ರಾಜ್ಯಪಾಲರ ನಡವಳಿಕೆ ಕಪ್ಪು ಅಧ್ಯಾಯ, ರಾಜ್ಯದ ಮತದಾರರ ಅವಮಾನಿಸುವ ಕೆಲಸ-ಹೆಚ್.ಎ ವೆಂಕಟೇಶ್

ಮೈಸೂರು,ಜನವರಿ,22,2026 (www.justkannada.in): ಕರ್ನಾಟಕ ವಿಧಾನಸಭೆಯ ಮೊದಲ ಅಧಿವೇಶನ ಉದ್ದೇಶಿಸಿ  ಸರ್ಕಾರ ಸಿದ್ಧಪಡಿಸಿದ್ದ ಭಾಷಣದ ಬದಲು,  ತಮ್ಮದೇ ಎರಡು ಸಾಲುಗಳನ್ನು ಓದಿ ರಾಜ್ಯಪಾಲರು ಸದನದಿಂದ ಹೊರ ನಡೆದಿರುವುದು ವಿಷಾದದ ಸಂಗತಿ. ರಾಜ್ಯಪಾಲರ ನಡವಳಿಕೆ ಕಪ್ಪು ಅಧ್ಯಾಯವಾಗಿ ದಾಖಲಾಗಲಿದೆ ಎಂಬುದರಲ್ಲಿಯೂ ಯಾವುದೇ ಅನುಮಾನವಿಲ್ಲ ಎಂದು ಕೆಪಿಸಿಸಿ ವಕ್ತಾರ ಹೆಚ್.ಎ ವೆಂಕಟೇಶ್ ಟೀಕಿಸಿದರು.

ಈ ಕುರಿತು ಪತ್ರಿಕಾ ಹೇಳಿಕೆ ಮೂಲಕ ಪ್ರತಿಕ್ರಿಯಿಸಿರುವ ಹೆಚ್.ಎ ವೆಂಕಟೇಶ್,  ರಾಜ್ಯಪಾಲರ ಹುದ್ದೆಯು ಸಾಂವಿಧಾನಿಕ ಮೌಲ್ಯಗಳನ್ನು ಕಾಪಾಡುವ ಮೊದಲ ಕರ್ತವ್ಯವನ್ನು ಹೊಂದಿದೆ. ಇದು ರಾಜಕೀಯವಾಗಿ ತಟಸ್ಥ ನಿಲುವನ್ನೂ ಹೊಂದಿರಬೇಕು. ಆದರೆ ಕರ್ನಾಟಕದ ರಾಜ್ಯಪಾಲರು ಒಂದು ರಾಜಕೀಯ ಪಕ್ಷದ ಮುಖವಾಣಿಯಂತೆ ನಡೆದುಕೊಳ್ಳುತ್ತಿರುವುದು ಇಂದು ಬಹಿರಂಗವಾಗಿ ಗೋಚರವಾಗಿದೆ.  ಆಡಳಿತದ ಮೊದಲ ವ್ಯಕ್ತಿಯಾಗಿ ಇವರು ಪ್ರಥಮ ಅಧಿವೇಶನದಲ್ಲಿ ಸರ್ಕಾರದ ನಿಲುವುಗಳನ್ನು ಪ್ರತಿಬಿಂಬಿಸುವ ಸರ್ಕಾರದ ಭಾಷಣವನ್ನು ಪೂರ್ಣಪ್ರಮಾಣದಲ್ಲಿ ಓದಲೇಬೇಕಿತ್ತು.  ಇದು ಸಂವಿಧಾನದ 176 ನೆ ವಿಧಿಯನ್ವಯ ಅವರ ಕರ್ತವ್ಯವೂ ಹೌದು. ಆದರೆ ಚುನಾಯಿತ ಸರ್ಕಾರದ ನೀತಿ ನಿಲುವುಗಳನ್ನು ಬಿಂಬಿಸುವ ಭಾಷಣ ಓದಲು ನಿರಾಕರಿಸುವ ಮೂಲಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರಾಜ್ಯದ ಎಲ್ಲಾ ಮತದಾರರನ್ನೂ  ಅವಮಾನಿಸಿದ್ದಾರೆ.  ಇಂತಹ ನಡವಳಿಕೆ ಸಮರ್ಪಕ ವಾದುದಲ್ಲ ಎಂದು ಕಿಡಿಕಾರಿದ್ದಾರೆ.

ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಬೇಕಾದವರೇ ರೂಪಿತ ನಿಯಮಗಳನ್ನು ಉಲ್ಲಂಘಿಸುವುದು  ಹುದ್ದೆಗೆ ಶೋಭೆ ತರುವಂತದ್ದಲ್ಲ. ರಾಜ್ಯಪಾಲರು ರಾಜ್ಯ ಸರ್ಕಾರದ ಸಚಿವ ಪರಿಷತ್ತಿನ ಸಲಹೆ ಸೂಚನೆಯಂತೆ ನಡೆದುಕೊಳ್ಳಬೇಕು ಎಂದು ಸಂವಿಧಾನ 163ನೇ ನಿಯಮ ಸ್ಪಷ್ಟವಾಗಿ ಹೇಳುತ್ತದೆ. ಆದರೆ ರಾಜಕೀಯ ಕಾರಣಗಳಿಗಾಗಿ ಕೆಲ ರಾಜ್ಯಗಳ ರಾಜ್ಯಪಾಲರು ವಿಭಿನ್ನವಾಗಿ ನಡೆದುಕೊಳ್ಳುತ್ತಿರುವುದು ದೇಶದ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದಾಗ ಅರಿವಿಗೆ ಬರುತ್ತಿದೆ. ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಅಲ್ಲಿನ ರಾಜ್ಯಪಾಲರು ರಾಜ್ಯ ಸರ್ಕಾರದ ಜೊತೆಗೆ ಬೀದಿ ಜಗಳಕ್ಕಿಳಿದಂತೆ ವರ್ತಿಸುತ್ತಿದ್ದಾರೆ. ಗೌರವಯುತ ರಾಜಕಾರಣಕ್ಕೆ ಹೆಸರಾಗಿರುವ ಕರ್ನಾಟಕದ ರಾಜ್ಯಪಾಲರಿಗೂ ಸಹ ಇಂತಹ ಕನಿಷ್ಠತಮ ರಾಜಕೀಯದ ಸೋಂಕು ತಗಲಿರುವುದು ಸಲ್ಲದ ಬೆಳವಣಿಗೆ ಎಂದು ಹೆಚ್.ಎ ವೆಂಕಟೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜನೋಪಯೋಗಿ ಯೋಜನೆಗಳ ಕುರಿತು  ಧನಾತ್ಮಕ ಚರ್ಚೆಗೆ ಇಂಬು ನೀಡಬೇಕಾದ ರಾಜ್ಯಪಾಲರು  ದಮನಕಾರಿ ನಡವಳಿಕೆ ತೋರಿದ್ದಾರೆ. ರಾಜ್ಯ ಸರ್ಕಾರ ಈ ಅಂಶವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಪಕ್ಷ ರಾಜಕೀಯದ ಕಾರಣಕ್ಕೆ ಚುನಾಯಿತ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ರಾಜ್ಯಪಾಲರ ಇಂತಹ ಹಗುರ ನಡವಳಿಕೆ ಎಂದಿಗೂ ಮಾನ್ಯವಾದುದಲ್ಲ. ತಟಸ್ಥ ರಾಜಕೀಯ ನಿಲುವು ಮತ್ತು ಸಂವಿಧಾನ ಬದ್ಧತೆ ರಾಜ್ಯಪಾಲರ ಗುಣಲಕ್ಷಣಗಳು. ಕರ್ನಾಟಕದ ರಾಜ್ಯಪಾಲರು ತಮ್ಮ ರಾಜಕೀಯ ನಿಲುವಿನ ಕಾರಣಕ್ಕಾಗಿ ಜನತಾ ಸರ್ಕಾರದ ಆಶಯಗಳನ್ನು ಹತ್ತಿಕ್ಕಲು ಮುಂದಾಗಿರುವುದು ಇಲ್ಲಿ ಸ್ಪಷ್ಟವಾಗಿದೆ. ಇಂತಹ ನಡವಳಿಕೆ ಗೆಹ್ಲೋಟ್ ಅವರ ಹತಾಶ ಮನಸ್ಥಿತಿಯನ್ನು ಬಿಂಬಿಸುತ್ತಿದೆ.

ರಾಜ್ಯದಲ್ಲಿ ರಾಜ್ಯಪಾಲರ ಕಚೇರಿ ರಾಜಕೀಯ ಕಾರಣಗಳಿಗಾಗಿ  ಇಷ್ಟೊಂದು ಪ್ರಬಲವಾಗಿ ಈ ಹಿಂದೆ ಬಳಕೆಯಾದ ಉದಾಹರಣೆಯೇ  ಇಲ್ಲ. ರಾಜ್ಯದ ರಾಜಕೀಯ ಇತಿಹಾಸದಲ್ಲಿ ಕರ್ನಾಟಕದ ಈಗಿನ ರಾಜ್ಯಪಾಲರ ನಡವಳಿಕೆ ಕಪ್ಪು ಅಧ್ಯಾಯವಾಗಿ ದಾಖಲಾಗಲಿದೆ ಎಂಬುದರಲ್ಲಿಯೂ ಯಾವುದೇ ಅನುಮಾನವಿಲ್ಲ ಎಂದು ಎಚ್.ಎ. ವೆಂಕಟೇಶ್ ನುಡಿದರು.

Key words: Governor,  behavior, session, H.A. Venkatesh