ಬೆಂಗಳೂರು,ಜನವರಿ,23,2026 (www.justkannada.in): ಯುರೋಪ್ ಮುಕ್ತ ವ್ಯಾಪಾರ ಒಪ್ಪಂದದ (ಇಎಫ್ಟಿಎ) ಭಾಗವಾಗಿರುವ ಬಂಡವಾಳ ಹೂಡಿಕೆ ಬದ್ಧತೆಯಲ್ಲಿನ ಬಹುಪಾಲನ್ನು ಕರ್ನಾಟಕದಲ್ಲಿ ಹೂಡಿಕೆ ಮಾಡಲು ರಾಜ್ಯ ಸರ್ಕಾರವು ಲಿಚೆಂಟೈನ್ ಪ್ರಧಾನಿಗೆ ಮನವಿ ಮಾಡಿಕೊಂಡಿದೆ.
ʼದಾವೋಸ್ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದಲ್ಲಿ ಲಿಚೆಂಟೈನ್ ಪ್ರಧಾನಿ ಬ್ರಿಗೆಟ್ ಹ್ಯಾಸ್ ಅವರನ್ನು ಭೇಟಿಯಾಗಿ ಆ ದೇಶದ ಕೈಗಾರಿಕಾ ಪರಿಣತಿ, ಕರ್ನಾಟಕದ ತಯಾರಿಕಾ ಹಾಗೂ ನಾವೀನ್ಯತಾ ಪರಿಸರದ ಸದ್ಬಳಕೆಗೆ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಪಡಿಸಲು ಫಲಪ್ರದ ಚರ್ಚೆ ನಡೆಸಲಾಯಿತು. ವಾಣಿಜ್ಯ ಬಾಂಧವ್ಯ ಗಟ್ಟಿಗೊಳಿಸಲು ರಾಜ್ಯಕ್ಕೆ ಭೇಟಿ ನೀಬೇಕೆಂದು ಲಿಚೆಂಟೈನ್ ಪ್ರಧಾನಿಗೆ ಆಹ್ವಾನ ನೀಡಲಾಗಿದೆʼ ಎಂದು ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಅವರು ತಿಳಿಸಿದ್ದಾರೆ.
ʼಜಾಗತಿಕ ಕ್ಲೌಡ್ ಮತ್ತು ಮೂಲಸೌಲಭ್ಯ ಕಂಪನಿಗಳನ್ನು ಅಧಿಕ ಸಂಖ್ಯೆಯಲ್ಲಿ ರಾಜ್ಯಕ್ಕೆ ಆಕರ್ಷಿಸಲು ವಿಶ್ವದ ಪ್ರಮುಖ ಕ್ಲೌಡ್ ಕಂಪ್ಯೂಟಿಂಗ್ ಮತ್ತು ಡಿಜಿಟಲ್ ಮೂಲಸೌಲಭ್ಯ ಕಂಪನಿ ಅಮೆಜಾನ್ ವೆಬ್ ಸರ್ವಿಸಸ್ನ (ಎಡಬ್ಲ್ಯುಎಸ್) ಉಪಾಧ್ಯಕ್ಷ ಮೈಕಲ್ ಪುಂಕೆ ಅವರ ಜೊತೆ ವಿವರವಾಗಿ ಚರ್ಚಿಸಲಾಗಿದೆ.
ʼರಾಜ್ಯದಲ್ಲಿ ವಿಪುಲ ಪ್ರಮಾಣದಲ್ಲಿ ಲಭ್ಯ ಇರುವ ಕುಶಲ ತಂತ್ರಜ್ಞರು, ನವೋದ್ಯಮಗಳು ಮತ್ತು ಡಿಜಿಟಲ್ ಮೂಲಸೌಲಭ್ಯಗಳ ಬಗ್ಗೆ ಮೈಕಲ್ ಪುಂಕ್ ಅವರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಾಗತಿಕ ಕ್ಲೌಡ್ ಮತ್ತು ಡೇಟಾ ಸೆಂಟರ್ ನಿರ್ವಹಿಸುವ ಕಂಪನಿಗಳ ಅಗತ್ಯಗಳನ್ನೆಲ್ಲ ಪೂರೈಸುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆʼ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
ಕ್ಲೌಡ್ ಕಂಪ್ಯೂಟಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಲಭ್ಯ ಇರುವ ಉತ್ತೇಜನೆಗಳು, ವಿದ್ಯುತ್ ಲಭ್ಯತೆ ಮತ್ತು ಬಳಕೆಗೆ ಸನ್ನದ್ಧಸ್ಥಿತಿಯಲ್ಲಿ ಇರುವ ಮೂಲಸೌಲಭ್ಯಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ.
ರಾಜ್ಯದಲ್ಲಿನ ಉದ್ಯಮ ಸ್ನೇಹಿ ಪರಿಸರದ ಬಗ್ಗೆ ವಾಹನ ತಯಾರಿಕಾ ಕಂಪನಿ ವೋಲ್ವೊ ಸಂಪೂರ್ಣ ತೃಪ್ತಿ ವ್ಯಕ್ತಪಡಿಸಿದೆ. ತಯಾರಿಕೆ, ತಂತ್ರಜ್ಞಾನ ಮತ್ತು ಕುಶಲ ತಂತ್ರಜ್ಞರ ಲಭ್ಯತೆ ಬಳಸಿಕೊಂಡು ರಾಜ್ಯದಲ್ಲಿನ ವಾಹನ ತಯಾರಿಕೆ ಚಟುವಟಿಕೆಗಳನ್ನು ವಿಸ್ತರಿಸಲು ಆಹ್ವಾನ ನೀಡಲಾಗಿದೆ.
Key words: Davos, Minister, M.B. Patil, Liechtenstein, PM, investment







