ಮನರೇಗಾ ಯೋಜನೆ ಹೆಸರು ಬದಲಾವಣೆ ಖಂಡಿಸಿ ನಾಳೆ ರಾಜಭವನ ಚಲೋ- ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು,ಜನವರಿ,26,2026 (www.justkannada.in):  ಮನರೇಗಾ ಯೋಜನೆ ಹೆಸರು ಬದಲಾಯಿಸಿರುವ ಕೇಂದ್ರ ಸರ್ಕಾರದ  ನಡೆ ಖಂಡಿಸಿ ನಾಳೆ ರಾಜಭವನ ಚಲೋ ಹಮ್ಮಿಕೊಳ್ಳಲಾಗಿದೆ ಎಂದು  ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ಈ ಕುರಿತು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್,  ಮನರೇಗಾ ಯೋಜನೆ ಉಳಿಸುವ ಉದ್ದೇಶದಿಂದ ನಾಳೆ ಮಂಗಳವಾರ ರಾಜಭವನ ಚಲೋ  ಹಮ್ಮಿಕೊಳ್ಳಲಾಗಿದ್ದು, ಪ್ರತಿ ತಾಲೂಕು, ಪ್ರತಿ ಪಂಚಾಯತಿ ಮಟ್ಟದಲ್ಲೂ ಹೋರಾಟ ಹಮ್ಮಿಕೊಳ್ಳಲಾಗುವುದು. ಮನರೇಗಾವನ್ನು ನಾಶ ಮಾಡುವ ಕಾನೂನನ್ನು ಹಿಂಪಡೆಯಬೇಕು. ರೈತರ ಕರಾಳ ಕಾಯ್ದೆಗಳನ್ನು ಹೇಗೆ ಹಿಂಪಡೆದರೋ ಹಾಗೆಯೇ ಇದನ್ನು ಹಿಂಪಡೆಯುವವರೆಗೂ ಹೋರಾಟ ಮಾಡುತ್ತೇವೆ ಎಂದರು.

ಮಹಾತ್ಮಗಾಂಧಿ ಅವರ ಹೆಸರಿನಲ್ಲಿ ಪ್ರಾರಂಭವಾದ ಯೋಜನೆ ಗ್ರಾಮೀಣ ಭಾಗದ ಜನರ ಉದ್ಯೋಗದ ಹಕ್ಕಿಗೆ ಖಾತ್ರಿ ನೀಡಿತ್ತು. ಆದರೆ ಈ ಹಕ್ಕು ಈಗ ಮೊಟಕಾಗಿದೆ. ಆದಕಾರಣ ಇಡೀ ದೇಶದ ಉದ್ದಗಲಕ್ಕೂ ಈ ಬಗ್ಗೆ ಹೋರಾಟ ರೂಪಿಸಲಾಗಿದೆ. ಮನರೇಗಾ ಮರು ಸ್ಥಾಪಿಸುವವರೆಗೂ ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಹೋರಾಟ ಮಾಡಲಾಗುವುದು ಎಂದರು.

Key words: MNREGA scheme, Raj Bhavan Chalo, tomorrow, DCM, D.K. Shivakumar