ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಅಡಿಗಲ್ಲು: ಹೆಚ್.ವೈ.ಮೇಟಿ ಕನಸು ನನಸು-ಸಿಎಂ ಸಿದ್ದರಾಮಯ್ಯ

ಬಾಗಲಕೋಟೆ, ಮಾರ್ಚ್,14,2026 (www.justkannada.in):  ದಿವಂಗತ ಹೆಚ್.ವೈ.ಮೇಟಿಯವರ ಪ್ರಯತ್ನ ಮತ್ತು  ಆಶಯದಂತೆ  ಸರ್ಕಾರಿ ವೈದ್ಯಕೀಯ ಕಾಲೇಜು ಉದ್ಘಾಟಿಸುವ ಮೂಲಕ ಅವರ ಕನಸನ್ನು ನನಸು ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಇಂದು ಬಾಗಲಕೋಟೆಯ ನವನಗರ ಹೆಲಿ ಪ್ಯಾಡ್ ನಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ,  ಕೃಷ್ಣಾ ಮೇಲ್ದಂಡೆ ಯೋಜನೆಗೆ ಬಜೆಟ್ ನಲ್ಲಿ ಯಾವುದೇ ಅನುದಾನ ಮೀಸಲಿಟ್ಟಿಲ್ಲ ಎಂದು  ವಿಪಕ್ಷ ನಾಯಕರು ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಸಂತ್ರಸ್ತರಿಗೆ ಪರಿಹಾರ ಚೆಕ್ ವಿತರಣಾ ಕಾರ್ಯವನ್ನು ಇಂದಿನಿಂದ ಪ್ರಾರಂಭಿಸಲಾಗುತ್ತಿದ್ದು, ಸಂತ್ರಸ್ತರೆಲ್ಲರಿಗೂ  ಮೂರು ನಾಲ್ಕು  ವರ್ಷಗಳ ಅವಧಿಯಲ್ಲಿ ವಿತರಣೆ ಮಾಡಲಾಗುವುದು ಎಂದರು.

ಇ ಸ್ವತ್ತು: ಕೂಡಲೇ ಸರಿಪಡಿಸಲಾಗುವುದು

ಇ ಸ್ವತ್ತು ರಾಜ್ಯದಲ್ಲಿ ಸಮಸ್ಯೆಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಇದನ್ನು ಕೂಡಲೇ ಸರಿಪಡಿಸಲಾಗುವುದು ಎಂದರು.

ಬಿಜೆಪಿ ವೈದ್ಯಕೀಯ ಕಾಲೇಜು ಏಕೆ ಸ್ಥಾಪಿಸಲಿಲ್ಲ?

ಉಪಚುನಾವಣೆ ಸಂದರ್ಭದಲ್ಲಿ ವೈದ್ಯಕೀಯ ಕಾಲೇಜಿಗೆ ಅಡಿಗಲ್ಲು ಸಮಾರಂಭ ಹಾಗೂ ಛತ್ರಪತಿ ಶಿವಾಜಿ ಹಾಗೂ ಬಸವಣ್ಣ ಅವರ ಮೂರ್ತಿಗೆ ತಲಾ 40 ಲಕ್ಷ ರೂಪಾಯಿ ಬಿಡುಗಡೆ ಮಾಡಲು ಸೂಚಿಸಿರುವುದು ಚುನಾವಣಾ ಗಿಮಿಕ್ ಎಂದು ಬಿಜೆಪಿ ಆರೋಪಿಸಿರುವ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ,  ಬಿಜೆಪಿಯವರು ನಾಲ್ಕು ವರ್ಷ ಅಧಿಕಾರದಲ್ಲಿದ್ದರೂ ವೈದ್ಯಕೀಯ ಕಾಲೇಜು ಏಕೆ ಮಾಡಲಿಲ್ಲ.. ಇದು ಗಿಮಿಕ್ ಹೇಗಾಗುತ್ತದೆ ಎಂದರು. ಈಗಾಗಲೇ ಟೆಂಡರ್ ಕರೆದು ಏಜೆನ್ಸಿ ನಿಗದಿಯಾಗಿದೆ. ಕೆಲಸ ಪ್ರಾರಂಭವಾಗಬೇಕಿದ್ದು ಅದಕ್ಕೆ ಅಡಿಗಲ್ಲು ಹಾಕಲಾಗುತ್ತಿದೆ ಎಂದರು.

ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ : ಹೈಕಮಾಂಡ್ ತೀರ್ಮಾನ

ಬಾಗಲಕೋಟೆ ಮತ್ತು ದಾವಣಗೆರೆ ಉಪಚುನಾವಣೆ ಅಭ್ಯರ್ಥಿಗಳ ಆಯ್ಕೆಯನ್ನು ಹೈ ಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದ ಸಿಎಂ ಸಿದ್ದರಾಮಯ್ಯ, ಹೆಚ್.ವೈ ಮೇಟಿ  ಕುಟುಂಬದವರನ್ನೇ ಆಯ್ಕೆ ಮಾಡಲಾಗುವುದೇ ಎಂಬ ಮಾಧ್ಯಮಗಳ ಉತ್ತರ ನೀಡಿ ಅವರೂ ಒಬ್ಬ ಆಕಾಂಕ್ಷಿ ಎಂದರು.

ವಾರದೊಳಗೆ ಉಪಚುನಾವಣೆ ಘೋಷಣೆಯಾಗಬಹುದು

ಉಪಚುನಾವಣೆ  ಒಂದು ವಾರದೊಳಗೆ ಘೋಷಣೆಯಾಗಬಹುದು. ಯಾರಾದರೂ ಆಕಾಂಕ್ಷಿಯಾಗಬಹುದು. ಒಂದೇ ಕುಟುಂಬದಿಂದ ಎಷ್ಟು ಜನ ಕೇಳಿದರೂ ಒಬ್ಬರಿಗೆ ಹೈ ಕಮಾಂಡ್ ಟಿಕೆಟ್ ನೀಡುವುದು.  ಉಪಚುನಾವಣೆಗೆ ಎಲ್ಲಾ ತಯಾರಿ ನಡೆದಿದ್ದು, ನಾವು ಅದಕ್ಕೆ ಸಿದ್ಧರಿದ್ದೇವೆ ಎಂದರು.

ಸಿಲಿಂಡರ್ ಪೂರೈಕೆ : ಕೇಂದ್ರ ಸರ್ಕಾರದ ಜವಾಬ್ದಾರಿ

ಸಿಲಿಂಡರ್ ಸರಬರಾಜು ಸುಗಮಗೊಳಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಕೊಟ್ಟರೆ ವಿತರಣೆ ಮಾಡುತ್ತದೆ. ಆಹಾರ ಸಚಿವರು ಎರಡು ಸಭೆಗಳನ್ನು ಈಗಾಗಲೇ ನಡೆಸಿದ್ದು, ಕೇಂದ್ರ ಸಚಿವರಿಗೆ ಪಾತ್ರವನ್ನೂ ಬರೆಯಲಾಗಿದೆ. ಸಿಲಿಂಡರ್ ಅಭಾವವಾಗದಂತೆ ಎಚ್ಚರಿಕೆ ವಹಿಸಲು ಕೋರಲಾಗಿದೆ ಎಂದರು.

ಒಳಮೀಸಲಾತಿ: ಮಾರ್ಚ್ 27 ರಂದು ಸಭೆ

ಒಳಮೀಸಲಾತಿ ಕುರಿತು ಮಾರ್ಚ್ 27 ರಂದು ಸಭೆ ಕರೆಯಲಾಗಿದೆ. ಅಂದು ತೀರ್ಮಾನ ಕೈಗೊಳ್ಳಲಾಗುವುದು ಎಂದರು.

Key words: Bagalkote, government medical college, CM, Siddaramaiah