ಮೈಸೂರು,ಜುಲೈ,14,2026 (www.justkannada.in): ನಗರದ ಪಾದಚಾರಿಗಳ ಸಂಚಾರಕ್ಕೆ ಅಡಚಣೆಯಾಗಿದ್ದ ಅತಿಕ್ರಮಣಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಮೈಸೂರು ಮಹಾನಗರ ಪಾಲಿಕೆ ವಲಯ 6 ರವತಿಯಿಂದ ಇಂದು ವಿಶೇಷ ಕಾರ್ಯಾಚರಣೆ ನಡೆಸಲಾಯಿತು.
ಈ ಕಾರ್ಯಾಚರಣೆಗೆ ಪೂರ್ವಭಾವಿಯಾಗಿ ಜುಲೈ 14ರಂದು ಮೈಕ್ ಮೂಲಕ ವ್ಯಾಪಕ ಪ್ರಚಾರ ನಡೆಸಿ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರಲ್ಲಿ ಅರಿವು ಮೂಡಿಸಲಾಗಿತ್ತು. ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸದಂತೆ ಹಾಗೂ ಸ್ವಯಂಪ್ರೇರಿತವಾಗಿ ತೆರವುಗೊಳಿಸಿಕೊಳ್ಳುವಂತೆ ಸೂಚನೆ ನೀಡಲಾಗಿತ್ತು.
ನಿಗದಿತ ಕಾರ್ಯಕ್ರಮದಂತೆ ಇಂದು ಮೈಸೂರು ಮಹಾನಗರ ಪಾಲಿಕೆಯ ವಲಯ-6 ವ್ಯಾಪ್ತಿಯ ಆಯುರ್ವೇದಿಕ್ ವೃತ್ತದಿಂದ ಸಬರ್ಬನ್ ಬಸ್ ನಿಲ್ದಾಣದವರೆಗೆ ಇರುವ ಇರ್ವಿನ್ ರಸ್ತೆಯ ಎರಡೂ ಬದಿಯ ಪಾದಚಾರಿ ಮಾರ್ಗಗಳಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು.
ಪೊಲೀಸ್ ಇಲಾಖೆ ಹಾಗೂ ಮೈಸೂರು ಮಹಾನಗರ ಪಾಲಿಕೆ ಸಿಬ್ಬಂದಿಯ ಸಹಯೋಗದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಪಾದಚಾರಿ ಮಾರ್ಗಗಳ ಮೇಲೆ ನಿರ್ಮಿಸಲಾಗಿದ್ದ ತಾತ್ಕಾಲಿಕ ಶೆಡ್ ಗಳು, ವ್ಯಾಪಾರ ವಸ್ತುಗಳು ಸೇರಿದಂತೆ ವಿವಿಧ ಅತಿಕ್ರಮಣಗಳನ್ನು ತೆರವುಗೊಳಿಸಲಾಯಿತು.
ನಗರದಲ್ಲಿ ಪಾದಚಾರಿಗಳಿಗೆ ಸುಗಮ ಹಾಗೂ ಸುರಕ್ಷಿತ ಸಂಚಾರ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಮುಂದಿನ ದಿನಗಳಲ್ಲಿಯೂ ಇಂತಹ ಕಾರ್ಯಾಚರಣೆಗಳು ಮುಂದುವರಿಯಲಿದೆ.
Key words: Mysore, encroachments, footpaths, Clearing, Operation






