ಬೆಂಗಳೂರು, ಆಗಸ್ಟ್,20,2026 (www.justkannada.in): ರಾಜ್ಯದ ಬಿಸಿಯೂಟ ನೌಕರರ ಪರವಾಗಿ ಎಂದಿಗೂ ನಾನು ಜೊತೆ ಇರುತ್ತೇನೆ. ಮಾನ್ಯ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ ಅವರ ಮಗನಾಗಿ ನಿಮಗೆಲ್ಲ ಸಹಾಯ ಮಾಡಲು ಸಿದ್ಧನಿದ್ದೇನೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಮಧು ಬಂಗಾರಪ್ಪ ಅವರು ಬಿಸಿಯೂಟ ನೌಕರರಿಗೆ ಭರವಸೆ ನೀಡಿದ್ದಾರೆ.
ಸ್ವಾತಂತ್ರ್ಯ ಉದ್ಯಾನವನದಲ್ಲಿ ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಪ್ರತಿಭಟಿಸುತ್ತಿರುವ ರಾಜ್ಯ ಅಕ್ಷರದಾಸೋಹ ಬಿಸಿಯೂಟ ತಯಾರಕರ ಯೂನಿಯನ್ ಸದಸ್ಯರನ್ನು ಇಂದು ವಿಧಾನಸೌಧದದಲ್ಲಿನ ತಮ್ಮ ಕಚೇರಿಗೆ ಕರೆಸಿಕೊಂಡು, ಅವರೊಂದಿಗೆ ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ ಸಚಿವ ಮಧು ಬಂಗಾರಪ್ಪ ಅವರು ಈ ಭರವಸೆ ನೀಡಿದ್ದಾರೆ.
ರಾಜ್ಯ ಅಕ್ಷರದಾಸೋಹ ಬಿಸಿಯೂಟ ತಯಾರಕರ ಯೂನಿಯನ್ ಅಧ್ಯಕ್ಷ ಹೊನ್ನಪ್ಪ ಮರೆಮ್ಮನವರ ಅವರು, ಕನಿಷ್ಠ ವೇತನ ನೀಡುವುದು, ಬಿಸಿಯೂಟ ತಯಾರಕರಿಗೆ ಇಡುಗಂಟು ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಗಳನ್ನು ಸಚಿವರ ಮುಂದೆ ಮಂಡಿಸಿದರು.
ಕನಿಷ್ಠ ವೇತನ ದರಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಚಿವ ಸಂಪುಟ ಉಪಸಮಿತಿಯನ್ನು ರಚಿಸಲಾಗಿದೆ. ಇದರಲ್ಲಿ ನಾನೂ ಸದಸ್ಯನಿದ್ದೇನೆ. ಬಿಸಿಯೂಟ ನೌಕರರ ಸಮಸ್ಯೆಗಳ ಬಗ್ಗೆ ಖಂಡಿತ ಗಮನವಿದೆ. ಸರ್ಕಾರದ ಅಂಗ ನೀವು. ನಮ್ಮ ಮಕ್ಕಳನ್ನು ನೀವೂ ನೋಡಿಕೊಳ್ಳುತ್ತಿದ್ದೀರಿ. ನಿಮ್ಮ ಬಗ್ಗೆ ನನಗೆ ಸಹಾನುಭೂತಿ ಇದೆ. ನಿಮ್ಮ ಕಷ್ಟಕ್ಕೆ ಸ್ಪಂದಿಸುವುದು ನನ್ನ ಕರ್ತವ್ಯ. ಸರ್ಕಾರದ ನಿಯಮಗಳ ಅಡಿಯಲ್ಲಿ ನಿಮಗೇನು ಸಹಾಯ ಮಾಡಲು ಆಗುತ್ತದೆಯೋ ಅದನ್ನೆಲ್ಲ ಮಾಡುತ್ತೇನೆ ಎಂದು ನಿಯೋಗಕ್ಕೆ ಭರವಸೆ ನೀಡಿದರು.
ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚನೆ :
ಯಾವ ಯಾವ ರಾಜ್ಯದಲ್ಲಿ ಎಷ್ಟು ವೇತನ ನೀಡಲಾಗುತ್ತಿದೆ? ಜೊತೆಗೆ ಬೇರೆ ಬೇರೆ ಸೌಲಭ್ಯಗಳನ್ನು ಹೇಗೆ ವಿತರಿಸಲಾಗುತ್ತಿದೆ? ಕೇಂದ್ರ ಸರ್ಕಾರ ಮತ್ತು ಉಳಿದ ರಾಜ್ಯ ಸರ್ಕಾರಗಳು ಇಡುಗಂಟು ಎಷ್ಟು ನೀಡುತ್ತಿವೆ? ಅದರಲ್ಲೂ ಮುಖ್ಯವಾಗಿ ದಕ್ಷಿಣ ಭಾರತದ ರಾಜ್ಯಗಳ ಸ್ಥಿತಿಗತಿ ಹೇಗಿದೆ? ಎಂಬುದರ ಕುರಿತು ಶೀಘ್ರ ವರದಿ ಕೊಡಿ ಎಂದು ಸ್ಥಳದಲ್ಲೇ ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಸಚಿವ ಮಧು ಬಂಗಾರಪ್ಪ ಸೂಚಿಸಿದರು.
ಅಧಿಕಾರಿಗಳ ಮಾಹಿತಿ ಮತ್ತು ನಿಮ್ಮ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಮೂರು ವರ್ಷದ ಅವಧಿಯಲ್ಲಿ ನಾನು ನಿಮಗೆ ಹಲವಾರು ಬಾರಿ ನೆರವಾಗಿದ್ದೇನೆ. ಈಗಲೂ ನಿಮ್ಮ ಕಷ್ಟ ಸುಖಗಳ ಜೊತೆ ಇರುತ್ತೇನೆ ಎಂದು ಹೇಳಿದರ ಸಚಿವ ಮಧು ಬಂಗಾರಪ್ಪ, ಕಳೆದ ದೀಪಾವಳಿ ಸಂದರ್ಭದಲ್ಲಿ ಹಬ್ಬ ಆಚರಿಸಲು ಮುಂಚಿತವಾಗಿ ನಿಮಗೆಲ್ಲ ಹಣ ಬಿಡುಗಡೆಗೊಳಿಸಿದ್ದೆ ಎಂದು ಸ್ಮರಿಸಿದರು. ನಿಮ್ಮ ಕಷ್ಟವನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ದೂರದ ಊರಿಂದ ಬಂದು, ಹೀಗೆ ದುಡಿಮೆಯ ಹಣವನ್ನು ಖರ್ಚು ಮಾಡಿಕೊಂಡು ಪ್ರತಿಭಟಿಸಬೇಡಿ. ಏನೇ ಇದ್ದರೂ ನೇರವಾಗಿ ನನ್ನ ಮನೆಗೆ ಬನ್ನಿ” ಎಂದು ಸಚಿವರು ಕಿವಿಮಾತು ಹೇಳಿದರು.
ಗೃಹಲಕ್ಷ್ಮಿ ಹಣವನ್ನು ಎಲ್ಲಾ ಬಿಸಿಯೂಟದ ಮಹಿಳಾ ನೌಕರರಿಗೆ ನೀಡಬೇಕು ಎಂದು ನಿಯೋಗವು ಸಚಿವರಿಗೆ ಮನವಿ ಮಾಡಿತು. ಇದಕ್ಕೆ ಸ್ಪಂದಿಸಿದ ಸಚಿವ ಮಧು ಬಂಗಾರಪ್ಪ, “ನಮ್ಮ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ನಿಮ್ಮ ಮನೆಯ ಆರ್ಥಿಕತೆಗೆ ಶಕ್ತಿ ತುಂಬಿವೆ. ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೂ ತರುತ್ತೇನೆ. ಸಾಧ್ಯತೆ ಇದ್ದರೆ ಗೃಹಲಕ್ಷ್ಮಿ ಹಣವನ್ನು ಕೊಡಿಸೋಣ” ಎಂದು ತಿಳಿಸಿದರು.
ನಿಯೋಗದಲ್ಲಿ ಸಂಘಟನೆಯ ಕಾರ್ಯದರ್ಶಿ ಕಲ್ಪನಾ ವಿ ಜಿ, ಕಜಾಂಚಿ ಪುಷ್ಪಲತಾ ಸದಸ್ಯರಾದ ನಿರ್ಮಲಾ ರಾಮನಗರ, ಉಮಾದೇವಿ, ರಾಜೇಶ್ವರಿ ಪಾಟೀಲ್ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
Key words: increase, minimum wage, Bisiyuta employees, Minister, Madhu Bangarappa






