ಕೇಂದ್ರ ಬಜೆಟ್‌ ನಲ್ಲಿ ಮೈಸೂರಿಗೆ ವಿಶೇಷ ಅನುದಾನ ನೀಡಿ- ಕೆ.ವಿ. ಮಲ್ಲೇಶ್ ಆಗ್ರಹ

ಮೈಸೂರು,ಜನವರಿ,30,2026 (www.justkannada.in): ಕೇಂದ್ರ ಬಜೆಟ್‌ ನಲ್ಲಿ ಮೈಸೂರಿಗೆ ವಿಶೇಷ ಅನುದಾನ ನೀಡುವಂತೆ  ಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್ ಆಗ್ರಹಿಸಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಕೆ.ವಿ ಮಲ್ಲೇಶ್, ಮೈಸೂರು ನಗರದ ಅಭಿವೃದ್ಧಿ ಮತ್ತು ಪಾರಂಪರಿಕ ತಾಣಗಳು, ಕಟ್ಟಡಗಳ ಸಂರಕ್ಷಣೆಗೆ ಈ ಬಾರಿಯ ಕೇಂದ್ರ ಬಜೆಟ್‌ ನಲ್ಲಿ ವಿಶೇಷ ಅನುದಾನ ನೀಡುವ ಮೂಲಕ ಮೈಸೂರನ್ನು ಪ್ಯಾರೀಸ್ ನಗರವಾಗಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮುಂದಾಗಬೇಕಿದೆ. ದಶಕಗಳ ಹಿಂದೆ ಮೈಸೂರು ನಗರವನ್ನು ಪ್ಯಾರೀಸ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಭರವಸೆಯನ್ನು ಪ್ರಧಾನಿ ಮೋದಿ ನೀಡಿದ್ದರು. ಆದರೆ, ತಮ್ಮ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿದು 12 ವರ್ಷವಾದರೂ ಮೈಸೂರು ಪ್ಯಾರೀಸ್ ಆಗಲಿಲ್ಲ. ಪ್ಯಾರೀಸ್ ಬಿಡಿ, ಅದು ದೂರದ ಮಾತಾಯಿತು. ಕನಿಷ್ಠ ಮೈಸೂರನ್ನು ಮೈಸೂರಾಗಿ ಉಳಿಸಿಕೊಳ್ಳಬೇಕಾದ ತುರ್ತು ಬಂದೊದಗಿದೆ ಎಂದು ತಿಳಿಸಿದ್ದಾರೆ.

ರಾಜಪ್ರಭುತ್ವದ ಕಾಲದಲ್ಲಿ ವೈಭವೋಪೇತವಾಗಿ ಮೆರೆದಿದ್ದ ಮೈಸೂರು, ಪ್ರಜಾಪ್ರಭುತ್ವದ ತೆಕ್ಕೆಗೆ ಬಂದ ಮೇಲೆ ಕನಿಷ್ಠ ಮೂಲಸೌಕರ್ಯ ಒದಗಿಸಲೂ ಪರದಾಡುವಷ್ಟರ ಮಟ್ಟಿಗೆ ಬಂದು ನಿಂತಿದೆ. ಇತ್ತೀಚಿನ ವರ್ಷಗಳಲ್ಲಿ ಮೈಸೂರು ನಗರದ ಅಭಿವೃದ್ಧಿಯ ವೇಗ ಕುಂಠಿತಗೊಂಡಿದೆ. ಇದಕ್ಕೆ ಕೇಂದ್ರ ಸರಕಾರದ ನಿರ್ಲಕ್ಷವೇ ಪ್ರಮುಖ ಕಾರಣ. ಕಳೆದ ವರ್ಷ ಮೈಸೂರಿಗೆ ಘೋಷಿಸಿದ್ದ ಕೈಗಾರಿಕಾ ಯೋಜನೆಗಳು ಇಂದಿಗೂ ಜಾರಿಗೊಂಡಿಲ್ಲ. ಈ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮೈಸೂರಿನ ಅಭಿವೃದ್ಧಿಯೂ ಜಾಗತಿಕ ಮಟ್ಟದಲ್ಲೇ ಇರಬೇಕು. ಆದರೆ, ಕೇಂದ್ರದ ನಿರ್ಲಕ್ಷದಿಂದ ಅದು ಸಾಧ್ಯವಾಗಿಲ್ಲ.

