ತನ್ನ ದೊಡ್ಡಪ್ಪ, ದೊಡ್ಡಮ್ಮನನ್ನೇ ಕೊಂದ ಚಿಕಿತ್ಸೆ ನೀಡುತ್ತಿದ್ದ ವೈದ್ಯ

ಶಿವಮೊಗ್ಗ,ಜನವರಿ,21,2026 (www.justkannada.in): ವೃದ್ಧ ದಂಪತಿಗಳಿಬ್ಬರು ತನ್ನ ಸಂಬಂಧಿ ವೈದ್ಯನಿಂದಲೇ ಹತ್ಯೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಭೂತನಗುಡಿ ಬಡಾವಣೆಯಲ್ಲಿ ನಡೆದಿದೆ.

ಚಂದ್ರಪ್ಪ(80), ಜಯಮ್ಮ(75)  ಹತ್ಯೆಯಾದವರು. ಮಲ್ಲೇಶ್ ಎಂಬಾತನೇ ಹತ್ಯೆ ಮಾಡಿರುವ ವೈದ್ಯ. ಚಂದ್ರಪ್ಪಗೆ ಮಲ್ಲೇಶ್  ಸಹೋದರ ಪುತ್ರನಾಗಿದ್ದಾನೆ. ಚಂದ್ರಪ್ಪ, ಜಯಮ್ಮ ಆತನಿಗೆ ದೊಡ್ಡಪ್ಪ, ದೊಡ್ಡಮ್ಮ ಆಗಬೇಕಿದೆ. ದಂಪತಿಗಳಿಗೆ  ವೈದ್ಯ ಮಲ್ಲೇಶ್ ಚಿಕಿತ್ಸೆ ನೀಡುತ್ತಿದ್ದ.

ಮಂಗಳವಾರ ಬೆಳಗ್ಗೆ ದಂಪತಿಯ ಮೂವರು ಮಕ್ಕಳು ಎಷ್ಟು ಸಲ ಕರೆ ಮಾಡಿದರೂ ದಂಪತಿಗಳು ಉತ್ತರ ನೀಡಿರಲಿಲ್ಲ. ಆದ್ದರಿಂದ ಆತಂಕಗೊಂಡು ಸ್ಥಳೀಯರಿಗೆ ವಿಷಯ ತಿಳಿಸಿದ್ದರು. ಸ್ಥಳೀಯರು ಬಂದು ನೋಡಿದಾಗ ದಂಪತಿ ಸಾವನ್ನಪ್ಪಿರುವುದು ತಿಳಿದುಬಂದಿತ್ತು.

ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು. ಇದೀಗ ಚಂದ್ರಪ್ಪ ಮತ್ತು ಜಯಮ್ಮ ಅವರನ್ನು ಹತ್ಯೆ ಮಾಡಿರುವುದು ಮಲ್ಲೇಶ್ ಎಂದು ತಿಳಿದುಬಂದಿದೆ. ಸದಾ ದೊಡ್ಡಪ್ಪ, ದೊಡ್ಡಮ್ಮನ ಆರೋಗ್ಯ ಕಾಳಜಿ ಮಾಡುತ್ತಿದ್ದ ಡಾ.ಮಲ್ಲೇಶ್ ಇಂಜೆಕ್ಷನ್ ನೀಡಿ ಹತ್ಯೆ ಮಾಡಿದ್ದಾನೆ.  ಅಲ್ಲದೆ ಮನೆಯಲ್ಲಿದ್ದ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದ ಎನ್ನಲಾಗಿದೆ. ಭದ್ರಾವತಿ ಓಲ್ಡ್ ಟೌನ್ ಠಾಣೆಯ ಪೊಲೀಸರು ಮಲ್ಲೇಶ್ ನನ್ನು ಬಂಧಿಸಿದ್ದಾರೆ.

ಸುಮಾರು ಸಾಲ ಮಾಡಿಕೊಂಡಿದ್ದೇನೆ. 15 ಲಕ್ಷ ರೂ. ಸಾಲ ನೀಡಬೇಕು ಎಂದು ಚಂದ್ರಪ್ಪ ಮತ್ತು ಜಯಮ್ಮಗೆ ಮಲ್ಲೇಶ್ ಬೇಡಿಕೆ ಇಟ್ಟಿದ್ದ. ಆದರೆ ಚಂದ್ರಪ್ಪ ಇದಕ್ಕೆ ನಿರಾಕರಿಸಿದ್ದರು.ಇದರಿಂದಾಗಿ ಕೋಪಗೊಂಡ ಡಾ.ಮಲ್ಲೇಶ್ ಹತ್ಯೆಗೈದಿದ್ದಾನೆ ಎನ್ನಲಾಗಿದೆ.

Key words: doctor, Murder, uncle, aunt