ಬೆಂಗಳೂರು,ಜನವರಿ,26,2026 (www.justkannada.in): ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ರೀತಿಯ ಸೇವೆ ಸಲ್ಲಿಸುತ್ತಿರುವ ಮಹನೀಯರ ಕ್ರೀಡಾಸಕ್ತಿಯನ್ನು ಪ್ರದರ್ಶಿಸಲು ವೇದಿಕೆ ರೂಪಿಸುವ ಉದ್ದೇಶದೊಂದಿಗೆ ‘9 ಡ್ರೀಮ್ಸ್’ ಸಂಸ್ಥೆ ‘ಸಿಎಂ ಕಪ್ 2026’ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸುತ್ತಿದ್ದು , ಕ್ರೀಡಾಕೂಟದ ಆಟಗಾರರ ಆಯ್ಕೆ ಮತ್ತು ಜೆರ್ಸಿ ಅನಾವರಣ ಕಾರ್ಯಕ್ರಮ ಭಾನುವಾರ ಅದ್ಧೂರಿಯಾಗಿ ನಡೆಯಿತು. ಮೀಡಿಯಾ ಕನೆಕ್ಟ್ ಸಹಯೋಗದಲ್ಲಿ ಕ್ರೀಡಾಕೂಟ ಆಯೋಜನೆಗೊಳ್ಳುತ್ತಿದೆ.
ಸಿಎಂ ಕಪ್ 2026 ಕ್ರೀಡಾಕೂಟವು ಫೆ. 21 (ಶನಿವಾರ) ಮತ್ತು ಫೆ. 22 (ಭಾನುವಾರ)ರಂದು ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ನಲ್ಲಿ ನಡೆಯಲಿದೆ. ಅದರ ಪೂರ್ವಭಾವಿಯಾಗಿ ಅರಮನೆ ಮೈದಾನದ ವೈಟ್ ಪೆಟಲ್ಸ್ ನಲ್ಲಿ ಆಟಗಾರರ ಆಯ್ಕೆ ಮತ್ತು ಜೆರ್ಸಿ ಅನಾವರಣ ಮಾಡಲಾಯಿತು.
ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಜಿ ಮತ್ತು ಐಜಿಪಿ ಡಾ. ಎಂ. ಎ. ಸಲೀಂ, ಡಿಜಿಪಿ ಅಲೋಕ್ ಕುಮಾರ್ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ತಂಡದ ಜರ್ಸಿ ಬಿಡುಗಡೆ ಮಾಡಿದರು.
ಈ ವೇಳೆ ಸಕ್ರಾ ಆಸ್ಪತ್ರೆಯ ನಿರ್ದೇಶಕ ಡಾ. ಶ್ರೀಕಾಂತ್ ಶೆಟ್ಟಿ, ಹಿರಿಯ ಪತ್ರಕರ್ತ ಪೊನ್ನಪ್ಪ ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಡಿಜಿ ಮತ್ತು ಐಜಿಪಿ ಡಾ. ಎಂ. ಎ. ಸಲೀಂ, ಇದು ಐಪಿಎಲ್ ಮಾದರಿಯಲ್ಲಿ ಆಯೋಜನೆ ಮಾಡಿರುವುದು ಬಹಳ ಖುಷಿ ನೀಡಿದೆ. ನಾನು ಬ್ಯಾಡ್ಮಿಂಟನ್ ಆಡುತ್ತೇನೆ. ಇದು ಕ್ರೀಡಾ ಸ್ಪೂರ್ತಿಯನ್ನು ತೋರಿಸುತ್ತದೆ. ನಮ್ಮ ಇಲಾಖೆಯವರು ಇದರಲ್ಲಿ ಆಡುತ್ತಿರುವುದು ಬಹಳ ಸಂತೋಷ ತಂದಿದೆ. ಎಲ್ಲರೂ ಕ್ರೀಡೆಯಲ್ಲಿ ಭಾಗವಹಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದರು.
