ಬೆಂಗಳೂರು,ಜನವರಿ,23,2026 (www.justkannada.in): ದೂರಸಂಪರ್ಕ ತಂತ್ರಜ್ಞಾನ ಕ್ಷೇತ್ರದ ಜಾಗತಿಕ ದೈತ್ಯ ಸಂಸ್ಥೆಗಳಲ್ಲಿ ಒಂದಾಗಿರುವ ನೋಕಿಯಾ ಕಾರ್ಪೊರೇಷನ್, ರಾಜ್ಯದಲ್ಲಿ ಜಾಗತಿಕ ಸಾಮರ್ಥ್ಯ ಕೇಂದ್ರ (ಜಿಸಿಸಿ) ಮತ್ತು ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲು ಒಲವು ವ್ಯಕ್ತಪಡಿಸಿದೆ.
ʼಕರ್ನಾಟಕದ ಜೊತೆಗೆ 25 ವರ್ಷಗಳ ಸುದೀರ್ಘ ಸಹಯೋಗ ಹೊಂದಿರುವ, ಬೆಂಗಳೂರಿನಲ್ಲಿ ತನ್ನ ಜಾಗತಿಕ ಅತಿದೊಡ್ಡ ಸಂಶೋಧನಾ ಕೇಂದ್ರ ಹೊಂದಿರುವ ನೋಕಿಯಾ, 2ನೆ ಶ್ರೇಣಿಯ ನಗರಗಳೂ ಸೇರಿದಂತೆ ರಾಜ್ಯದಲ್ಲಿ ತನ್ನ ವಹಿವಾಟು ವಿಸ್ತರಣೆ ಸಂಬಂಧ ಮಾತುಕತೆ ನಡೆಸಿದೆ. ದಾವೋಸ್ ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದಲ್ಲಿ ನೋಕಿಯಾದ ಉನ್ನತಾಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಕಂಪನಿಯ ಭವಿಷ್ಯದ ವಿಸ್ತರಣಾ ಉಪಕ್ರಮಗಳಿಗೆ ರಾಜ್ಯ ಸರ್ಕಾರದ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಲಾಗಿದೆʼ ಎಂದು ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಅವರು ತಿಳಿಸಿದ್ದಾರೆ.
ʼಸುಸ್ಥಿರ ನಗರಾಭಿವೃದ್ಧಿಗೆ ಸಂಬಂಧಿಸಿದ ʼಯೆಸ್ ಬೆಂಗಳೂರುʼ ಉಪಕ್ರಮವು ಜಾಗತಿಕ ಮಾನ್ಯತೆ ಪಡೆದ ಸರ್ಕಾರ ಹಾಗೂ ಉದ್ಯಮ ಸಹಯೋಗದ ವೇದಿಕೆಯನ್ನಾಗಿ ಅಭಿವೃದ್ಧಿಪಡಿಸುವ ವಿಶ್ವ ಆರ್ಥಿಕ ವೇದಿಕೆಯ ʼಯೆಸ್- ಬಿಎಲ್‌ಆರ್ ಅಪ್‌ಲಿಂಕ್ʼ ಉಪಕ್ರಮಕ್ಕೆ ರಾಜ್ಯ ಸರ್ಕಾರದ ಅಗತ್ಯ ಬೆಂಬಲ ನೀಡುವುದಾಗಿ ಸಚಿವ ಎಂ.ಬಿ ಪಾಟೀಲ್ ಭರವಸೆ ನೀಡಿದರು.
ʼವಿಶ್ವ ಆರ್ಥಿಕ ವೇದಿಕೆಯ ಅಪ್ ಲಿಂಕ್ ಮುಖ್ಯಸ್ಥ ಜಾನ್ ಡುಟೊನ್ ಅವರ ಜೊತೆಗಿನ ಸಭೆಯಲ್ಲಿ ಇದನ್ನು ಪ್ರಮುಖವಾಗಿ ಚರ್ಚಿಸಲಾಗಿದೆ. ನಗರ ಕೇಂದ್ರೀತ ವಾಸ್ತವಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಹಾಗೂ ನಗರಾಭಿವೃದ್ಧಿಗೆ ಕೊಡುಗೆ ನೀಡುವ ನವೋದ್ಯಮಗಳಿಗೆ ಹಣಕಾಸು ನೆರವು, ಉತ್ತೇಜನ, ಪ್ರಾಯೋಗಿಕ ಅವಕಾಶಗಳನ್ನು ಒದಗಿಸುವ ವಿಶಿಷ್ಟ ಉಪಕ್ರಮ ಇದಾಗಿದೆ. ಈ ಉಪಕ್ರಮವನ್ನು ಮುಂದುವರೆಸಿಕೊಂಡು ಹೋಗುವುದಕ್ಕೆ ಕರ್ನಾಟಕ ಸರ್ಕಾರ ನೀಡಿರುವ ಬೆಂಬಲವನ್ನು ಡಬ್ಲ್ಯುಇಎಫ್ ಅಪ್ ಲಿಂಕ್ ನ ನಿಯೋಗವು ಶ್ಲಾಘಿಸಿದೆʼ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
