ಅನುಪಮ‌‌‌ ಪ್ರಸಾದ್ ಅವರ ‘ಚ್ಯೋದ್ಯ’ ಕಥಾಸಂಕಲನಕ್ಕೆ ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ

ಮೈಸೂರು,ಮೇ,19,2026 (www.justkannada.in): ಕತೆಗಾರ್ತಿ ಅನುಪಮಾ ಪ್ರಸಾದ್ ಅವರ ‘ಚೋದ್ಯ’ ಕಥಾ ಸಂಕಲನವು  2026 ನೇ ಸಾಲಿನ ಡಾ. ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ. ಬೆಂಗಳೂರಿನ ‘ಅಮೂಲ್ಯ ಪುಸ್ತಕ’ ಪ್ರಕಾಶನವು ಈ ಸಂಕಲನವನ್ನು ಪ್ರಕಟಿಸಿದೆ.

ಮೈಸೂರಿನ ಸಮತಾ ಅಧ್ಯಯನ ಕೇಂದ್ರ(ರಿ)ವು 2022 ರಲ್ಲಿ ಸ್ಥಾಪಿಸಿರುವ ಈ ಪ್ರಶಸ್ತಿಗೆ ಈ‌ ಬಾರಿ 2022- 25ರ ಅವಧಿಯಲ್ಲಿ ಲೇಖಕಿಯರು ಪ್ರಕಟಿಸಿದ ಕಥಾ ಸಂಕಲನಗಳನ್ನು ಆಹ್ವಾನಿಸಿತ್ತು.

ಲೇಖಕಿಯರು, ಪ್ರಕಾಶಕರಿಂದ 63 ಸಂಕಲನಗಳು ಸ್ಪರ್ಧೆಗೆ ಬಂದಿದ್ದವು. ಹಿರಿಯ ಲೇಖಕರಾದ ಡಾ. ಸಬಿತಾ ಬನ್ನಾಡಿ, ಸ್ವಾಮಿ ಪೊನ್ನಾಚಿ , ಡಾ. ಎಂ.ಎಸ್. ವೇದಾ ಅವರಿದ್ದ ತೀರ್ಪುಗಾರರ ಸಮಿತಿಯು ‘ಚೋದ್ಯ’ ಸಂಕಲನವನ್ನು ಪ್ರಶಸ್ತಿಗೆ ಆಯ್ಕೆಮಾಡಿದೆ.  25 ಸಾವಿರ ರೂ. ನಗದನ್ನು ಪ್ರಶಸ್ತಿ ಒಳಗೊಂಡಿದೆ.

ಸ್ಪರ್ಧೆಗಳ‌ ಫಲಿತಾಂಶ:  ಅಧ್ಯಯನ ಕೇಂದ್ರವು ಡಾ.ವಿಜಯಾ ದಬ್ಬೆ ಅವರ ನೆನಪಿನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕವನ‌ ಮತ್ತು ಲಲಿತಪ್ರಬಂಧ ಸ್ಪರ್ಧೆಯ ಫಲಿತಾಂಶವನ್ನು ಪ್ರಕಟಿಸಲಾಗಿದೆ. 20 ರಿಂದ 35 ವಯೋಮಾನದ ವಿದ್ಯಾರ್ಥಿ, ಯುವಜನರಿಗೆ ಆಯೋಜಿಸಿದ್ದ ಕವನ‌ ಸ್ಪರ್ಧೆಯಲ್ಲಿ ಕೇರಳ ಕೇಂದ್ರೀಯ ವಿವಿ‌ ಕನ್ನಡ ವಿಭಾಗದ  ವಿದ್ಯಾರ್ಥಿ ದರ್ಶನ್ ಕುಮಾರ್ ಮತ್ತು  ಜ್ಯೋತಿರ್ಲಕ್ಷ್ಮಿ ಕ್ರಮವಾಗಿ ಪ್ರಥಮ, ದ್ವಿತೀಯ ಬಹುಮಾನ,

ಬೆಂಗಳೂರು ಗವಿಪುರಂ ಬಡಾವಣೆಯ ಅಚಲ ಬಿ.ಹೆನ್ಲಿ ತೃತೀಯ‌ ಬಹುಮಾನ ಪಡೆದಿದ್ದಾರೆ. ಅಥಣಿ ತಾಲೂಕು ಶೇಗುಣಸೆಯ ಸೀಮಾ‌ ಶಿರಗುಪ್ಪಿ, ಬೆಂಗಳೂರು ಹನುಮಂತ‌ ನಗರದ ವೈ.ಎಸ್.  ಸುಪ್ರಿಯಾ ಅವರ ಕವನಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.