ಅಲೋಕ್ ಕುಮಾರ್ ಮಾತನಾಡಿ, ನಾನು ಬ್ಯಾಡ್ಮಿಂಟನ್ ಆಡುತ್ತೇನೆ. ಈ ಪಂದ್ಯಾವಳಿಯಲ್ಲಿ ರಾಜಕೀಯ ಮುಖಂಡರು, ಮಾಧ್ಯಮದ ಮಿತ್ರರು, ವೈದ್ಯರು, ಆಡಳಿತಾಧಿಕಾರಿಗಳು ಎಲ್ಲರ ಸಮ್ಮಿಲನ ನೋಡಿ ಬಹಳ ಖುಷಿಯಾಯಿತು. ಬಹುಶಃ ಈ ರೀತಿ ಎಲ್ಲಿಯೂ ನಡೆದಿಲ್ಲ. ಪಂದ್ಯಾವಳಿ ತುಂಬಾ ಚೆನ್ನಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಟಿವಿ9 ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಹಲವು ವರ್ಷಗಳ ಸೇವೆ ಸಲ್ಲಿಸಿರುವ ಅನುಭವ ಹೊಂದಿರುವ ಜಿ.ವೈ. ಮಂಜುನಾಥ್ ಅವರ ಪರಿಕಲ್ಪನೆಯಲ್ಲಿ ಸಿಎಂ ಕಪ್ 2026 ಆಯೋಜಿಸಲಾಗುತ್ತಿದೆ. ಅವರಿಗೆ ದಿವ್ಯ ರಂಗೇನಹಳ್ಳಿ ಸಾರಥ್ಯದ ಮೀಡಿಯಾ ಕನೆಕ್ಟ್ ಸಂಸ್ಥೆ, ಸಿಎಂ ಕಪ್ ಸಹ ಸಂಸ್ಥಾಪಕ ಮತ್ತು ಹಿರಿಯ ಪತ್ರಕರ್ತ ಸುನೀಲ್ ಧರ್ಮಸ್ಥಳ ಸೇರಿದಂತೆ ಇತರ ಗೆಳೆಯರು ಸಿಎಂ ಕಪ್ 2026ರ ಆಯೋಜನೆಗೆ ಸಹಕಾರ ನೀಡಿದ್ದಾರೆ.
8 ತಂಡಗಳ ನಡುವೆ ಹಣಾಹಣಿ:
ಸಿಎಂ ಕಪ್ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟದ ಮತ್ತೊಂದು ವಿಶೇಷವೆಂದರೆ ಪ್ರತಿ ಕ್ಷೇತ್ರದವರು ಒಂದೇ ತಂಡದಲ್ಲಿ ಆಡುತ್ತಿಲ್ಲ. ಬದಲಿಗೆ, ಎಲ್ಲರೂ ಒಂದೊಂದು ತಂಡದಿಂದ ಒಟ್ಟಾಗಿ ಕಣಕ್ಕಿಳಿಯುತ್ತಿದ್ದಾರೆ. ಒಟ್ಟು 8 ಫ್ರಾಂಚೈಸಿ ತಂಡಗಳಿರಲಿದ್ದು, ಪ್ರತಿ ತಂಡಕ್ಕೂ ಪ್ರತ್ಯೇಕ ಮಾಲೀಕರಿರಲಿದ್ದಾರೆ. ಜತೆಗೆ ಪ್ರತಿ ತಂಡದಲ್ಲೂ ಪುರುಷ ಮತ್ತು ಮಹಿಳಾ ಆಟಗಾರ್ತಿಯರಂತೆ ಒಟ್ಟು 15 ಆಟಗಾರರಿರಲಿದ್ದಾರೆ. ಹಾಗೆಯೇ, ಪ್ರತಿ ತಂಡದಲ್ಲೂ ಜನಪ್ರತಿನಿಧಿಗಳು, ಐಎಎಸ್, ಐಪಿಎಸ್, ಕೆಎಎಸ್, ಪೊಲೀಸ್, ಸಚಿವಾಲಯದ ಅಧಿಕಾರಿಗಳು, ವೈದ್ಯರು, ಚಲನಚಿತ್ರ ನಟ-ನಟಿಯರು ಮತ್ತು ಪತ್ರಕರ್ತ ಆಟಗಾರರಿರಲಿದ್ದಾರೆ.
