ಭಾರತ್ ಜೋಡೋ ಸಂಘಗಳ ಕುರಿತ ಅಶೋಕ್ ಆಕ್ಷೇಪ ಖಂಡನಾರ್ಹ- ಹೆಚ್.ಎ ವೆಂಕಟೇಶ್

ಮೈಸೂರು,ಜುಲೈ,17,2026 (www.justkannada.in): ಯುವಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಸಂಘಟನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರೂಪಿಸಿರುವ ಭಾರತ್ ಜೋಡೋ ಯುವ ಸಂಘಗಳ ಕುರಿತು, ವಿಪಕ್ಷ ಬಿಜೆಪಿ ನಾಯಕ ಆರ್. ಅಶೋಕ್ ಮುಂದಿಡುತ್ತಿರುವ ಆಕ್ಷೇಪ ಖಂಡನಾರ್ಹ ಎಂದು ಕೆಪಿಸಿಸಿ ವಕ್ತಾರ ಹೆಚ್ ಎ ವೆಂಕಟೇಶ್ ಟೀಕಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ಮೂಲಕ ಪ್ರತಿಕ್ರಿಯಿಸಿರುವ ಹೆಚ್.ಎ ವೆಂಕಟೇಶ್, ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸುವ ಯುವಜನತೆಯ ಮನಸ್ಸಿನಲ್ಲಿ ಕೋಮು ವಿಷ ತುಂಬಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದ ಬಿಜೆಪಿಯವರಿಗೆ  ಕಾಂಗ್ರೆಸ್ ಸರ್ಕಾರದ ಈ ಯುವ ಅಭಿವೃದ್ಧಿ ಯೋಜನೆ  ಕುಟುಕುತ್ತಿದೆ ಎನ್ನಬಹುದು.

ಬಿಜೆಪಿಯವರು ಇದುವರೆಗೆ ಯುವ ಜನತೆಯನ್ನು ದಾರಿ ತಪ್ಪಿಸಿ, ಇವರನ್ನು ತಮ್ಮ ದುಷ್ಟ ರಾಜಕೀಯ ಹುನ್ನಾರಗಳಿಗೆ ಬಲಿಪಶು ಮಾಡಿಕೊಳ್ಳುತ್ತಿದ್ದರು. ಕೋಮು ದಳ್ಳುರಿಗೆ ಯುವಕರನ್ನು ನೂಕಿ, ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ ಲಾಭ ಪಡೆದು ಅಧಿಕಾರಕ್ಕೆ ಏರುತ್ತಿದ್ದರು. ಬಿಜೆಪಿಯವರೇ ಮುನ್ನಡೆಸುವ ಹತ್ತಾರು ಕೋಮುವಾದಿ ಸಂಘಟನೆಗಳ ನಾಯಕರ ಮಾತಿನಿಂದ ದಿಕ್ಕು ತಪ್ಪಿದ ಯುವಜನತೆ, ಕೋಮುಗಲಭೆ- ಹಿಂಸೆ- ಮುಂತಾದ ಘಟನೆಗಳಲ್ಲಿ ಭಾಗಿಯಾಗಿ,  ಇಂದಿಗೂ ಸಹ ಜೈಲುಗಳಲ್ಲಿ ಕೊಳೆಯುತ್ತಿರುವುದು ಹಾಗೂ ವಿವಿಧ ನ್ಯಾಯಾಲಯಗಳಿಗೆ ಅಲೆಯುತ್ತಿರುವುದನ್ನು ಕಾಣಬಹುದು ಎಂದು ತಿಳಿಸಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಬಿಜೆಪಿ ಪ್ರೇರಿತ ಕೋಮುವಾದಿ ಸಂಘಟನೆಗಳ ನಾಯಕರು ಯುವಜನತೆಯನ್ನು ದಾರಿ ತಪ್ಪಿಸಿರುವ ಸಾವಿರಾರು ಪ್ರಕರಣಗಳಿವೆ. ಈ ಹಿನ್ನಲೆಯಲ್ಲಿ ಯುವಜನತೆಯಲ್ಲಿ ಜಾಗೃತಿ ಮೂಡಿಸಿ ಸಮಾನತೆ ಹಾಗೂ ಸಮಾಜಮುಖಿ ರಾಜಕೀಯ ಪ್ರಜ್ಞೆ ಜಾಗೃತಗೊಳಿಸಲು ರಾಜ್ಯ ಸರ್ಕಾರ ಭಾರತ್ ಜೋಡೋ ಯುವಸಂಘಗಳ ರಚನೆಗೆ ಮುಂದಾಗಿರುವುದು ಸ್ವಾಗತಾರ್ಹ ಎಂದು ಹೆಚ್ ಎ ವೆಂಕಟೇಶ್ ತಿಳಿಸಿದ್ದಾರೆ.