20 ರಿಂದ 40 ವಯೋಮಾನದ ಲೇಖಕಿಯರಿಗೆ ಆಯೋಜಿಸಿದ್ದ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಬೆಂಗಳೂರಿನ ‌ಅಚಲ ಬಿ.ಹೆನ್ಲಿ ಪ್ರಥಮ, ಕುಂದಾಪುರ ತಾಲೂಕು ಅಮಾಸೆ ಬೈಲಿನ ರಾಧಿಕಾ ಎಸ್. ದ್ವಿತೀಯ ಬಹುಮಾನ ಪಡೆದಿದ್ದಾರೆ.

ಸ್ಪರ್ಧೆಗಳಲ್ಲಿ ವಿಜೇತರು ಮತ್ತು ಆಸಕ್ತ ಲೇಖಕಿಯರಿಗೆ ಸಮತಾ ಅಧ್ಯಯನ ಕೇಂದ್ರವು ಕರ್ನಾಟಕ‌‌ ಲೇಖಕಿಯರ ಸಂಘದ ಸಹಯೋಗದಲ್ಲಿ ಮೇ 31, ಜೂ.1 ರಂದು ಮೈಸೂರಿನಲ್ಲಿ ಕಾವ್ಯ ಕಮ್ಮಟ ಏರ್ಪಡಿಸಿದೆ. ಜೂ.1 ರ ಸಂಜೆ 4‌ ಗಂಟೆಗೆ ಪ್ರಶಸ್ತಿ‌ ಪ್ರದಾನ, ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದು ಕೇಂದ್ರದ ಅಧ್ಯಕ್ಷೆ ಡಾ. ಸಬಿಹಾ ಭೂಮಿಗೌಡ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅನುಪಮಾ ಅವರ ಪರಿಚಯ

ಉತ್ತರ ಕನ್ನಡ ಜಿಲ್ಲೆ‌ ಶಿರಸಿಯ ಕೃಷಿಕ ಕುಟುಂಬದಲ್ಲಿ ಜನಿಸಿದ ಅನುಪಮಾ ಅವರು ವಿದ್ಯಾಭ್ಯಾಸ ‌ ಪಡೆದದ್ದು ಉಜಿರೆಯಲ್ಲಿ. ವಿವಾಹ‌ ನಂತರ ಕಾಸರಗೋಡಿನ ನೀರ್ಚಾಲು ಗ್ರಾಮದಲ್ಲಿ ನೆಲೆಸಿದ್ದಾರೆ. ‌ಚೇತನಾ, ಕರವೀರದ ಗಿಡ, ದೂರ ತೀರ, ಜೋಗತಿ ಜೋಳಿಗೆ ಇವರ ಇತರ‌ ಕಥಾ ಸಂಕಲನಗಳು. ‘ಪಕ್ಕಿ ಹಳ್ಳದ ಹಾದಿಗುಂಟ’ ಕಾದಂಬರಿ. ನಾಟಕ, ಜೀವನ ಕಥಾನಕಗಳನ್ನೂ ಬರೆದಿದ್ದಾರೆ. ಸಮಾಜದ ಕಟ್ಟಕಡೆಯ ಜನರ, ಮಹಿಳೆಯರ ಬವಣೆಗಳನ್ನು ಬಿಂಬಿಸುವ ಇವರ ಕಥನಗಳು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಂಗಂ ಸಾಹಿತ್ಯ‌ ಪ್ರಶಸ್ತಿ, ಬೇಂದ್ರ, ಮಾಸ್ತಿ, ಬೆಸಗರಹಳ್ಳಿ ರಾಮಣ್ಣ,ವಸುದೇವ ಭೂಪಾಲಂ, ಚದುರಂಗ ಸಹಿತ ಹಲವು ಹಿರಿಯ ಸಾಹಿತಿಗಳ ಹೆಸರಿನಲ್ಲಿ ಸ್ಥಾಪಿತವಾಗಿರುವ ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನವಾಗಿವೆ.

Key words: Vijaya Dabbe Literary Award, Anupama Prasad, story, ‘Chyodya’