ಮೈಸೂರು,ಆಗಸ್ಟ್,19,2026 (www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಜಂಬೂಸವಾರಿಯಿಂದ ಕ್ಯಾಪ್ಟನ್ ಅಭಿಮನ್ಯುವನ್ನು ಕೈಬಿಟ್ಟಿರುವ ಕ್ರಮಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಭಿಮನ್ಯುವನ್ನು ಏಕಾಏಕಿ ದಸರಾ ಮಹೋತ್ಸವದಿಂದ ಹೊರಗಿಡುವ ಬದಲು ನಿಶಾನೆ ಆನೆಯಾಗಿ ಬಳಸಿಕೊಂಡು ಗೌರವಪೂರ್ವಕವಾಗಿ ಹಾಗೂ ರಾಜೋಚಿತವಾಗಿ ಬೀಳ್ಕೊಡಬೇಕು ಎಂದು ಸಚಿವ ಈಶ್ವರ್ ಖಂಡ್ರೆ ಅವರು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಮಾಡಿದ್ದಾರೆ.
59 ವರ್ಷದ ಅಭಿಮನ್ಯು ನಾಗರಹೊಳೆ ಮತ್ತಿಗೋಡು ಆನೆ ಶಿಬಿರದಲ್ಲಿದ್ದು, 300ಕ್ಕೂ ಹೆಚ್ಚು ಆನೆ ಕಾರ್ಯಾಚರಣೆಗಳು ಹಾಗೂ 80ಕ್ಕೂ ಹೆಚ್ಚು ಹುಲಿ ಸೆರೆ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದಾನೆ. ದಸರಾ ಮಹೋತ್ಸವದಲ್ಲಿ ಆರು ಬಾರಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತು ನಾಡಿನ ಜನರ ಮನಗೆದ್ದಿದ್ದಾನೆ ಎಂದು ಖಂಡ್ರೆ ತಿಳಿಸಿದ್ದಾರೆ.
ಅಭಿಮನ್ಯುವನ್ನು ದಸರಾ ಗಜಪಡೆಯಿಂದ ಕೈಬಿಟ್ಟಿರುವುದು ಲಕ್ಷಾಂತರ ಅಭಿಮಾನಿಗಳಿಗೆ ಆಘಾತ ತಂದಿದೆ. ದಸರಾ ಆನೆಗಳೊಂದಿಗೆ ರಾಜ್ಯದ ಜನತೆಗೆ ಭಾವನಾತ್ಮಕ ಸಂಬಂಧವಿದ್ದು, ವಿಶೇಷವಾಗಿ ಅಂಬಾರಿ ಹೊರುವ ಆನೆಗಳ ಬಗ್ಗೆ ಅಪಾರ ಅಭಿಮಾನವಿದೆ ಎಂದು ಸಚಿವ ಈಶ್ವರ್ ಖಂಡ್ರೆ ಅವರು ಹೇಳಿದ್ದಾರೆ.
ಈ ಹಿಂದೆ ಅರ್ಜುನ 60 ವರ್ಷ ತುಂಬಿದ ಬಳಿಕವೂ ದಸರಾ ಮಹೋತ್ಸವದಲ್ಲಿ ಭಾಗವಹಿಸಿದ್ದ ಉದಾಹರಣೆಯನ್ನು ಖಂಡ್ರೆ ಉಲ್ಲೇಖಿಸಿದ್ದಾರೆ. 1968ರಲ್ಲಿ ಕಾಕನಕೋಟೆ ಖೆಡ್ಡಾ ಕಾರ್ಯಾಚರಣೆಯಲ್ಲಿ ಸೆರೆ ಸಿಕ್ಕಿದ್ದ ಅರ್ಜುನ 22 ಬಾರಿ ಜಂಬೂಸವಾರಿಯಲ್ಲಿ ಪಾಲ್ಗೊಂಡು, ಎಂಟು ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ. ಇದೇ ರೀತಿ ಬಲರಾಮನಿಗೂ ಗೌರವ ನೀಡಲಾಗಿತ್ತು.
ಹೀಗಾಗಿ ಇದೇ ಮಾದರಿಯಲ್ಲಿ ಅಭಿಮನ್ಯುವಿಗೂ ಗೌರವ ನೀಡಬೇಕು. ಅಭಿಮನ್ಯುವನ್ನು ನಿಶಾನೆ ಆನೆಯಾಗಿ ಜಂಬೂಸವಾರಿಯಲ್ಲಿ ಭಾಗವಹಿಸಿ, ರಾಜೋಚಿತವಾಗಿ ಬೀಳ್ಕೊಡುವ ಮೂಲಕ ಆತನ ಸೇವೆಗೆ ಗೌರವ ಸಲ್ಲಿಸಬೇಕು ಎಂದು ಈಶ್ವರ ಖಂಡ್ರೆ ಮತ್ತೊಮ್ಮೆ ಒತ್ತಾಯಿಸಿದ್ದಾರೆ.
ENGLISH SUMMARY…
Give Captain Abhimanyu a Royal Farewell: Eshwar Khandre
Mysuru: Rural Development and Panchayat Raj Minister Eshwar B. Khandre has urged Forest Minister Ramalinga Reddy to give Captain Abhimanyu a respectful and royal farewell at the Mysuru Dasara.
Khandre expressed disappointment over Abhimanyu being dropped from this year’s Dasara festivities, saying the 59-year-old elephant has a special place in the hearts of people.
Abhimanyu has participated in 300+ elephant operations and 80+ tiger capture operations, besides carrying the 750-kg Golden Howdah six times.
Khandre suggested that Abhimanyu be included as the Nishane Elephant in the Vijayadashami procession and honoured for his long service, citing the examples of Arjuna and Balarama.
Key words: Mysore Dasara, Captain, Abhimanyu, Royal Farewell, Minister Eshwar Khandre






