ಬೆಂಗಳೂರು,ಆಗಸ್ಟ್,20,2026 (www.justkannada.in): ಕೆಎಂಎಫ್ ಪಶು ಆಹಾರ ಕಲಬೆರಕೆ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಹಿರಿಯ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಜಿಎಸ್ ನಾಗೇಶ್ ಹಿರಿಯ ಉಪನಿರ್ದೇಶಕರು(ಪಶು ಆಹಾರ), ಜೆ.ಜಯಕುಮಾರ್ ನಿರ್ದೇಶಕರು (ಪಶು ಆಹಾರ), ಸೋಮನಾಥ್ ಉಪನಿರ್ದೇಶಕರು(ಪಶು ಆಹಾರ), ಸಿ ಮಲ್ಲಿಕಾರ್ಜುನ ವ್ಯವಸ್ಥಾಪಕರು(ಪಶು ಆಹಾರ) ಅಮಾನತಾದವರು. ಅಮಾನತು ಮಾಡಿ ಕೆಎಂಎಫ್ ಎಂಡಿ ಡಾ.ಎಸ್ ಟಿ ಸುರೇಶ್ ಅವರು ಆದೇಶ ಹೊರಡಿಸಿದ್ದಾರೆ.
ರಾಜಾನುಕುಂಟೆ ಪಶು ಆಹಾರ ಘಟಕದಲ್ಲಿ ಕಳಪೆ ಗುಣಮಟ್ಟದ ಕಚ್ಚಾ ವಸ್ತುಗಳನ್ನು ಬಳಸಿ ಪಶು ಆಹಾರ ತಯಾರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇಂತಹ ಆಹಾರವನ್ನು ರೈತರಿಗೆ ಪೂರೈಕೆ ಮಾಡಲಾಗಿದ್ದು, ಅದನ್ನು ಸೇವಿಸಿದ ಬಳಿಕ ಹಲವು ಪಶುಗಳು ಅನಾರೋಗ್ಯಕ್ಕೆ ಒಳಗಾಗಿವೆ ಎಂದು ರೈತರು ಆರೋಪಿಸಿದ್ದಾರೆ.
ಪಶು ಆಹಾರ ತಯಾರಿಕೆಗೆ ಬಳಸುವ ಕಚ್ಚಾ ವಸ್ತುಗಳ ಖರೀದಿ ಮತ್ತು ಗುಣಮಟ್ಟದ ಪರಿಶೀಲನೆಯಲ್ಲಿ ಅಕ್ರಮ ನಡೆದಿರುವ ಅನುಮಾನವನ್ನು ರೈತರು ವ್ಯಕ್ತಪಡಿಸಿದ್ದಾರೆ. ಸುಮಾರು 86 ಸಾವಿರ ಮೆಟ್ರಿಕ್ ಟನ್ ಪಶು ಆಹಾರ ಕಳಪೆ ಗುಣಮಟ್ಟದ್ದಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಆಹಾರವನ್ನು ರೈತರು ಸ್ವೀಕರಿಸದೆ ಘಟಕಕ್ಕೆ ವಾಪಸ್ ಕಳುಹಿಸುತ್ತಿದ್ದಾರೆ ಎಂಬುದು ತಿಳಿದುಬಂದಿದೆ.
ಪಶು ಆಹಾರ ತಯಾರಿಕೆಗೆ ಬಳಸುವ ಮೊಲಾಸಸ್ (ಕಾಕಂಬಿ) ಸೇರಿದಂತೆ ವಿವಿಧ ಕಚ್ಚಾ ವಸ್ತುಗಳ ಖರೀದಿಯಲ್ಲೂ ಅಕ್ರಮ ನಡೆದಿರುವ ಆರೋಪವಿದೆ. ಗುಣಮಟ್ಟ ಕಡಿಮೆ ಇರುವ TRS ಹೊಂದಿದ್ದ ಕಾಕಂಬಿಯನ್ನು ಖರೀದಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದ್ದು ನಿನ್ನೆ ಈ ಕುರಿತು ಮಾಧ್ಯಮವೊಂದರಲ್ಲಿ ವರದಿಯಾಗಿತ್ತು.
Key words: KMF, animal, feed, adulteration case, Four, senior officials, suspended







