ಮೈಸೂರು,ಜನವರಿ,27,2026 (www.justkannada.in): ಮೈಸೂರು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (AIISH) ತನ್ನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯ ಮಾನಸಿಕ ಕ್ಷೇಮವನ್ನು ಬಲಪಡಿಸುವ ಉದ್ದೇಶದಿಂದ ಸಂಸ್ಥೆಯ ಆವರಣದಲ್ಲಿ ಸುಸಜ್ಜಿತ ‘ವೆಲ್ನೆಸ್ ಸೆಂಟರ್’ (ಕ್ಷೇಮ ಕೇಂದ್ರ)ವನ್ನು ಸ್ಥಾಪಿಸಿದೆ.
ಈ ಕೇಂದ್ರದ ಮೂಲಕ ಅರ್ಹ ಕ್ಲಿನಿಕಲ್ ಸೈಕಾಲಜಿಸ್ಟ್ ಗಳ ನೆರವಿನಿಂದ ಮಾನಸಿಕ ಮೌಲ್ಯಮಾಪನ, ಆಪ್ತ ಸಮಾಲೋಚನೆ ಹಾಗೂ ವಿವಿಧ ಚಿಕಿತ್ಸಾ ವಿಧಾನಗಳನ್ನು ಒಳಗೊಂಡ ಸಮಗ್ರ ಮಾನಸಿಕ ಆರೋಗ್ಯ ಸೇವೆಗಳನ್ನು ಒದಗಿಸಲಾಗುವುದು. ಜೊತೆಗೆ ಮನೋವೈದ್ಯಕೀಯ ಸಮಾಲೋಚನೆಯನ್ನೂ ನೀಡುವ ಮೂಲಕ ಮಾನಸಿಕ ಆರೋಗ್ಯದತ್ತ ಸಮಗ್ರ ದೃಷ್ಟಿಕೋನವನ್ನು ಕೇಂದ್ರ ಹೊಂದಿದೆ.
ಪ್ರೇರಣಾ ಆಸ್ಪತ್ರೆ ಮತ್ತು ನ್ಯೂರೋಕೇರ್ ನ ನಿರ್ದೇಶಕ ಹಿರಿಯ ನರಮನೋವೈದ್ಯ ಡಾ. ಅಭಿಜಿತ್ ರಮಣ ಹೊನ್ನಗೊಡು ಅವರು ಇತೀಚೆಗೆ ವೆಲ್ ನೆಸ್ ಕ್ಷೇಮ ಕೇಂದ್ರವನ್ನು ಉದ್ಘಾಟಿಸಿದರು. ಈ ಕೇಂದ್ರದಲ್ಲಿ ನಿಯಮಿತವಾಗಿ ಮನೋವೈದ್ಯಕೀಯ ಸಮಾಲೋಚನಾ ಸೇವೆಗಳನ್ನು ನೀಡಲು ಅವರು ಒಪ್ಪಿಗೆ ಸೂಚಿಸಿದ್ದು, ಇದರೊಂದಿಗೆ ಆಯಿಷ್ ನ ಮಾನಸಿಕ ಆರೋಗ್ಯ ಸೇವಾ ವ್ಯವಸ್ಥೆ ಮತ್ತಷ್ಟು ಬಲಗೊಂಡಿದೆ.
