ಇಂದು ಅರಣ್ಯ ಇಲಾಖೆ ಹಂಗಾಮಿ ನೌಕರಿಂದ ಮುಷ್ಕರ

ಬೆಂಗಳೂರು,ಏಪ್ರಿಲ್,30,2026 (www.justkannada.in): ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಇಂದು ಅರಣ್ಯ ಇಲಾಖೆಯ ಹಂಗಾಮಿ ನೌಕರರು ಕರ್ತವ್ಯ ನಿರ್ವಹಿಸದೇ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಒಂದು ವರ್ಷದಿಂದ ಮಾತುಕತೆ, ಹೋರಾಟದ ಮೂಲಕ ಬೇಡಿಕೆ ಈಡೇರಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಅರಣ್ಯ ಇಲಾಖೆಯ ಹಂಗಾಮಿ ನೌಕರರು ಮುಷ್ಕರ ಹೂಡಿದ್ದಾರೆ. 10 ವರ್ಷ ಕಾರ್ಯ ನಿರ್ವಹಿಸಿದವರನ್ನು ಕ್ಷೇಮಾಭಿವೃದ್ಧಿ ಅಧಿ ನಿಯಮಕ್ಕೆ ಒಳಪಡಿಸಬೇಕು. ಏಜೆನ್ಸಿ ಗಳಿಗೆ ಬದಲಾಗಿ ಹಿಂದೆ ಇದ್ದ ಹಾಗೆಯೇ ಇಲಾಖೆ ಮೂಲಕವೇ ವೇತನ ನೀಡಬೇಕು. ಈಗಾಗಲೇ ಘೋಷಿಸಿರುವ ಚಾಲಕರ ಕಷ್ಟ ಪರಿಹಾರ ಭತ್ಯೆಯನ್ನು ಬಿಡುಗಡೆ ಮಾಡಬೇಕು ಎನ್ನುವುದು ಸೇರಿದಂತೆ ಹಲವು ಬೇಡಿಕೆಗಳೊಂದಿಗೆ ಬಂಡೀಪುರದಲ್ಲಿ 3,800 ಅಧಿಕ ಹಂಗಾಮಿ ನೌಕರರು ಮುಷ್ಕರ ಆರಂಭಿಸುತ್ತಿದ್ದಾರೆ.

2017ರವರೆಗೂ ಅರಣ್ಯ ಇಲಾಖೆಯಿಂದಲೇ ವೇತನ ನೀಡಲಾಗುತ್ತಿತ್ತು. ಆದರೆ ಈಗ ಹೊರಗುತ್ತಿಗೆ ನೀಡಿದ ಬಳಿಕ ಭವಿಷ್ಯ ನಿಧಿ ಸಹಿತ ಯಾವುದೇ ಸೌಲಭ್ಯವೂ ಸರಿಯಾಗಿ ಸಿಗುತ್ತಿಲ್ಲ. ನಮ್ಮನ್ನು ದಿನಗೂಲಿಯಲ್ಲೇ ಮುಂದುವರಿಸಬೇಕು. ವನ್ಯಜೀವಿ ವಿಭಾಗದವರಿಗೆ ಹಿಂದೆ ಇದ್ದಂತೆ 30 ದಿನಗಳ ಸಂಬಳ, ಭತ್ಯೆ ನೀಡಬೇಕು. ಇಲಾಖೆ ಖಾಲಿ ಹುದ್ದೆಗಳನ್ನು ಕಾಲಕಾಲಕ್ಕೆ ಭರ್ತಿ ಮಾಡಬೇಕು ಎಂಬ ವಿವಿಧ ಬೇಡಿಕೆಗಳ ಈಡೇರಿಕೆಗೆ ಹಂಗಾಮಿ ನೌಕರರು ಆಗ್ರಹಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ವನ್ಯಜೀವಿ ಘಟಕಗಳ ದಿನಗೂಲಿ, ಹೊರಗುತ್ತಿಗೆ ನೌಕರರ ಸಂಘದ ಗೌರವ ಅಧ್ಯಕ್ಷ ಎ.ಎಂ.ನಾಗರಾಜು ಅವರು, ‘ಕಳೆದ ವರ್ಷ ಹೋರಾಟ ನಡೆಸಿದಾಗ ಅರಣ್ಯ ಸಚಿವರು ಸೂಚನೆ ನೀಡಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳಲಿಲ್ಲ. ಮಾರ್ಚ್‌ನಲ್ಲಿ ಮುಷ್ಕರ ಪ್ರಕಟಿಸಿದಾಗ ಸಭೆ ನಡೆಸಿದ್ದನ್ನು ಬಿಟ್ಟರೆ ಏನೂ ಆಗಲಿಲ್ಲ. ಒಂಬತ್ತು ವರ್ಷದ ಹಿಂದೆ ದಿನಗೂಲಿಯಿಂದ ಹಂಗಾಮಿಗೆ ಬದಲಾಯಿಸಿದಾಗ ಆರ್ಥಿಕ ಇಲಾಖೆಯ ಅನುಮತಿ ಬಗ್ಗೆ ಏನನ್ನೂ ಹೇಳಲಿಲ್ಲ. ಈಗ ಆರ್ಥಿಕ ಇಲಾಖೆ ಕಾರಣ ನೀಡಿ ಸೌಲಭ್ಯ ನೀಡುತ್ತಿಲ್ಲ. ಹೀಗಾಗಿ, ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸುತ್ತಿದ್ದೇವೆ’ ಎಂದು ತಿಳಿಸಿದರು.

Key words: Forest Department, temporary workers , strike, today