ಬೆಂಗಳೂರು,ಆಗಸ್ಟ್,3,2026 (www.justkannada.in): ನಿನ್ನೆ ನಡೆದ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿನ ಗೊಂದಲ ಹಾಗೂ ವೈಫಲ್ಯಕ್ಕೆ ಯಾರ ರಾಜೀನಾಮೆ ಪಡೆಯುತ್ತೀರಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೇ? ಎಂದು ವಿಧಾನ ಪರಿಷತ್ ಸದಸ್ಯ ಸಿ. ಟಿ ರವಿ ಟಾಂಗ್ ಕೊಟ್ಟಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಎಂಎಲ್ ಸಿ ಸಿ. ಟಿ ರವಿ ಅವರು, ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯ ವೈಫಲ್ಯಕ್ಕೆ ಯಾರ ರಾಜೀನಾಮೆ ಪಡೆಯುತ್ತೀರಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೇ? ಕಾಂಗ್ರೆಸ್ ಸರ್ಕಾರ ನಡೆಸಿರುವ ಪ್ರತಿಯೊಂದು ನೇಮಕಾತಿ ಪರೀಕ್ಷೆಯೂ ಗೊಂದಲದ ಗೂಡು, ವೈಫಲ್ಯವೇ ಆಗಿಹೋಗಿದೆ. ಈ ಬಾರಿಯೂ ಯುವ ಜನರ ಭವಿಷ್ಯದೊಡನೆ ರಾಜ್ಯ ಸರ್ಕಾರ ಆಟವಾಡಿದೆ.
ವರ್ಷಗಟ್ಟಲೆ ನಿರಂತರವಾಗಿ ಪೊಲೀಸ್ ಉದ್ಯೋಗಕ್ಕಾಗಿ ಗ್ರಾಮೀಣ ಭಾಗದ ಯುವಕ ಯುವತಿಯರು ಕಠಿಣ ತರಬೇತಿ, ಅಭ್ಯಾಸ ನಡೆಸಿದ್ದಾರೆ. ಆದರೆ, ಒಎಂಆರ್ ಶೀಟ್ ಗೊಂದಲ, ಅಸಮರ್ಥ ವ್ಯವಸ್ಥೆಗಳಿಂದ ಅವರ ಭವಿಷ್ಯಕ್ಕೆ ತೊಂದರೆಯಾಗಿದೆ. ಅಭ್ಯರ್ಥಿಗಳು ನಡೆಸಿರುವ ಪ್ರತಿಭಟನೆ ರಾಜ್ಯ ಸರ್ಕಾರದ ವೈಫಲ್ಯಕ್ಕೆ ನೀಡಿರುವ ಇನ್ನೊಂದು ಸರ್ಟಿಫಿಕೇಟ್ ಎಂದು ಟೀಕಿಸಿದ್ದಾರೆ.
ರಾಜ್ಯದ ಗೃಹ ಸಚಿವರು ಬೇರೆಯವರಿಗೆ ಸರ್ಟಿಫಿಕೇಟ್ ಕೊಡುತ್ತಾ, ತನ್ನ ಇಲಾಖೆ ಮಾಡುವ ಕೆಲಸವನ್ನು ಕಡೆಗಣಿಸಿದ್ದರಿಂದ ಇಂತಹ ಸ್ಥಿತಿ ಬಂದಿದೆ. ಒಂದೇ ಒಂದು ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸಲು ಸರ್ಕಾರದ ಕೈಯಲ್ಲಿ ಸಾಧ್ಯವಾಗುತ್ತಿಲ್ಲ. ಗೊಂದಲ ಏರ್ಪಟ್ಟ ಕೇಂದ್ರದ ಅಭ್ಯರ್ಥಿಗಳಿಗೆ ವಿಳಂಬವಿಲ್ಲದಂತೆ ಮರು ಪರೀಕ್ಷೆ ನಡೆಸಬೇಕು. ತನಿಖೆ ನಡೆಸಿ,ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು. ದೆಹಲಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ನೀಡಿದ ಮುಖ್ಯಮಂತ್ರಿಗಳು ರಾಜ್ಯದ ಯುವಕರಿಗೆ ನ್ಯಾಯ ಒದಗಿಸುವ ಸಲುವಾಗಿ ಈ ಗೊಂದಲಕ್ಕೆ ಹೊಣೆಗಾರರಾದ ಗೃಹ ಸಚಿವರ ರಾಜೀನಾಮೆ ಪಡೆಯಲಿ ಎಂದು ಸಿ ಟಿ ರವಿ ಒತ್ತಾಯಿಸಿದ್ದಾರೆ.
Key words: Confusion, police constable exam, resignation, MLC, C.T Ravi







