ಬೆಂಗಳೂರು,ಮಾರ್ಚ್,17,2026 (www.justkannada.in): ಚಾಮರಾಜಪೇಟೆ ಸಿರ್ಸಿ ಜಂಕ್ಷನ್‌ನಿಂದ ಬಿಎಚ್ ಇಎಲ್ ಕಿಮಕೋ ವೃತ್ತದವರೆಗೂ ಮೇಲ್ಸೇತುವೆ ವಿಸ್ತರಿಸಲು ಡಿಪಿಆರ್ ತಯಾರಿಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ವಿಧಾನ ಪರಿಷತ್ ನ ಕಾಂಗ್ರೆಸ್ ಸದಸ್ಯ ಕೆ.ಶಿವಕುಮಾರ್ ಅವರು, ಬೆಂಗಳೂರು ನಗರ ಹೃದಯ ಭಾಗ ಚಾಮರಾಜಪೇಟೆ ಮತ್ತು ಮೈಸೂರು ರಸ್ತೆಯಲ್ಲಿನ ಪ್ರತಿನಿತ್ಯ ಉಂಟಾಗುವ ವಾಹನದಟ್ಟಣೆ ತಪ್ಪಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳು ಏನೆಂದು ಪ್ರಶ್ನೆ ಮಾಡಿದ್ದರು.
ಇದಕ್ಕೆ ಉತ್ತರ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್, ಸಿರ್ಸಿ ಜಂಕ್ಷನ್ ನಿಂದ ಬಿಎಚ್ ಇಎಲ್ ಕಿಮಕೋ ವೃತ್ತದವರೆಗೂ ಮೇಲ್ಸೇತುವೆ ವಿಸ್ತರಿಸಲು 810 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಡಿಪಿಆರ್ ಸಿದ್ಧಪಡಿಸಿದ್ದು, ಆಡಳಿತಾತ್ಮಕ ಅನುಮೋದನೆ ಪರಿಶೀಲನೆಯಲ್ಲಿ ಇದೆ.
ಉಳಿದಂತೆ ನಾಯಂಡನಹಳ್ಳಿ ಮೇಲ್ಸೇತುವೆಯ ನಂತರ ರಾಜರಾಜೇಶ್ವರಿನಗರ ಮುಖ್ಯರಸ್ತೆ ಕಮಾನು ಭಾಗದಲ್ಲಿ ಮೇಲ್ಸೇತುವೆ ನಿರ್ಮಾಣವನ್ನು ಕೈಗೆತ್ತಿಕೊಳ್ಳಲಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿದೆ. ರಾಜರಾಜೇಶ್ವರಿನಗರ ಮುಖ್ಯರಸ್ತೆಯಿಂದ ಕಮಾನು ಭಾಗದಿಂದ ಕೆಂಗೇರಿ ರಸ್ತೆಯವರೆಗೂ 75 ಕೋಟಿ ರೂ. ವೆಚ್ಚದಲ್ಲಿ ಡಾಂಬರೀಕರಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು.
Key words: Another, flyover ,Bangalore Sirsi Circle, DCM, DK Shivakumar, K.Shivakumar







