ಮಂಡ್ಯ, ಜನವರಿ.22, 2026 (www.justkannada.in): ಕೃಷಿ ಫೀಡರ್ ಗಳ ಸೋಲರೈಸೇಷನ್ ಮೂಲಕ ರೈತರ ಕೃಷಿ ಪಂಪ್ ಸೆಟ್ ಗಳಿಗೆ ಹಗಲು ವೇಳೆಯಲ್ಲಿ ಸಮರ್ಪಕ ವಿದ್ಯುತ್ ಪೂರೈಸುವ ‘ಕುಸುಮ್-ಸಿ’ ಯೋಜನೆಯ ಮೊದಲ ಕಾಮಗಾರಿಗೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ಅಧ್ಯಕ್ಷರೂ ಆದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ಹಾಗೂ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್ ರಾಜು ಅವರು ಗುರುವಾರ ಚಲನೆ ನೀಡಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಬೆಸಗರಹಳ್ಳಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿರುವ ಎನ್.ಕೋಡಹಳ್ಳಿ ಗ್ರಾಮದಲ್ಲಿ ಕುಸುಮ್-ಸಿ ಯೋಜನೆಯಡಿ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಲಾಗುತ್ತಿದೆ. ಈ ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲಿ ಮೊಟ್ಟ ಮೊದಲ ಘಟಕ ಇದಾಗಲಿದ್ದು, 15 ಎಕರೆ ವಿಸ್ತೀರ್ಣದಲ್ಲಿ 4.572 ಮೆ.ವ್ಯಾ. ವಿದ್ಯುತ ಉತ್ಪಾದನೆ ಮಾಡಲಾಗುತ್ತಿದೆ.
ಇದರಿಂದ ಬೆಸಗರಹಳ್ಳಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಕೃಷಿ ಫೀಡರ್ ನಿಂದ 1,125 ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಸರಬರಾಜು ಮಾಡಲು ಅನುಕೂಲಕರವಾಗಲಿದೆ. ಈಗಾಗಲೇ 12 ಕುಸುಮ್-ಸಿ ಸೋಲಾರೈಸೇಷನ್ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಈ ಯೋಜನೆಯಿಂದ ಮಂಡ್ಯ ಜಿಲ್ಲಾ ವ್ಯಾಪ್ತಿಯ ರೈತರಿಗೆ ಹಗಲು ವೇಳೆಯಲ್ಲಿ 3 ಫೇಸ್ ವಿದ್ಯುತ್ ಸಂಪರ್ಕ ನೀಡಲು ಸಹಕಾರಿಯಾಗುವುದು.
ಈ ಸಂದರ್ಭದಲ್ಲಿ ಸೆಸ್ಕ್ ತಾಂತ್ರಿಕ ನಿರ್ದೇಶಕ ಡಿ.ಜೆ. ದಿವಾಕರ್, ಮುಖ್ಯ ಇಂಜಿನಿಯರ್ ಮೃತ್ಯುಂಜಯ, ಮಂಡ್ಯ ವೃತ್ತದ ಅಧೀಕ್ಷಕ ಇಂಜಿನಿಯರ್ ಸೋಮಶೇಖರ್ ಸೇರಿದಂತೆ ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
Key words: Kusum-C, First work, Mandya district.