ಇಲ್ಲಿನ ಪಾರಂಪರಿಕ ಕಟ್ಟಡಗಳು, ಸ್ಥಳಗಳು, ಪ್ರಾಚ್ಯವಸ್ತುಗಳ ಸಂರಕ್ಷಣೆಗೆ ಅನುದಾನದ ಅಗತ್ಯವಿದೆ. ಮೈಸೂರಿನ ಹಲವು ಸ್ಥಳಗಳು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ವಿದೇಶಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಮೈಸೂರು ಅರಮನೆ, ಕೃಷ್ಣರಾಜೇಂದ್ರ ಮೃಗಾಲಯ, ಚಾಮುಂಡಿ ಬೆಟ್ಟದಂತಹ ಹಲವು ತಾಣಗಳಿಗೆ ನಿತ್ಯ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಆದರೆ, ಅಭಿವೃದ್ಧಿ ಮತ್ತು ಮೂಲಸೌಕರ್ಯಗಳ ದೃಷ್ಟಿಯಿಂದ ನೋಡಿದರೆ ಈ ತಾಣಗಳು ತೀರ ಹಿಂದುಳಿದಂತೆ ಭಾಸವಾಗುತ್ತಿವೆ. ಇವುಗಳ ಜತೆಗೆ ನಗರದಲ್ಲಿನ ಲ್ಯಾನ್ಸ್‌ ಡೌನ್‌ ಕಟ್ಟಡ, ದೇವರಾಜ ಮಾರುಕಟ್ಟೆ, ಸಿಎಫ್‌ ಟಿಆರ್‌ ಐ, ಜಗನ್ ಮೋಹನ ಅರಮನೆ, ಬುಲೇವಾರ್ಡ್ ರಸ್ತೆ, ಇರ್ವೀನ್ ರಸ್ತೆಯಂತಹ ಹತ್ತಾರು ತಾಣಗಳು, ಕಟ್ಟಡಗಳು ಇಲ್ಲಿನ ಪರಂಪರೆಯನ್ನು ತಮ್ಮ ಒಡಲಲ್ಲಿ ಇಟ್ಟುಕೊಂಡಿದ್ದು, ಅವುಗಳನ್ನು ಸಂರಕ್ಷಿಸುವ ಹೊಣೆ ಸರಕಾರದ್ದಾಗಿದೆ. ರಾಜಸ್ಥಾನದ ಜೈಪುರದ (ಪಿಂಕ್ ಸಿಟಿ) ಮಾದರಿಯಲ್ಲಿ ಮೈಸೂರು ನಗರದ ಅಭಿವೃದ್ಧಿ ಆಗಬೇಕಿದೆ ಎಂದು ಹೇಳಿದ್ದಾರೆ.

ಇವೆಲ್ಲನ್ನೂ ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರ ಈ ಬಾರಿಯ ಬಜೆಟ್‌ ನಲ್ಲಾದರೂ ಇಲ್ಲಿನ ಮೂಲಸೌಕರ್ಯಗಳ ಅಭಿವೃದ್ಧಿ, ಪಾರಂಪರಿಕತೆಯ ಸಂರಕ್ಷಣೆಗೆ ಅನುದಾನ ನೀಡಬೇಕು. ಆ ನಿರೀಕ್ಷೆಯಲ್ಲಿ ಇಲ್ಲಿನ ಸಾರ್ವಜನಿಕರು ಇದ್ದಾರೆ.

ಈ ಬಗ್ಗೆ ಬಿಜೆಪಿ ಸಂಸದರು ಕಳೆದ 12 ವರ್ಷಗಳಿಂದಲೂ ಗಮನ ಹರಿಸದಿರುವುದು ವಿಪರ್ಯಾಸ. ಈಗಲೂ ಕಾಲ ಮಿಂಚಿಲ್ಲ, ಸ್ವತಃ ರಾಜಪ್ರಭುತ್ವದ ಹಿನ್ನೆಲೆಯಿಂದ ಬಂದಿರುವ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೇಂದ್ರ ಸರಕಾರದ ಗಮನ ಸೆಳೆದು ಪಾರಂಪರಿಕ ನಗರದ ಸಂರಕ್ಷಣೆಗೆ ಅನುದಾನ ತರುವ ಹೊಣೆಯನ್ನು ಹೊರಬೇಕಿದೆ. ಇಲ್ಲಿನ ಪರಂಪರೆ, ಸಂಸ್ಕೃತಿ, ಸಾಂಸ್ಕೃತಿಕ ಹಿರಿಮೆಯನ್ನು ಸಂರಕ್ಷಿಸದಿದ್ದರೆ ಅದು ನಶಿಸುವ ಅಪಾಯವಿದೆ. ಈ ಬಗ್ಗೆ ಸಂಸದರು ಎಚ್ಚರವಹಿಸಲೇಬೇಕು ಎಂದು ಕೆ.ವಿ ಮಲ್ಲೇಶ್ ಸಲಹೆ ನೀಡಿದ್ದಾರೆ.

ಇದರ ಜತೆಗೆ ಕರ್ನಾಟಕದಿಂದ ರಾಜ್ಯಸಭೆಗೆ ಎರಡನೇ ಬಾರಿಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್‌ ಅವರು ಪ್ರತಿ ಬಜೆಟ್‌ ನಲ್ಲಿಯೂ ರಾಜ್ಯಕ್ಕೆ ಅನ್ಯಾಯ ಮಾಡುತ್ತಲೇ ಬಂದಿದ್ದಾರೆ. ಅವರು ಈ ಬಾರಿಯಾದರೂ ಬಜೆಟ್‌ ನಲ್ಲಿ ರಾಜ್ಯಕ್ಕೆ ಹೆಚ್ಚಿನ ಕೊಡುಗೆ ನೀಡಬೇಕು. ಜತೆಗೆ ಮೈಸೂರು ನಗರದ ಪಾರಂಪರಿಕ ರಕ್ಷಣೆಗೆ ವಿಶೇಷ ಅನುದಾನ ನೀಡುವ ಮೂಲಕ ರಾಜ್ಯದ ಜನರ ಋಣ ತೀರಿಸಲಿ ಎಂದು ಕೆ.ವಿ ಮಲ್ಲೇಶ್ ತಿಳಿಸಿದ್ದಾರೆ.

Key words: Special grant, Mysore, central budget, K.V. Mallesh, demand