ಮೈಸೂರು,ಜನವರಿ,22,2026 (www.justkannada.in): ಪೌರಕಾರ್ಮಿಕರು ತಮ್ಮ ಕೆಲಸ ಮುಗಿಸಿದ ನಂತರ ಆಹಾರ ಸೇವನೆ ಹಾಗೂ ವಿಶ್ರಾಂತಿ ಪಡೆಯಲು ಬೇಕಿರುವ ವಿಶ್ರಾಂತಿ ಗೃಹ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು ಸೂಚನೆ ನೀಡಿದರು.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಪಿ.ರಘು, ನಗರ ಸ್ಥಳೀಯ ಸಂಸ್ಥೆಗಳು ವಿಶ್ರಾಂತಿ ಗೃಹ ನಿರ್ಮಾಣ ಮಾಡಲು ಇರುವ ತೊಂದರೆಗಳ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆ ಪರಿಹರಿಸಿಕೊಳ್ಳಿ ಎಂದರು.
ಪೌರಕಾರ್ಮಿಕರಿಗೆ ಜೀವ ವಿಮೆ ಮಾಡಿಸುವುದರಿಂದ ಅವರಿಗೆ ಬಹಳಷ್ಟು ಅನುಕೂಲವಾಗಲಿದೆ. ಆದರಿಂದ ಎಲ್ಲರಿಗೂ ಕಡ್ಡಾಯವಾಗಿ ಜೀವ ವಿಮೆ ಮಾಡಿಸಿ ವರದಿ ನೀಡುವಂತೆ ತಿಳಿಸಿದರು.
ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಗಳಲ್ಲಿ ಏಜೆನ್ಸಿಯವರು ಕಡಿಮೆ ಸಂಖ್ಯೆಯಲ್ಲಿ ಕೆಲಸಕ್ಕೆ ಪೌರಕಾರ್ಮಿಕರನ್ನು ನಿಯೋಜಿಸುತ್ತಾರೆ ಹಾಗೂ ಅವರಿಗೆ ಸರಿಯಾಗಿ ವೇತನ ಪಾವತಿಯಾಗುತ್ತಿಲ್ಲ ಎಂದು ದೂರುಗಳು ಕೇಳಿ ಬಂದಿದ್ದು, ಇದನ್ನು ಪರಿಶೀಲಿಸಬೇಕು ಎಂದರು.
ನಿವೇಶನ ಹಾಗೂ ವಸತಿ ರಹಿತ ಪೌರಕಾರ್ಮಿಕರಿಗೆ ವಸತಿ ಸೌಲಭ್ಯವನ್ನು ಆದ್ಯತೆ ನೀಡಿ ಒದಗಿಸಬೇಕು. ಪೌರಕಾರ್ಮಿಕರಿಗೆ ನೀಡಲಾಗುವ ಸವಲತ್ತುಗಳ ಬಗ್ಗೆ ಹೆಚ್ಚಿನ ಪ್ರಚಾರ ಹಾಗೂ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ ಎಂದು ರಘು ಅವರು ತಿಳಿಸಿದರು.
ಮ್ಯಾನುಯಲ್ ಸ್ಕ್ಯಾವೆಂಜರ್ಸ್ ಗಳನ್ನು ಮುಖ್ಯ ವಾಹಿನಿಗೆ ತರಲು ಸರ್ಕಾರ ಹಲವಾರು ಸೌಲಭ್ಯಗಳನ್ನು ನೀಡಿದೆ. ಸೌಲಭ್ಯ ಪಡೆಯದೆ ಇರುವ ಮ್ಯಾನುಯಲ್ ಸ್ಕ್ಯಾವೆಂಜರ್ಸ್ ಗಳು ಸಿಗದಿದ್ದಾರೆ ಪೊಲೀಸ್ ಇಲಾಖೆಯ ಸಹಾಯ ಪಡೆದು ಅವರನ್ನು ಪತ್ತೆ ಹಚ್ಚಿ ಸೌಲಭ್ಯ ಒದಗಿಸಿ ಎಂದರು.
ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಜಿ ಅವರು ಮಾತನಾಡಿ, ಕಳೆದ ಸಾಲಿನಲ್ಲಿ ಎ.ಪಿ.ಎಂ.ಸಿ ಯಲ್ಲಿ ಕಾರ್ಯನಿರ್ವಹಿಸಿರುವ ಪೌರಕಾರ್ಮಿಕರಿಗೆ ಪಿ.ಎಫ್, ಇಎಸ್.ಐಯನ್ನು ಏಜೆನ್ಸಿ ಅವರು ಪಾವತಿ ಮಾಡಿಲ್ಲ ಎಂದು ದೂರು ಕೇಳಿಬಂದಿದ್ದು, ಇದನ್ನು ಪರಿಶೀಲಿಸಿ ಏಜೆನ್ಸಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಕಾರ್ಮಿಕ ಇಲಾಖೆಯಲ್ಲಿ ದೂರು ದಾಖಲಾಗಿ ಬಾಹ್ಯ ಗುತ್ತಿಗೆ ಸೇವೆ ಒದಗಿಸುವ ಏಜೆನ್ಸಿಗಳು ಕಪ್ಪು ಪಟ್ಟಿಗೆ ಸೇರಿರುವ ಮಾಹಿತಿಯನ್ನು ಪ್ರತಿ ವರ್ಷ ಇಲಾಖೆಗಳಿಗೆ ಒದಗಿಸಿದರೆ ಅಂತಹ ಸಂಸ್ಥೆಗಳಿಗೆ ಕಾರ್ಯಾದೇಶ ನೀಡುವುದು ತಪ್ಪುತ್ತದೆ. ಅಧಿಕಾರಿಗಳು ಪೌರಕಾರ್ಮಿಕರಿಗೆ ಏಜೆನ್ಸಿ ಅವರು ನೀಡುವ ವೇತನ ಸರಿಯಾಗಿದೆರೇ ಎಂಬುದನ್ನು ಅವರ ಪಾಸ್ ಬುಕ್ ಪಡೆದು ಆಗಿಂದಾಗ ಪರಿಶೀಲಿಸಿ ಎಂದರು.
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಕಾರ್ಯದರ್ಶಿ ಸುಮಾಯ್ ರೂಹಿ ಅವರು ಮಾತನಾಡಿ ಪೌರಕಾರ್ಮಿಕರಿಗೆ ಗುರುತುನ ಚೀಟಿ, ಪೇ ಸ್ಲಿಪ್, ಪಿ.ಎಫ್, ಇ.ಎಸ್.ಐ ಪಾವತಿ, ಜೀವ ವಿಮೆ ಮಾಡಿಸಿರುವ ಬಗ್ಗೆ ಪೂರ್ಣ ವರದಿಯನ್ನು ಆಯೋಗಕ್ಕೆ ಕಳುಹಿಸಿಕೊಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
Key words: priority, houses, civil servants, P. Raghu, Mysore







