ಮೈಸೂರು, ಜನವರಿ,26, 2026 (www.justkannada.in): ಕುಸುಮ್-ಸಿ ಹಾಗೂ ಕುಸುಮ್-ಬಿ ಯೋಜನೆಗಳ ಸಮರ್ಪಕ ಅನುಷ್ಠಾನ ಸೇರಿದಂತೆ ಸಿಬ್ಬಂದಿಗೆ ಆರೋಗ್ಯ ಸೇವೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ವು ಕಡಿಮೆ ಸಮಯ, ಕಡಿಮೆ ವೆಚ್ಚದಲ್ಲಿ ಹಲವು ಪ್ರಗತಿ ಸಾಧಿಸಿದೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಎಲ್ಲರೂ ಒಗ್ಗೂಡಿ ಸಂಸ್ಥೆಯ ಪ್ರಗತಿಗೆ ಮತ್ತಷ್ಟು ಶ್ರಮಿಸೋಣ ಎಂದು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಮುನಿಗೋಪಾಲ್ ರಾಜು ಕರೆ ನೀಡಿದರು.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಚಾವಿಸನಿನಿ) ಪ್ರಧಾನ ಕಚೇರಿಯಲ್ಲಿ ಸೋಮವಾರ ನಡೆದ 77ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೆರಿಸಿ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಮುನಿಗೋಪಾಲ್ ರಾಜು ಅವರು ಮಾತನಾಡಿದರು. 
ಗಣರಾಜ್ಯೋತ್ಸವ ದಿನವನ್ನು ಸಂತೋಷ ಭರಿತವಾಗಿ ಆಚರಣೆ ಮಾಡುತ್ತಿರುವ ಈ ಸಂದರ್ಭದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್, ಸರ್ದಾರ್ ವಲ್ಲಭಭಾಯ್ ಪಟೇಲ್ ಅವರನ್ನು ನೆನೆಯುತ್ತಾ, ಅವರ ಆದರ್ಶಗಳನ್ನು ನಾವೆಲ್ಲಾ ಪಾಲಿಸಬೇಕಿದೆ. ಜತೆಗೆ ನಮ್ಮ ದೇಶ ಹಾಗೂ ರಾಜ್ಯವನ್ನು ಪ್ರಗತಿಯತ್ತ ಮುನ್ನಡೆಸಲು ನಾವೆಲ್ಲರೂ ಪಣತೊಡಬೇಕಿದೆ. ಇಂದು ಕರ್ನಾಟಕ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು, ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದ್ದರೆ. ಭಾರತ ಕೂಡ ವಿಶ್ವದ ನಾಲ್ಕನೇ ಬಲಿಷ್ಠ ರಾಷ್ಟ್ರವಾಗಿ ಗುರುತಿಸಿಕೊಂಡಿದೆ ಎಂದರು.
