಡೆದು, ಅಸತ್ಯಕ್ಕೆ ಅವಕಾಶ ನೀಡದೆ ಸಮಾಜಕ್ಕೆ ಮಾರ್ಗದರ್ಶನ ನೀಡಬೇಕು. ಶಿಕ್ಷಣ, ಮಹಿಳೆಯರು, ಬಡವರು, ರೈತರು, ದೀನ-ದಲಿತರು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಸಮಸ್ಯೆಗಳಿಗೆ ಧ್ವನಿಯಾಗಬೇಕು ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಶಾಸಕರಾದ ತನ್ವೀರ್ ಸೇಠ್, ಟಿ.ಎಸ್.ಶ್ರೀವತ್ಸ, ಡಿ. ರವಿಶಂಕರ್, ದರ್ಶನ್ ಧ್ರುವನಾರಾಯಣ್, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಕೆ.ವಿವೇಕಾನಂದ, ಮಾಜಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಜಿಎಸ್ಎಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಶ್ರೀಹರಿ ದ್ವಾರಕನಾಥ್, ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ಸೇರಿದಂತೆ ಹಿರಿಯ ಪತ್ರಕರ್ತರು, ಸಂಘದ ಪದಾಧಿಕಾರಿಗಳು, ಪತ್ರಕರ್ತರು ಇದ್ದರು.
ಪತ್ರಕರ್ತರಿಗೆ ಅಭಿನಂದನೆ ಪ್ರಧಾನ:
ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮದಲ್ಲಿ ಹಲವು ವರ್ಷಗಳ ಸೇವೆ ಸಲ್ಲಿಸಿದ ಹಲೋ ಮೈಸೂರು ಪತ್ರಿಕೆ ಸಂಪಾದಕ ಟಿ.ಗುರುರಾಜ್(ವರ್ಷದ ಹಿರಿಯ ಪತ್ರಕರ್ತ ನಗರ), ಮೈಸೂರು ಮಿತ್ರ ಪತ್ರಿಕೆಯ ಪಿರಿಯಾಪಟ್ಟಣ್ಣ ವರದಿಗಾರ ಪಿ.ಎಸ್.ವೀರೇಶ್ (ವರ್ಷದ ಹಿರಿಯ ಪತ್ರಕರ್ತ ಗ್ರಾಮಾಂತರ), ರಾಜ್ಯಧರ್ಮ ಪತ್ರಿಕೆ ಉಪ ಸಂಪಾದಕ ಜಿ.ಎಂ. ಲವಕುಮಾರ್(ವರ್ಷದ ಹಿರಿಯ ಉಪಸಂಪಾದಕ), ಸಿಟಿ ಹೈಲೈಟ್ಸ್ ಪತ್ರಿಕೆ ಛಾಯಾಗ್ರಹಕ ಹಂಪಾ ನಾಗರಾಜ್(ವರ್ಷದ ಹಿರಿಯ ಛಾಯಾಗ್ರಾಹಕ), ಶ್ರೀ ಕನ್ನಡ ವಾಹಿನಿ ಸಂಪಾದಕ ಸೂರ್ಯ(ವರ್ಷದ ಹಿರಿಯ ಪತ್ರಕರ್ತ), ಜೀ ಕನ್ನಡ ವಾಹಿನಿಯ ಎಂ.ಅರುಣ್ ದೇವ್(ವರ್ಷದ ಹಿರಿಯ ಕ್ಯಾಮೆರಾಮೆನ್) ಅವರನ್ನು ಅಭಿನಂದಿಸಲಾಯಿತು.
ಉತ್ತಮ ವರದಿಗಾರರಿಗೆ ಪ್ರಶಸ್ತಿ:
ವರ್ಷದ ಉತ್ತಮ ಕನ್ನಡ ವರದಿಗೆ ಉದಯವಾಣಿಯ ಆರ್.ವೀರೇಂದ್ರ ಪ್ರಸಾದ್, ವಿಜಯವಾಣಿಯ ಅವಿನಾಶ್ ಜೈನಹಳ್ಳಿ, ವರ್ಷದ ಇಂಗ್ಲಿಷ್ ವರದಿಗೆ ಡೆಕ್ಕಾನ್ ಹೆರಲ್ಡ್ನ ಪಿ.ಶಿಲ್ಪಾ, ಇಂಡಿಯನ್ ಎಕ್ಸ್ಪ್ರೆಸ್ನ ಕೆ.ಕೆ.ಕಾರ್ತಿಕ್, ಮೈಸೂರು ಮಿತ್ರ ಛಾಯಾಗ್ರಹಕ ಲಕ್ಷ್ಮಿನಾರಾಯಣ್ ಯಾದವ್ ಅವರಿಗೆ ವರ್ಷದ ಫೋಟೋಗ್ರಾಫಿ, ದೃಶ್ಯ ಮಾಧ್ಯಮದಿಂದ ನ್ಯೂಸ್ 18 ವಾಹಿನಿಯ ಕೆ.ಎಸ್.ಆನಂದ್, ಪಿ.ರಾಹುಲ್ ಅವರಿಗೆ ಪ್ರಶಸ್ತಿ ನೀಡಲಾಯಿತು.
Key words: Work with Social Responsibility, to Shed, the ‘Godi Media’ Tag, Dr. Yathindra

ENGLISH SUMMARY:
Work with Social Responsibility to Shed the ‘Godi Media’ Tag: Dr. Yathindra
Questions are being raised about the credibility of the media in the country. Earning the trust of the people is one of the biggest challenges before the media, and whether journalists gain or lose public trust is ultimately in their own hands, said Minister Dr. Yathindra Siddaramaiah.

Former Chief Minister Siddaramaiah inaugurated the construction work of the Journalists’ Bhavan at the KNS Layout premises in Mysuru on Saturday. The event was organized by the Mysuru District Journalists’ Association, and Siddaramaiah extended his best wishes for the project.
Later, at the stage programme, Minister Yathindra Siddaramaiah inaugurated the Press Day celebrations, felicitated senior journalists, and presented the annual journalism awards.






