ಕಲಾಮಂದಿರ ನವೀಕರಣಕ್ಕೆ ಬಜೆಟ್‌ ನಲ್ಲಿ ಅನುದಾನ ನೀಡಿ- ಕೆ.ವಿ. ಮಲ್ಲೇಶ್ ಒತ್ತಾಯ

ಮೈಸೂರು,ಜನವರಿ,28,2026 (www.justkannada.in): ಈ ಬಾರಿಯ ರಾಜ್ಯ ಬಜೆಟ್‌ ನಲ್ಲಿ ಮೈಸೂರಿನಲ್ಲಿ ಬಹುಕಾಲದಿಂದ ನನೆಗುದಿಗೆ ಬಿದ್ದಿರುವ ಕಲಾಮಂದಿರ ನವೀಕರಣ, ಪಿಟೀಲು ಚೌಡಯ್ಯ ವೃತ್ತ ಮೇಲ್ದರ್ಜೆಗೇರಿಸುವುದು ಮತ್ತು ಸುತ್ತೂರು ಶ್ರೀ ರಾಜೇಂದ್ರ ಮಹಾಸ್ವಾಮಿಗಳ ಪುತ್ಥಳಿ ಅನಾವರಣಕ್ಕೆ ಆದ್ಯತೆ ನೀಡಿ, ಅನುದಾನ ಮೀಸಲಿಡಬೇಕು ಎಂದು ಅನಿಕೇತನಾ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ವಿ. ಮಲ್ಲೇಶ್ ಒತ್ತಾಯಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೆ.ವಿ ಮಲ್ಲೇಶ್,  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ನಗರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಪ್ರತಿ ಬಾರಿಯ ಬಜೆಟ್‌ ನಲ್ಲಿಯೂ ನೂರಾರು ಕೋಟಿ ರೂ. ಅನುದಾನ ನೀಡುವ ಮೂಲಕ ನಗರ ಮತ್ತು ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಈ ನಡುವೆ ದಿ.ಆರ್.ಗುಂಡೂರಾವ್ ಅವರು ಮುಖ್ಯಮಂತ್ರಿಯಾದಾಗ ನಿರ್ಮಾಣವಾಗಿರುವ ನಗರದ ಕರ್ನಾಟಕ ಕಲಾಮಂದಿರ ಅಭಿವೃದ್ಧಿಯ ದೃಷ್ಟಿಯಿಂದ ತೀವ್ರ ಹಿಂದುಳಿದಿದ್ದು, ತುರ್ತಾಗಿ ನವೀಕರಣವಾಗಬೇಕಿದೆ. ಕಲಾಮಂದಿರದ ಕುರ್ಚಿಗಳು, ವಿದ್ಯುತ್ ದೀಪಾಲಂಕಾರ, ಸೌಂಡ್ ಸಿಸ್ಟಮ್ ಮತ್ತು ಬಾಲ್ಕಾನಿ ಹಾಳಾಗಿವೆ. ಅಲ್ಲದೇ, ಗೋಡೆಗಳು ಮಳೆಗಾಲದಲ್ಲಿ ಹೆಚ್ಚಿನ ಶೀತದಿಂದ ಶಿಥಿಲಗೊಂಡಿವೆ. ತುರ್ತಾಗಿ ಇವುಗಳ ನವೀಕರಣ ಆಗಬೇಕಿದೆ. ಇದರ ಜತೆಗೆ ಮುಂಭಾಗದ ಆವರಣದ ಸೌಂದರ್ಯೀಕರಣ ಹೆಚ್ಚಿಸಬೇಕಿದೆ ಮತ್ತು ದಿ.ಆರ್.ಗುಂಡೂರಾವ್ ಅವರ ಪ್ರತಿಮೆ ನಿರ್ಮಿಸಿ ಅವರನ್ನು ಸ್ಮರಿಸುವ ಕೆಲಸವಾಗಬೇಕು.  ಸಾಂಸ್ಕೃತಿಕ ಕೇಂದ್ರವಾದ  ಕಲಾಮಂದಿರದ ಸರ್ವಾಂಗೀಣ ಅಭಿವೃದ್ಧಿಗೆ ಬಜೆಟ್‌ ನಲ್ಲಿ ಅನುದಾನ ಮೀಸಲಿಡಬೇಕು. ಆ ಮೂಲಕ ಮೈಸೂರು ನಗರದ ಸಾಂಸ್ಕೃತಿಕ ಲೋಕಕ್ಕೊಂದು ಅದ್ಭುತ ಕೊಡುಗೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಇದರ ಜತೆಗೆ,  ಮೈಸೂರು ಮತ್ತು ನಾಡಿನ ಸಾಂಸ್ಕೃತಿಕ ಲೋಕಕ್ಕೆ ಅಪಾರ ಕೊಡುಗೆ ನೀಡಿರುವ ಪಿಟೀಲು ಚೌಡಯ್ಯ ಹೆಸರಿನಲ್ಲಿ ಕಲಾಮಂದಿರದ ಎದುರಿರುವ ವೃತ್ತವನ್ನು ಅಭಿವೃದ್ಧಿಪಡಿಸಿ, ಅದರ ಪಕ್ಕದಲ್ಲಿರುವ ಕಿರು ಉದ್ಯಾನದಲ್ಲಿ  ಪಿಟೀಲು ಚೌಡಯ್ಯ ಅವರ ಪ್ರತಿಮೆ ಸ್ಥಾಪಿಸುವ ಕೆಲಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ ನಲ್ಲಿ ಅಗತ್ಯ ಅನುದಾನ ಮೀಸಲಿಡಬೇಕು ಎಂದು ಕೆ.ವಿ ಮಲ್ಲೇಶ್ ಆಗ್ರಹಿಸಿದ್ದಾರೆ.