ಅಂತೆಯೇ ಇಂಧನ ಇಲಾಖೆ ಕೂಡ ಸಚಿವ ಕೆ.ಜೆ. ಜಾರ್ಜ್ ಅವರ ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿದ್ದು, ಐದು ಸಾವಿರ ಮೆ.ವ್ಯಾ ವಿದ್ಯುತ್ ಉತ್ಪಾದಿಸಿ, ಗ್ರಿಡ್ ಗೆ ಸೇರ್ಪಡೆ ಮಾಡಲು ಕ್ರಮವಹಿಸಲಾಗಿದೆ. ಅಲ್ಲದೇ ಟ್ರ್ಯಾನ್ಸ್ ಮಿಷನ್ ವಿಭಾಗದಲ್ಲೂ ಸೆಸ್ಕ್ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿದ್ದು, ಕಳೆದ ಎರಡು ವರ್ಷಗಳಲ್ಲಿ ಈ ನಿಟ್ಟಿನಲ್ಲಿ ಅನೇಕ ಕೆಲಸಗಳನ್ನು ಮಾಡಲಾಗಿದೆ. 90 ವಿತರಣಾ ಕೇಂದ್ರಗಳು ಹಾಗೂ ಪ್ರಸರಣ ಕೇಂದ್ರಗಳನ್ನು ಬಲಪಡಿಸುವ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
900 ಮೆ.ವ್ಯಾ. ವಿದ್ಯುತ್:
ಕುಸುಮ್-ಸಿ ಯೋಜನೆ ಅಡಿಯಲ್ಲಿ ಚಾವಿಸಾನಿನಿ ವ್ಯಾಪ್ತಿಯಲ್ಲಿ 900 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಗೆ ಕ್ರಮವಹಿಸಲಾಗಿದೆ. ಬೇಸಿಗೆ ವೇಳೆಯಲ್ಲಿ ವಿದ್ಯುತ್ ಪೂರೈಕೆಗೆ ಒತ್ತಡ ಎದುರಾಗಲಿದ್ದು, ಈ ನಿಟ್ಟಿನಲ್ಲಿ 900 ಮೆ.ವ್ಯಾ. ವಿದ್ಯುತ್ ಉತ್ಪಾದನೆಯಾದರೆ ಮಾರ್ಚ್ ವೇಳೆಗೆ 600 ಮೆ.ವ್ಯಾ. ಸೆಸ್ಕ್ ವ್ಯಾಪ್ತಿಗೆ ಸೇರಲಿದೆ. ಅದೇ ರೀತಿ ಕುಸುಮ್-ಬಿ ಯೋಜನೆಯಲ್ಲಿ 6000 ರೈತರು ಲಾಭ ಪಡೆದಿದ್ದು, 60 ಮೆ.ವ್ಯಾ. ವಿದ್ಯುತ್ ಗ್ರಿಡ್‌ನಿಂದ ರೈತರಿಗೆ ಲಭ್ಯವಾಗಲಿದೆ. ಹೀಗಾಗಿ ಈ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಒಗ್ಗೂಡಿ ಪ್ರಯತ್ನಿಸಬೇಕಿದೆ ಎಂದು ಹೇಳಿದರು.
ಹಲವು ಅಭಿವೃದ್ಧಿ ಕಾರ್ಯ:
ಮುಡಾದಿಂದ 22 ಸೈಟ್ ಗಳನ್ನು ಸೆಸ್ಕ್ ವ್ಯಾಪ್ತಿಗೆ ಪಡೆಯಲಾಗಿದೆ. ಕಚೇರಿ ಹಾಗೂ ಸ್ಟೋರ್ ಗಳನ್ನು ನಿರ್ಮಿಸಲಾಗುವುದು, ಸ್ಟೇಷನ್ ನಿರ್ಮಾಣಕ್ಕೆ 10 ನಿವೇಶನ ಪಡೆಯಲಾಗಿದೆ. ಹೊಸದಾಗಿ 11 ಕೆವಿ ಮಾರ್ಗಗಳನ್ನು ನಿರ್ಮಾಣಕ್ಕೆ ಸುಮಾರು 100-120 ಹೊಸ ಕೇಂದ್ರಗಳನ್ನು ನಿರ್ಮಿಸಲು ಕ್ರಮವಹಿಸಲಾಗಿದ್ದು, ಇದರಿಂದ ವಿದ್ಯುತ್ ಸೋರಿಕೆ, ವಿದ್ಯುತ್ ಅಡಚಣೆ ಹಾಗೂ ನಷ್ಟ ಕಡಿಮೆ ಆಗಲಿದೆ. ಜತೆಗೆ ಕೊಡಗು