ವೆಲ್ ನೆಸ್ ಸೆಂಟರ್ ಸ್ಥಾಪನೆಯೊಂದಿಗೆ ಆಯಿಷ್ ನ ಕ್ಲಿನಿಕಲ್ ಸೈಕಾಲಜಿ ವಿಭಾಗವು ರೋಗಿಗಳು, ಪೋಷಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಲ್ಲಿ ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ಅಕ್ಟೋಬರ್ ತಿಂಗಳಲ್ಲಿ ಒಂದು ತಿಂಗಳ ಕಾಲ ವಿವಿಧ ಜಾಗೃತಿ ಕಾರ್ಯಕ್ರಮಗಳು, ಸಾಮರ್ಥ್ಯ ವೃದ್ಧಿ ಹಾಗೂ ಭಾವನಾತ್ಮಕ ಸ್ಥೈರ್ಯವನ್ನು ಉತ್ತೇಜಿಸುವ ಚಟುವಟಿಕೆಗಳನ್ನು ನಡೆಸಲಾಯಿತು. ಈ ಸಂದರ್ಭ ವಿದ್ಯಾರ್ಥಿಗಳಿಗಾಗಿ ಮಾನಸಿಕ ಆರೋಗ್ಯ ವಿಷಯದ ಚಿತ್ರಕಲೆ ಸ್ಪರ್ಧೆ, ಸಿಬ್ಬಂದಿ ಹಾಗೂ ಪೋಷಕರಿಗಾಗಿ ಒತ್ತಡ ನಿರ್ವಹಣಾ ಕಾರ್ಯಾಗಾರಗಳನ್ನು ಆಯೋಜಿಸಲಾಗಿತ್ತು. ಅಲ್ಲದೆ, ಸೆಪ್ಟೆಂಬರ್ ನಲ್ಲಿ ವಿಶ್ವ ಆತ್ಮಹತ್ಯೆ ತಡೆ ದಿನದ ಅಂಗವಾಗಿ ಸ್ವಯಂ-ಹಾನಿ ತಡೆಗಟ್ಟುವಿಕೆ ಹಾಗೂ ಹೊಂದಿಕೊಳ್ಳುವ (ಅಡಾಪ್ಟಿವ್) ಕೋಪಿಂಗ್ ತಂತ್ರಗಳ ಕುರಿತು ವಿಶೇಷ ಕಾರ್ಯಾಗಾರಗಳನ್ನೂ ನಡೆಸಲಾಗಿದೆ.
ಕ್ಲಿನಿಕಲ್ ಸೈಕಾಲಜಿ ವಿಭಾಗದ ಮುಖ್ಯಸ್ಥರು ಹಾಗೂ ವೆಲ್ ನೆಸ್ ಸೆಂಟರ್ ನ ಉಸ್ತುವಾರಿ ಡಾ. ಋಷಿ ಮಾತನಾಡಿ, ಈ ಉಪಕ್ರಮವು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಹಾಗೂ ಶಿಕ್ಷಣ ಸಚಿವಾಲಯದ ಮಾರ್ಗಸೂಚಿಗಳಿಗೆ ಅನುಗುಣವಾಗಿದ್ದು, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾಲೋಚನಾ ಸೇವೆಗಳನ್ನು ಅಳವಡಿಸಿಕೊಳ್ಳುವುದು, ಮಾನಸಿಕ ಸಮಸ್ಯೆಗಳ ಕುರಿತ ಸಾಮಾಜಿಕ ಕಳಂಕವನ್ನು ಕಡಿಮೆ ಮಾಡುವುದು ಹಾಗೂ ಆರಂಭಿಕ ಹಂತದಲ್ಲೇ ಸಮಸ್ಯೆಗಳನ್ನು ಗುರುತಿಸಿ ಚಿಕಿತ್ಸೆ ನೀಡುವುದು ಕೇಂದ್ರದ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು.
ಆಯಿಷ್ ನಿರ್ದೇಶಕಿ ಡಾ. ಎಂ. ಪುಷ್ಪಾವತಿ ಅವರು ಈ ಎಲ್ಲಾ ಚಟುವಟಿಕೆಗಳಿಗೆ ನಿರಂತರ ಬೆಂಬಲ ನೀಡುತ್ತಿದ್ದು, ಸಂಸ್ಥೆಯ ಸಮುದಾಯಕ್ಕೆ ಸ್ಫೂರ್ತಿಯಾಗಿದ್ದಾರೆ ಎಂದು ಅವರು ತಿಳಿಸಿದರು.
Key words: Wellness Center, established, Mysore, AIISH