ಪ್ರತಿ ತಂಡಕ್ಕೂ ಒಬ್ಬರು ಕ್ಯಾಪ್ಟನ್, ಒಬ್ಬರು ವೈಸ್-ಕ್ಯಾಪ್ಟನ್ ಇರಲಿದ್ದಾರೆ. ಅವರ ಜತೆಗೆ ಚಲನಚಿತ್ರ ರಂಗದ ಒಬ್ಬರು ಐಕಾನ್ ಪ್ಲೇಯರ್ ಆಗಿರಲಿದ್ದಾರೆ. ಪ್ರತಿ ತಂಡಕ್ಕೂ ತಲಾ ಒಬ್ಬರು ಶಾಸಕರು (ಜನಪ್ರತಿನಿಧಿ), ಐಎಎಸ್, ಐಪಿಎಸ್, ಪೊಲೀಸ್ ಅಧಿಕಾರಿಗಳು, ಸಚಿವಾಲಯದ ಅಧಿಕಾರಿಗಳು, ವೈದ್ಯರು, ಮಾಧ್ಯಮ ಪ್ರತಿನಿಧಿ ಹಾಗೂ ಚಲನಚಿತ್ರ ರಂಗದವರು ಆಟಗಾರರಾಗಿ ಆಯ್ಕೆ ಮಾಡಲಾಗಿದೆ. ಪಂದ್ಯಾವಳಿಯು ಮೆನ್ಸ್ ಸಿಂಗಲ್ಸ್, ಮೆನ್ಸ್ ಡಬಲ್ಸ್, ವುಮೆನ್ ಸಿಂಗಲ್ಸ್, ವುಮೆನ್ಸ್ ಡಬಲ್ಸ್, ಮಿಕ್ಸೆಡ್ ಡಬಲ್ಸ್ ಮತ್ತು ಪವರ್ ಡಬಲ್ಸ್ ಕೆಟಗರಿಯಲ್ಲಿ ನಡೆಯಲಿದೆ. ಇದರ ಜತೆಗೆ ಗೇಮ್ ಚೇಂಜರ್ ಎನ್ನುವ ಹೊಸ ಪರಿಕಲ್ಪನೆಯನ್ನೂ ಕ್ರೀಡಾಕೂಟದಲ್ಲಿ ಪರಿಚಯಿಸಲಾಗುತ್ತಿದೆ. ಕ್ರೀಡಾಕೂಟದ ವಿಜೇತ ತಂಡಕ್ಕೆ 7 ಲಕ್ಷ ರೂಪಾಯಿ ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುತ್ತಿದೆ.
ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಜಿಯೋ ತಂಡದ ಮಾಲೀಕರು:
ಪ್ರಸನ್ನ—— (The Elite Badminton),
ರೂಪಾ— (Esthetic Attacker’s),
ನರಸಿಂಹಮೂರ್ತಿ—- (Telicom sky Stricker), ಲಿಂಗರಾಜು—– (Inspire challenger’s),
ಕೆಜಿಎಫ್ ಬಾಬು—- (KGF Strickers ),
ಪಳನಿ ಪ್ರಕಾಶ್—- (Team cafe divyyam),
ಆನಂದ್—- (Pro Win pancher),
ಯೋಗೀಶ್—-(Sharadha Strickers)
Key words: CM Cup 2026, Badminton, Feb. 21 and 22, Jersey, unveiled