ಜಿಲ್ಲೆ ವಿದ್ಯುತ್ ಸಮಸ್ಯೆ ಬಗೆಹರಿಸಲು ಹಾಗೂ ವಿದ್ಯುತ್ ಪೂರೈಕೆ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ 10-15 ವರ್ಷಗಳಿಂದ ಆಗದ ಕೆಲಸವನ್ನು ಕಡಿಮೆ ಅವಧಿಯಲ್ಲಿ 200 ಕೋಟಿ ವೆಚ್ಚದಲ್ಲಿ ಮಾಡಲಾಗಿದೆ. ಪಾರಂಪರಿಕ ಹಾಗೂ ಅರಮನೆಗಳ ನಗರಿ ಮೈಸೂರು ನಗರದಲ್ಲಿ ವಿದ್ಯುತ್ ಯುಜಿ ಕೇಬಲ್ ಅಳವಡಿಕೆ, ಹಾಡಿಗಳಲ್ಲಿ ವಿದ್ಯುತೀಕರಣಕ್ಕೆ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಆರ್ ಡಿಎಸ್‌ಎಸ್ ಅನುದಾನ:
ಪ್ರಸ್ತುತ ಕೇಂದ್ರ ಸರ್ಕಾರದಲ್ಲಿ ಸೆಸ್ಕ್ ಡಿಪಿಆರ್ ಇದ್ದು, ಆರ್ ಡಿಎಸ್‌ಎಸ್ ಅನುದಾನ ತರುವ ಪ್ರಯತ್ನ ಮಾಡಲಾಗಿದೆ. ಇದರಿಂದ 60% ಅನುದಾನ ನೇರವಾಗಿ ಕೇಂದ್ರ ಸರ್ಕಾರದ ಮೂಲಕ ಸೆಸ್ಕ್ ವ್ಯಾಪ್ತಿಗೆ ದೊರೆಯಲಿದೆ. 150 ಕೋಟಿ ಡಿಪಿಆರ್ ಮಾಡಿ, ಇದರಲ್ಲಿ ಮೈಸೂರು ನಗರಕ್ಕೆ ಸ್ಕಾಡಾ(SCADA) ಆಟೋ ಚೇಂಜ್ ಓವರ್ ವ್ಯವಸ್ಥೆ ಅಳವಡಿಸಲು ಕ್ರಮವಹಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸೆಸ್ಕ್ ತಾಂತ್ರಿಕ ನಿರ್ದೇಶಕ ಡಿ.ಜೆ. ದಿವಾಕರ್, ಮುಖ್ಯ ಪ್ರಧಾನ ವ್ಯವಸ್ಥಾಪಕರು(ತಾಂತ್ರಿಕ) ಶರಣಮ್ಮ ಎಸ್. ಜಂಗಿನ, ಮುಖ್ಯ ಆರ್ಥಿಕ ಅಧಿಕಾರಿ ಜಿ. ರೇಣುಕಾ, ಪ್ರಧಾನ ವ್ಯವಸ್ಥಾಪಕಿ(ಆ ಮತ್ತು ಮಾ.ಸಂ) ಡಾ.ಬಿ.ಆರ್. ರೂಪಾ, ಸೆಸ್ಕ್ ಜಾಗೃತ ದಳದ ಎಸ್ಪಿ ಸವಿತಾ ಹೂಗಾರ್, ಕೆನರಾ ಬ್ಯಾಂಕ್ ವಯಲ ವ್ಯವಸ್ಥಾಪಕ ಉಮೇಶ್ ಸೇರಿದಂತೆ ಇತರರಿದ್ದರು.
1.06 ಕೋಟಿ ಪರಿಹಾರ ವಿತರಣೆ:
ಇತ್ತೀಚೆಗೆ ಹನೂರು ಉಪ ವಿಭಾಗ ವ್ಯಾಪ್ತಿಯ ಸೆಸ್ಕ್ ಸಿಬ್ಬಂದಿ ಟಿ. ರಾಹುಲ್ ಅವರು ಕರ್ತವ್ಯ ನಿರ್ವಹಣೆ ವೇಳೆ ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಕುಟುಂಬದವರಿಗೆ 1.06 ಕೋಟಿ ರೂ. ಪರಿಹಾರದ ಚೆಕ್ ಗಳನ್ನು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರು ವಿತರಿಸಿದರು.
Key words: work, together, development, CESC, K.M. Munigopal Raju