ಇವೆರಡು ಕೆಲಸಗಳ ಜತೆಗೆ ತ್ರಿವಿಧ ದಾಸೋಹಿ, ರಾಜಗುರು ತಿಲಕ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಪ್ರತಿಮೆ ಅನಾವರಣ ಕೆಲಸ ಸಾಕಷ್ಟು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಈ ವೃತ್ತವನ್ನು ಈ ಹಿಂದೆಯೇ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ವೃತ್ತ ಎಂದು ಪಾಲಿಕೆ ವತಿಯಿಂದ ನಾಮಕರಣ ಮಾಡಲಾಗಿದೆ. ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಆಸಕ್ತಿ ವಹಿಸಿ ಪ್ರತಿಮೆ ಅನಾವರಣ ಸಂಬಂಧದ ವಿವಾದಕ್ಕೆ ಇತಿಶ್ರೀ  ಹಾಡುವ ಮೂಲಕ  ಸಾವಿರಾರು ಮಕ್ಕಳಿಗೆ ಅನ್ನ, ಅಕ್ಷರ, ವಸತಿಯನ್ನು ನೀಡಿ ಪೊರೆದ ಯುಗದ ಸಂತ ರಾಜೇಂದ್ರ ಮಹಾಸ್ವಾಮಿಗಳಿಗೆ ಗೌರವ ಸಲ್ಲಿಸಬೇಕು. ಈ ಬಗ್ಗೆ  ಸಿಎಂ ಸಿದ್ದರಾಮಯ್ಯ ಅವರು  ಆದ್ಯತೆ ನೀಡುವಂತೆ  ಸಾರ್ವಜನಿಕರ ಪರವಾಗಿ ಕಳಕಳಿಯಿಂದ ಕೇಳಿಕೊಳ್ಳುತ್ತೇನೆ ಎಂದು ಕೆ.ವಿ ಮಲ್ಲೇಶ್ ತಿಳಿಸಿದ್ದಾರೆ.

Key words:  budget, funding,renovation, Mysore, Kalamandir, K.V. Mallesh