ಮೈಸೂರು-ಬೆಂಗಳೂರು ಮೇಲ್ಸೇತುವೆ ಕಾಮಗಾರಿ ತ್ವರಿತಗೊಳಿಸಿ- ಸಂಸದ ಯದುವೀರ್ ಮನವಿ

ಮೈಸೂರು, ಜನವರಿ,14,2026 (www.justkannada.in):  ಮೈಸೂರಿನಲ್ಲಿ ಮೂಲಸೌಕರ್ಯ ಕಾಮಗಾರಿಗಳನ್ನು ಅದರಲ್ಲೂ ಪ್ರಮುಖವಾಗಿ ಮಣಿಪಾಲ ಜಂಕ್ಷನ್‌ ಬಳಿ ಫ್ಲೈ ಓವರ್‌ ನಿರ್ಮಾಣ ಸಂಬಂಧ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದ್ದಾರೆ.

ಈ ಸಂಬಂಧ ನವದೆಹಲಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಕಾರ್ಯದರ್ಶಿ ಉಮಾಶಂಕರ್‌ ಅವರನ್ನು ಭೇಟಿ ಮಾಡಿ ಸಂಸದ ಯದುವೀರ್‌ ಒಡೆಯರ್‌ ಮನವಿ ಸಲ್ಲಿಸಿದ್ದಾರೆ.

ಬೆಂಗಳೂರು-ಮೈಸೂರು ಎಕ್ಸ್‌ ಪ್ರೆಸ್‌ ವೇ ಹಾದಿಯಲ್ಲಿರುವ ಬರುವ ಕೆಂಪೇಗೌಡ ವೃತ್ತ (ಮಣಿಪಾಲ ಜಂಕ್ಷನ್‌)ದಲ್ಲಿ ಫ್ಲೈ ಓವರ್‌ ನಿರ್ಮಾಣ ಮಾಡಿದರೆ ಆಗುವ ಅನುಕೂಲಗಳ ಬಗ್ಗೆ ಮುಖ್ಯ ಕಾರ್ಯದರ್ಶಿಗಳಿಗೆ ಸಂಸದ ಯದುವೀರ್ ಮನವರಿಕೆ ಮಾಡಿಕೊಟ್ಟರು. ಇದಕ್ಕೆ ಸಕಾರಾತ್ಮಕವಾಗಿ ಮುಖ್ಯ ಕಾರ್ಯದರ್ಶಿಗಳು ಸ್ಪಂದಿಸಿದ್ದರು.

ಮೈಸೂರಿಗೆ ಮೈಲಿಗಲ್ಲು

ಈ ಯೋಜನೆಯು ಮೈಸೂರಿಗೆ ಮೈಲಿಗಲ್ಲು ಯೋಜನೆಯಾಗಿದೆ. ಫ್ಲೈ ಓವರ್‌ ನಿರ್ಮಾಣಗೊಂಡರೆ ಅಪಘಾತಗಳು ಕಡಿಮೆಯಾಗಲಿವೆ, ಪ್ರಯಾಣದ ಸಮಯ ಇಳಿಕೆಯಾಗಲಿದೆ, ಜೊತೆಗೆ ಸಾರಿಗೆ ದಟ್ಟಣೆ ನಿವಾರಣೆಯಾಗಿ, ಮೈಸೂರಿಗೆ ಆಗಮಿಸುವ  ಮತ್ತು ನಿರ್ಗಮಿಸುವ ಹಾದಿ ಸುಗಮವಾಗಲಿದೆ ಎಂದು ಸಂಸದ ಯದುವೀರ್‌ ಒಡೆಯರ್‌ ಸ್ಪಷ್ಟಪಡಿಸಿದರು.

ಸರ್ವೀಸ್‌ ರಸ್ತೆ ನಿರ್ಮಾಣ ಕುರಿತು ಚರ್ಚೆ

ಇದೇ ಸಂದರ್ಭದಲ್ಲಿ ಮೈಸೂರು-ಕುಶಾಲನಗರ ಹೆದ್ದಾರಿಯಲ್ಲಿ ಸರ್ವೀಸ್‌ ರಸ್ತೆಗಳನ್ನು ನಿರ್ಮಿಸುವ ಕುರಿತು ಸಂಸದ ಯದುವೀರ್ ಮುಖ್ಯ ಕಾರ್ಯದರ್ಶಿಗಳ ಜೊತೆ ಸಮಾಲೋಚನೆ ನಡೆಸಿದರು.

ಮೈಸೂರು-ಕೊಡಗು ಕ್ಷೇತ್ರಕ್ಕೆ ಹಲವಾರು ಮೂಲಸೌಕರ್ಯ ಯೋಜನೆಗಳನ್ನು ಮಂಜೂರು ಮಾಡುವಲ್ಲಿ ಉದಾರತೆ ತೋರುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ನಿತಿನ್‌ ಗಡ್ಕರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಯದುವೀರ್‌ ತಿಳಿಸಿದರು.

Key words: MP, Yaduveer, work, Mysore-Bengaluru, flyover