ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ನಿರಂತರ ಅಭ್ಯಾಸ ಅತ್ಯಗತ್ಯ- ಬಿ.ಎನ್.ವೀಣಾ

ಮೈಸೂರು,ಏಪ್ರಿಲ್,2,2026 (www.justkannada.in): ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಸಮರ್ಪಣೆಯೊಂದಿಗೆ ನಿರಂತರ ಅಭ್ಯಾಸ ಅತ್ಯಗತ್ಯ ಎಂದು ಮೈಸೂರು ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರಾದ ಬಿ.ಎನ್.ವೀಣಾ ಅವರು ಹೇಳಿದರು.

ಇಂದು ಕಾವೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕರಾಮುವಿ) ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಐಎಎಸ್ ಮತ್ತು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ನಡೆಸಿದ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಕ್ತಭಂಡಾರ ಅಧ್ಯಯನ ಪುಸ್ತಕ ಬಿಡುಗಡೆಗೊಳಿಸಿ ಬಿ.ಎನ್.ವೀಣಾ ಅವರು ಮಾತನಾಡಿದರು.

ಯುಪಿಎಸ್ಸಿ ಮತ್ತು ಕೆಪಿಎಸ್ಸಿ ಅಂತಹ ಪರೀಕ್ಷೆಗಳಿಗೆ ಹೇಗೆ ತಯಾರಿ ಮಾಡಿಕೊಳ್ಳಬೇಕು ಎಂದು ಈಗಾಗಲೇ ನಿಮಗೆ ತಿಳಿದಿದೆ. ಕರಾಮುವಿ ತರಬೇತಿ ಕೇಂದ್ರವು ಅಭ್ಯರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುತ್ತಿದೆ ಎಂದ ಅವರು,  ಓದುವಾಗ ಯಾವಾಗಲೂ ಒಬ್ಬ ವ್ಯಕ್ತಿಯನ್ನು ಮಾದರಿಯನ್ನಾಗಿ ಇಟ್ಟುಕೊಳ್ಳಬೇಕು. ಆವಾಗ ನಿಮಗೆ ಓದಲು ಆಸಕ್ತಿ ಹೆಚ್ಚಾಗುತ್ತದೆ. ನಾವೆಲ್ಲಾ ಓದುವಾಗ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರನ್ನು ಹೆಚ್ಚಾಗಿ ಅನುಸರಿಸುತ್ತಿದ್ದವು. ಅವರಂತೆ ನಾವಾಗಬೇಕು ಎಂದುಕೊಳೊತ್ತಿದ್ದವು, ಇದೀಗ ಅವರಂತೆ ಸಾರ್ವಜನಿಕ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ. ಕರಾಮುವಿಯ ಈ ತರಬೇತಿ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ ನಿಮಗೂ ಸಾರ್ವಜನಿಕ ಸೇವೆ ಸಲ್ಲಿಸುವ ಅವಕಾಶ ಸಿಗಲಿದೆ ಎಂದು ಹೇಳಿದರು.

ಸ್ಪರ್ಧಾತ್ಮಕ ಜಗತ್ತು ಸಾಗರದಂತೆ. ಇವತ್ತಿನ ಸ್ಪರ್ಧಾತ್ಮಕ ಪರೀಕ್ಷೆ ಸಹ ಮೊದಲಿನಂತಿಲ್ಲ. ಪ್ರಶ್ನೆ ಪತ್ರಿಕೆ ಮಾದರಿ ಬದಲಾಗಿದೆ. ಇದೆಲ್ಲದಕ್ಕೂ ನೀವು ಸಿದ್ಧರಾಗಿರಬೇಕು. ನಿರಂತರ ಅಭ್ಯಾಸ ಇಟ್ಟುಕೊಂಡು, ಸತತವಾಗಿ ಕಠಿಣ ಪರಿಶ್ರಮ ಪಡಿ, ಪರಿಶ್ರಮ ಇಲ್ಲದಿದ್ದರೆ ಯಾವ ಪರೀಕ್ಷೆಯನ್ನು ಗೆಲ್ಲಲು ಸಾಧ್ಯವಿಲ್ಲ ಎಂದರು. ಓದುವಾಗ ಯಾವುದನ್ನೂ ಓದಬೇಕು, ಯಾವುದನ್ನು ಓದಬಾರದು ಎನ್ನುವುದನ್ನು ತಿಳಿದುಕೊಂಡರೆ ಉತ್ತಮ. ಪ್ರತಿದಿನ ಪತ್ರಿಕೆ ಓದಿ. ನಾಲ್ಕೈದು ವರ್ಷಗಳ ಸಾಮಾನ್ಯ ಜ್ಞಾನ ನಿಮಗೆ ತಿಳಿದಿರಲಿ ಎಂದು ಹೇಳಿದರು.

