ನವದೆಹಲಿ,ಜನವರಿ,31,2026 (www.justkannada.in): ಮಾದಕವಸ್ತು ನಿಯಂತ್ರಣ ದಳವು ಮೈಸೂರಿನಲ್ಲಿರುವ ಮಾದಕ ವಸ್ತುಗಳ ರಹಸ್ಯ ಪ್ರಯೋಗಾಲಯದ ಮೇಲೆ ದಾಳಿ ನಡೆಸಿ 10 ಕೋಟಿ ರೂ. ಮೌಲ್ಯದ ಮಾದಕವಸ್ತುಗಳನ್ನು ಜಪ್ತಿ ಮಾಡಿ ರಾಜಸ್ಥಾನದ ನಾಲ್ವರನ್ನು ಬಂಧಿಸಿದೆ.
35 ಕೆ.ಜಿ ಮೆಫೆಡೋನ್ ಇದ್ದ ವಾಹನವನ್ನು ಅಧಿಕಾರಿಗಳು ಜ. 28ರಂದು ಗುಜರಾತ್ ನಲ್ಲಿ ಪತ್ತೆಹಚ್ಚಿದ ಬಳಿಕ ಈ ಬಗ್ಗೆ ತನಿಖೆ ಆರಂಭಗೊಂಡಿತ್ತು. ಮೈಸೂರಿನಲ್ಲಿ ಅವರು ಪ್ರಯೋಗಾಲಯ ನಡೆಸುತ್ತಿರುವುದು ತನಿಖೆಯ ವೇಳೆ ಪತ್ತೆಯಾಗಿತ್ತು. ಈ ಮಾದಕ ವಸ್ತು ಸಾಗಣೆ ಜಾಲದ ಮಾಸ್ಟರ್ ಮೈಂಡ್ ಎನ್ನಲಾದ ಮಹೀಂದ್ರ ಕುಮಾರ್ ವಿಷ್ಟೋಯಿ ಮತ್ತು ಇತರ ಮೂವರನ್ನು ಎನ್ ಸಿಬಿ ಬಂಧಿಸಲಾಗಿದೆ.
ಸ್ವಚ್ಛತೆಗೆ ಬಳಸುವ ರಾಸಾಯನಿಕ ವಸ್ತುಗಳ ತಯಾರಿಕಾ ಘಟಕದ ಹೆಸರಿನಲ್ಲಿ ಆರೋಪಿಗಳು ಪ್ರಯೋಗಾಲಯ ನಿರ್ಮಿಸಿದ್ದರು. ಆರೋಪಿಗಳಲ್ಲಿ ಒಬ್ಬರಾದ ವಿಷ್ಟೋಯಿ ಸಂಬಂಧಿಯು ಕಟ್ಟಡವನ್ನು ಬಾಡಿಗೆಗೆ ನೀಡಿದ್ದರು ಎಂದು ಎನ್‌ಸಿಬಿ ಪ್ರಕಟಣೆ ತಿಳಿಸಿದೆ.
10 ಕೋಟಿ ರೂ. ಮೌಲ್ಯದ ಮಾದಕವಸ್ತು, 25.6 ಲಕ್ಷ ನಗದು, ಒಂದು ಎಸ್ ಯುವಿ ಮತ್ತು 500 ಕೆ.ಜಿ ರಾಸಾಯನಿಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ವಿಷ್ಣೋಯಿ ವಿರುದ್ಧ ರಾಜಸ್ಥಾನದಲ್ಲಿ ಮೂರು ಮತ್ತು ಗುಜರಾತ್ ಒಂದು ಪ್ರಕರಣ ದಾಖಲಾಗಿದೆ ಎಂದು ಎನ್‌ಸಿಬಿ ತಿಳಿಸಿದೆ.
ಸಂಶಯಾಸ್ಪದ ರಾಸಾಯನಿಕ ವಸ್ತು ಪತ್ತೆ
ಮೈಸೂರುತಾಲ್ಲೂಕಿನ ಯಾಂದಳ್ಳಿಯ ಸಪ್ತಮಾತೃಕೆ ಬಡಾವಣೆಯಲ್ಲಿರುವ 279ನೇ ನಂಬರಿನ ಮನೆ ಮೇಲೆ ಜಿಲ್ಲೆಯ ದಕ್ಷಿಣ ಪೊಲೀಸ್ ಠಾಣೆಯ ಪೊಲೀಸರು ದಾಳಿ ನಡೆಸಿದ್ದು, ಡ್ರಗ್ಸ್ ಗೆ ಬಳಸುವ ರಾಸಾಯನಿಕ ವಸ್ತುಗಳು ಪತ್ತೆಯಾಗಿವೆ.
ಕಟ್ಟಡವನ್ನು ಬಾಡಿಗೆಗೆ ಪಡೆದಿದ್ದ, ಈಗ ಎನ್ ಸಿಬಿ ತಂಡದ ವಶದಲ್ಲಿರುವ ಗಣಪತ್ ಲಾಲ್, ಅಲ್ಲಿ ವಾಸವಿದ್ದ ಭಜನ್‌ಲಾಲ್ ಮತ್ತು ಆತನ ಪತ್ನಿ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಅದು ಗಿರೀಶ್ ಬಾಬು ಎಂಬವರಿಗೆ ಸೇರಿದ ಕಟ್ಟಡವಾಗಿದೆ.
Key words: NCB, seizes, drugs, worth Rs 10 crore ,Mysore