ಯಾವುದೇ ಜಾತಿ ಧರ್ಮದ ಭೇದ ಭಾವವಿಲ್ಲದೆ, ಎಲ್ಲರನ್ನೂ ಒಳಗೊಳ್ಳುವ ಆರೋಗ್ಯಕರ ಸಮಾಜ ನಿರ್ಮಾಣ  ಈ ಸಂಘಗಳ ಮುಖ್ಯ ಉದ್ದೇಶವಾಗಿದೆ. ಇದೊಂದು ಮಹೋನ್ನತ ಆಶಯವಾಗಿದೆ. ಯುವ ಜನತೆಗಾಗಿ ಆರೋಗ್ಯಕರ ಜೀವನ ಶೈಲಿ,  ನಾಯಕತ್ವ ಮತ್ತು ಸಂಘಟನಾ  ಮನೋಭಾವ ವೃದ್ಧಿಸುವುದು,  ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸುವುದು  ಭಾರತ್ ಜೋಡೋ ಯುವ ಸಂಘಗಳ ಉದ್ದೇಶ.

ಯುವಜನತೆಯ ಮಾನಸಿಕ ದೈಹಿಕ ಬೆಳವಣಿಗೆಯ  ಆಶಯದೊಂದಿಗೆ ಭಾರತ್ ಜೋಡೋ ಸಂಘ ಕಾರ್ಯನಿರ್ವಹಣೆ ಆರಂಭಿಸಿದರೆ,  ತಮ್ಮ ರಾಜಕೀಯ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ ಎನ್ನುವುದು ಬಿಜೆಪಿಯವರಿಗೆ  ಮನವರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ಪಕ್ಷದ ನಾಯಕ ಆರ್. ಅಶೋಕ್  ಭಾರತ್ ಜೋಡೋ ಸಂಘಗಳನ್ನು ಗಂಜಿ ಕೇಂದ್ರಗಳೆಂದು ಲೇವಡಿ ಮಾಡಿದ್ದಾರೆ. ಯುವಜನತೆ ಬಿಜೆಪಿಯ ಈ ಹುನ್ನಾರವನ್ನು ಮನವರಿಕೆ ಮಾಡಿಕೊಂಡಿದೆ. ಜಾಗೃತ ಯುವ ಮನಸ್ಸುಗಳು ರಾಜ್ಯವನ್ನು ಮುಂದೆ ಎಂದಿಗೂ ಸಹ ಕೋಮುವಾದಿಗಳ ವಶಕ್ಕೆ ನೀಡುವುದಿಲ್ಲ ಎನ್ನುವುದು ಬಿಜೆಪಿಯವರಿಗೆ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿಯೇ ಈ ಪಕ್ಷದ ನಾಯಕರು ಭಾರತ್ ಜೋಡೋ ಸಂಘಗಳ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಬಿಜೆಪಿ ನಾಯಕರ ಗುಬೆಲ್ಸ್ ಪ್ರಚಾರದ ನಡುವೆಯೂ;  ಯುವಜನತೆ ಎಚ್ಚೆತ್ತುಕೊಂಡಿರುವುದು; ರಾಜ್ಯ ಸರ್ಕಾರ ಯುವ ಜನತೆಯ ಆಶಯಕ್ಕೆ ಪೂರಕವಾಗಿ ಕ್ರಮವಹಿಸುತ್ತಿರುವುದು ಸ್ವಾಗತಾರ್ಹ ಎಂದಿದ್ದಾರೆ.

Key words: Bharat Jodo Sanghas, Ashok, condemnable, H.A. Venkatesh