ಓದಲು ಸಮಯ ಇಟ್ಟುಕೊಂಡು ಕೂತಾಗ ಬೇರೆ ಬೇರೆ ಕೆಲಸಗಳ ಬಗ್ಗೆ ಗಮನ ಬೇಡ. ಊರಿನ ಹಬ್ಬ, ಸಂಬಂಧಗಳು, ಹುಟ್ಟುಹಬ್ಬ ಹೀಗೆ ಎಲ್ಲವನ್ನೂ ಬಿಟ್ಟು ಕಠಿಣ ಪರಿಶ್ರಮ ಪಡಬೇಕು. ಕನಿಷ್ಠ ಮೂರು ವರ್ಷ ನೀವು ಕಷ್ಟಪಟ್ಟರೆ, ಮುಂದಿನ ಮೂವತ್ತು ವರ್ಷ ಸುಖವಾಗಿರಬಹುದು ಎಂದು ಹೇಳಿದರು. ನಿಮಗೆಲ್ಲರಿಗೂ ಸಾರ್ವಜನಿಕ ಸೇವೆ ಸಲ್ಲಿಸಲು ಅವಕಾಶ ಸಿಗಲಿ. ಸೇವೆಗೆ ಆಯ್ಕೆಯಾದಾಗ ಜನಪರವಾಗಿ ಕಾರ್ಯನಿರ್ವಹಿಸಬೇಕು. ಹೀಗಾಗಿ ಮಾನವೀಯತೆಯನ್ನು ಈಗಿನಿಂದಲೇ ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದರು. ವಿದ್ಯಾರ್ಥಿ ಜೀವನದಲ್ಲಿ ಕಷ್ಟ ಪಡಬೇಕು. ಗೆಲುವು ಸೋಲು ಎನ್ನುವುದು ಇಲ್ಲಿಲ್ಲ. ಸೋತರೆ ತಲೆಕೆಡಿಸಿಕೊಳ್ಳಬಾರದು. ನಿರಂತರ ಪ್ರಯತ್ನ ಪಡಬೇಕು. ಆವಾಗ ಗೆಲುವು ನಿಶ್ಚಿತ ಎಂದು ಪ್ರತಿಪಾದಿಸಿದರು.

ವಾಣಿಜ್ಯ ತೆರಿಗೆ ಇಲಾಖೆಯ ಮೈಸೂರು ವಿಭಾಗದ ಜಂಟಿ ಆಯುಕ್ತ ಎಂ. ಬಾಲಸುಬ್ರಹ್ಮಣ್ಯ ಅವರು ಶುಭಹಾರೈಸಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆ ಎನ್ನುವುದು ದೂರದ ಪಯಣ ಇದ್ದಂತೆ. ಇಲ್ಲಿ ಪರಿಶ್ರಮ ಮುಖ್ಯ ಪರೀಕ್ಷೆಗೆ ತಯಾರಿ ನಡೆಸುವಾಗ ಓದುವುದರ ಜತೆಗೆ ನೊಟ್ಸ್ ಮಾಡಿಟ್ಟುಕೊಳ್ಳಿ. ಹಳೆಯ ಪ್ರಶ್ನೆಪತ್ರಿಕೆಗಳನ್ನು ಓದಿ, ವಿಶ್ಲೇಷಿಸಿ. ನಿಮಗೆ ಹೇಗೆ ಅನುಕೂಲವಾಗುತ್ತದೆಯೋ ಹಾಗೆಯೇ ಅಭ್ಯಾಸ ಮಾಡಿ ಜತೆಗೆ ಸಂವಹನ ಕೌಶಲ್ಯ ಅಳವಡಿಸಿಕೊಳ್ಳಿ. ಇಲ್ಲಿನ ತರಬೇತಿಯು ನಿಮಗೆ ಸಾಕಷ್ಟು ಕಲಿಸಿದೆ, ಅದನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಅಭ್ಯರ್ಥಿಗಳಿಗೆ ಶುಭಾಶಯ ಕೋರಿದರು. ಎಷ್ಟು ಗಂಟೆಗಳ ಕಾಲ ಓದುತ್ತೀರ, ಹೇಗೆ ಓದುತ್ತೀರ ಎನ್ನುವುದು ಮುಖ್ಯ ಎಂದ ಅವರು ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿ ಬಗ್ಗೆ ತಿಳಿಸಿಕೊಟ್ಟು ಶುಭಕೋರಿದರು.

ಕುಲಪತಿ ಪ್ರೊ.ಶರಣಪ್ಪ ಹಲಸೆ ಮಾತನಾಡಿ, ಈಗಾಗಲೆ ತಮಗೆಲ್ಲಾ ಓದುವ ತಯಾರಿ ಗೊತ್ತಾಗಿದೆ. ಧೈರ್ಯ ಇಟ್ಟುಕೊಳ್ಳಿ. ಧೈರ್ಯ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂದು ಹೇಳಿದರು. ಸಮಾಜದಲ್ಲಿ ನ್ಯಾಯಯುತ ಬದುಕು ಕಟ್ಟಿಕೊಳ್ಳಬೇಕು. ಇದಕ್ಕೆ ಗುರಿ ಇಟ್ಟುಕೊಳ್ಳಿ, ನಂತರ ತಯಾರಿ ನಡೆಸಿ, ಏನನ್ನಾದರೂ ಸಾಧಿಸಲು ಸತತ ಪ್ರಯತ್ನ ಮಾಡಬೇಕು ಎಂದರು. ಅರಿವೇ ಗುರು ಎನ್ನುವ ಹಾಗೆ. ನಿಮ್ಮನ್ನ ನೀವು ನಂಬಿ. ಆ ನಂಬಿಕೆ ಜೀವನ ಪರ್ಯಂತ ಇರಲಿ ಎಂದು ಸಲಹೆ ನೀಡಿದರು.

ಸಮಾರಂಭದಲ್ಲಿ ವಿವಿ ಕುಲಸಚಿವ ಪ್ರೊ.ಎಸ್.ಕೆ.ನವೀನ್ ಕುಮಾರ್, ಶೈಕ್ಷಣಿಕ ಡೀನ್ ರಾಮನಾಥಂ ನಾಯ್ಡು, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣ ಗೌಡ, ಸಿದ್ಧೇಶ್ ಹೊನ್ನೂರು, ಗಣೇಶ್ ಕೆ.ಜಿ.ಕೊಪ್ಪಲ್ ಇನ್ನಿತರರು ಇದ್ದರು.

Key words: Continuous, practice, competitive exams, B.N. Veena, KSOU