ʼಕ್ವಿನ್ ಸಿಟಿʼ ಯೋಜನೆಯ ಭಾಗವಾಗುವ ಹಾಗೂ ವಿಸ್ತರಣೆ ಸಾಧ್ಯತೆಗಳ ಬಗ್ಗೆ ಸೈಬರ್ ಸುರಕ್ಷತೆಯ ಜಾಗತಿಕ ಕಂಪನಿ ಕ್ಲೌಡ್ ಫ್ಲೇರ್ ನ ಜೊತೆಗಿನ ಸಭೆಯಲ್ಲಿ ಚರ್ಚಿಸಲಾಗಿದೆ. ಕಂಪನಿಯ ಭವಿಷ್ಯದ ವಿಸ್ತರಣಾ ಯೋಜನೆಗಳಿಗೆ ರಾಜ್ಯ ಸರ್ಕಾರದ ಅಗತ್ಯ ನೆರವಿನ ಭರವಸೆ ನೀಡಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಆಕರ್ಷಿಸುವುದರಲ್ಲಿ ಕರ್ನಾಟಕವು ಜಾಗತಿಕವಾಗಿ ಅತ್ಯುತ್ತಮ ತಾಣವಾಗಿದೆಯೆಂದು ಕಂಪನಿಯ ಜಾಗತಿಕ ಕಾರ್ಯತಂತ್ರ ಮುಖ್ಯಸ್ಥ ಸ್ಟೆಫಾನಿ ಕೊಹೆನ್ ಅವರು ಗುಣಗಾನ ಮಾಡಿದ್ದಾರೆʼ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
ಪಾಲುದಾರಿಕೆಗೆ ವಾಸ್ಟ್ ಸ್ಪೇಸ್ ಒಲವು
ಬಾಹ್ಯಾಕಾಶ ತಂತ್ರಜ್ಞಾನ, ಅತ್ಯಾಧುನಿಕ ತಯಾರಿಕೆ ಮತ್ತು ನಾವೀನ್ಯತೆ ಆಧಾರಿತ ಉಪಕ್ರಮಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ಜೊತೆ ಪಾಲುದಾರಿಕೆ ಮಾಡಿಕೊಳ್ಳಲು ಅಮೆರಿಕದ ಬಾಹ್ಯಾಕಾಶ ತಂತ್ರಜ್ಞಾನ ಕಂಪನಿ ವಾಸ್ಟ್ ಸ್ಪೇಸ್ ಒಲವು ತೋರಿಸಿದೆ.
ಯುಎಇ ಮೂಲದ ಬಹುರಾಷ್ಟ್ರೀಯ ಉದ್ಯಮ ಸಮೂಹವಾಗಿರುವ ಕ್ರೆಸೆಂಟ್ ಎಂಟರ್ ಪ್ರೈಸಿಸ್ , ರಾಜ್ಯದ ಉದ್ದಿಮೆ ಹಾಗೂ ಕಂಪನಿಗಳಲ್ಲಿ ಹೂಡಿಕೆ ಮಾಡಲು ಆಸಕ್ತಿ ವ್ಯಕ್ತಪಡಿಸಿದೆ.
ಸರ್ಕಾರದ ಜೊತೆ ಒಪ್ಪಂದಕ್ಕೆ ಆಸಕ್ತಿ
ʼರಾಜ್ಯ ಸರ್ಕಾರದ ಜೊತೆ ಪಾಲುದಾರಿಕೆಯ ಒಪ್ಪಂದ ಮಾಡಿಕೊಳ್ಳುವುದಕ್ಕೆ ಅಮೆರಿಕದ ವೈಮಾಂತರಿಕ್ಷ ಕಂಪನಿ ವೊಯೆಜರ್ ಟೆಕ್ನಾಲಜೀಸ್ ಕಂಪನಿ ತೀವ್ರ ಆಸಕ್ತಿ ವ್ಯಕ್ತಪಡಿಸಿದೆ. ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಸಂಶೋಧನಾ ಉಪಕ್ರಮಗಳಿಗೆ ಸಂಬಂಧಿಸಿದಂತೆ ಇಸ್ರೊ ಜೊತೆ ಪಾಲುದಾರಿಕೆ ಮಾಡಿಕೊಳ್ಳುವುದಕ್ಕೂ ಮುಂದೆ ಬಂದಿದೆ. ಕಾರ್ಯನಿರ್ವಾಹಕ ಉಪಾಧ್ಯಕ್ಷ ಜಾನ್ ಬೌಮ್ ಅವರ ಜೊತೆಗಿನ ಭೇಟಿಯಲ್ಲಿ, ರಾಜ್ಯದ ಬಯೊಫಾರ್ಮಾ ವಲಯದಲ್ಲಿ ಚಟುವಟಿಕೆ ವಿಸ್ತರಿಸುವ ಸಾಧ್ಯತೆಗಳನ್ನು ಚರ್ಚಿಸಲಾಗಿದೆʼ ಎಂದು ಸಚಿವ ಎಂ.ಬಿ ಪಾಟೀಲ ಅವರು ತಿಳಿಸಿದ್ದಾರೆ.
Key words: Nokia, Global Capability Centre, Minister, M.B. Patil







