ಮೈಸೂರು,ಏಪ್ರಿಲ್,30,2026 (www.justkannada.in): ಬೆಂಗಳೂರಿನ ಬೌರಿಂಗ್ ಕಾಂಪೌಂಡ್ ಕಟ್ಟಡ ಕುಸಿದು 7 ಮಂದಿ ಸಾವಿಗೀಡಾದ ಘಟನೆ ಮೈಸೂರು ನಗರಕ್ಕೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಮಾಜಿ ಪಾಲಿಕೆ ಸದಸ್ಯ ಕೆ.ವಿ. ಮಲ್ಲೇಶ್ ತಿಳಿಸಿದ್ದಾರೆ.
ನಗರದ ಪಾರಂಪರಿಕ ಕಟ್ಟಡಗಳು ನಿರ್ವಹಣೆಯ ಕೊರತೆಯಿಂದ ಅಪಾಯಕ್ಕೆ ಗುರಿಯಾಗುತ್ತಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಒಳಚರಂಡಿ, ಮಳೆ ನೀರು ಕಾಲುವೆಗಳ ದುರವಸ್ಥೆಯಿಂದ ಮಳೆಗಾಲದಲ್ಲಿ ನೀರು ನಿಲ್ಲುವ ಸಮಸ್ಯೆ ಹೆಚ್ಚಾಗುತ್ತಿದೆ ಎಂದರು.
ಇದೇ ವೇಳೆ, ಒಣಗಿದ ಮರಗಳು ಹಾಗೂ ಅಪಾಯಕಾರಿಯಾದ ಕೊಂಬೆಗಳನ್ನು ತೆರವುಗೊಳಿಸಿ, ರಸ್ತೆ ಗುಂಡಿಗಳು, ಪಾದಚಾರಿ ಮಾರ್ಗದ ದುರಸ್ತಿ ಕಾರ್ಯಗಳನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳಬೇಕು ಎಂದು ಕೆ.ವಿ ಮಲ್ಲೇಶ್ ಹೇಳಿದರು.
ಇಲ್ಲವಾದರೆ ಮುಂದಿನ ದಿನಗಳಲ್ಲಿ ಮತ್ತೊಂದು ದುರ್ಘಟನೆ ಸಂಭವಿಸುವ ಸಾಧ್ಯತೆ ಇದ್ದು, ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೆ.ವಿ ಮಲ್ಲೇಶ್ ಆಗ್ರಹಿಸಿದರು.
ಒಳ ಚರಂಡಿ ದುರಸ್ಥಿಗೊಳಿಸಿ:
ನಗರದ ಬಹುತೇಕ ರಸ್ತೆಗಳಲ್ಲಿನ ಒಳಚರಂಡಿ, ಮಳೆ ನೀರು ಚರಂಡಿ ಮತ್ತು ರಾಜಕಾಲುವೆಗಳಲ್ಲಿ ಕಸ, ಕಡ್ಡಿ, ಮಣ್ಣು ತುಂಬಿದ್ದು, ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದಂತಿದೆ. ಬೇಸಿಗೆಯಲ್ಲಿ ಅವುಗಳ ನಿರ್ವಹಣೆ ಮಾಡಿ, ಮಳೆಗಾಲಕ್ಕೆ ಸಜ್ಜಾಗಬೇಕಾದ ನಗರಪಾಲಿಕೆ ಮೈ ಮರೆತುಕುಳಿತಿದೆ. ರಸ್ತೆಗಳು ಗುಂಡಿ ಬಿದ್ದಿದ್ದು, ಸಾರ್ವಜನಿಕರು ಬಿದ್ದು ಸಾವು-ನೋವುಗಳು ಸಂಭವಿಸಿರುವ ಉದಾಹರಣೆಗಳು ಸಾಕಷ್ಟಿವೆ. ಇದನ್ನೆಲ್ಲ ನೋಡಿಯೂ ನೋಡದಂತೆ, ಜಾಣ ಕುರುಡರಂತೆ ವರ್ತಿಸುತ್ತಿರುವ ಅಧಿಕಾರಿಗಳನ್ನು ತಿವಿದು, ಎಚ್ಚರಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು. ಮುಂದೆ ಅನಾಹುತ ಸಂಭವಿಸಿದರೆ ಬೇಜವಾಬ್ದಾರಿ ಅಧಿಕಾರಿಗಳನ್ನೇ ನೇರ ಹೊಣೆ ಮಾಡಬೇಕೆಂದು ನಾಗರಿಕರ ಪರವಾಗಿ ಆಗ್ರಹಿಸುತ್ತೇನೆ ಎಂದು ಕೆ.ವಿ ಮಲ್ಲೇಶ್ ತಿಳಿಸಿದ್ದಾರೆ.
ENGLISH SUMMARY…
Mysuru: Bowering Incident a Wake-Up Call
Mysuru: The recent building collapse at Bowering Compound in Bengaluru, which claimed seven lives, should serve as a wake-up call for Mysuru, said former corporator K.V. Mallesh.
He warned that many heritage buildings in the city are in poor condition due to lack of maintenance and pose serious risks. He urged authorities to take immediate action.
Mallesh also highlighted issues like clogged drainage systems, damaged roads, and unsafe footpaths, which worsen during rains. He called for urgent repairs, removal of dry trees, and preventive measures to avoid future disasters.
He stressed that negligent officials must be held accountable if any untoward incidents occur.
Key words: Mysuru, Bowering, Incident, Wake-Up Call, KV Mallesh







