ಮಂಡ್ಯ, ಜನವರಿ,14,2026 (www.justkannada.in): ಜನವರಿ 16 ಶುಕ್ರವಾರದಂದು ರಾಜ್ಯ ಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಏರ್ಪಡಿಸಲಾಗಿದೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಸಮ್ಮೇಳನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ. ಮಂಜುನಾಥ ಭೇಟಿ ನೀಡಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆದು ಸಮ್ಮೇಳನ ಸಿದ್ದತೆ ಕುರಿತು ಮಾರ್ಗದರ್ಶನ ಪಡೆದರು.
ನಂತರ ಸಂಸ್ಥಾನದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಆಡಳಿತಾಧಿಕಾರಿ ಎ. ಟಿ. ಶಿವರಾಮ್, ಡಿ. ಮಂಜುನಾಥ, ಭದ್ರಾವತಿ ಕಸಾಪ ಅಧ್ಯಕ್ಷ ಎಚ್. ತಿಮ್ಮಪ್ಪ, ಮಹೇಶ್ ಗೌಡ ಅವರನ್ನು ಒಳಗೊಂಡು ಸಭೆ ನಡೆಯಿತು.
ಸಮ್ಮೇಳನ ಸರ್ವಾಧ್ಯಕ್ಷರಾಗಿ ಶಿವಮೊಗ್ಗದ ಜಾವಳ್ಳಿಯ ಜ್ಞಾನದೀಪ ಶಾಲಾ ವಿದ್ಯಾರ್ಥಿ ಬಿ. ಪಿ. ಶ್ರೀಕಾಂತ ಅವರನ್ನು ಆಯ್ಕೆ ಮಾಡಲಾಯಿತು. ಉದ್ಘಾಟಕರಾಗಿ ಸಿಗ್ಗಾಂ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿ ಅನುಷಾ ಕರಿಬಸವಯ್ಯ ಹಿರೇಮಠ ಭಾಗವಹಿಸಲಿದ್ದಾರೆ. ಹಿಂದಿನ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಅಪೇಕ್ಷ ಕೆ. ಎಂ. ಅವರು ಉಪಸ್ಥಿತರಿರುವರು.
ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಸಾಹಿತಿಗಳು, ಕರ್ನಾಟಕ ಜಾನಪದ ಪರಿಷತ್ತು ರಾಜ್ಯ ಅಧ್ಯಕ್ಷ ಡಾ. ಹಿ.ಚಿ. ಬೋರಲಿಂಗಯ್ಯ, ದಾವಣಗೆರೆ ಡಿ.ಐ.ಜಿ. ರವಿಕಾಂತೇಗೌಡರನ್ನು ಆಹ್ವಾನಿಸಲಾಯಿತು.
ಸಮ್ಮೇಳನದ ಮೂರು ಗೋಷ್ಠಿಗಳ ಅಧ್ಯಕ್ಷರಾಗಿ ಕವಿಗೋಷ್ಠಿಗೆ, ಸೃಜನಾ ಎನ್., ಬೆಂಗಳೂರು, ಕಥೆಗಾರರು ಮಾನ್ವಿ ಎಂ., ಗುರುಪುರ, ಶಿವಮೊಗ್ಗ, ಪ್ರಬಂಧ/ವಿಚಾರ ಗೋಷ್ಠಿಗೆ ನಾದಶ್ರೀ ಆರ್. ಭಟ್, ಮೈಸೂರು ಅವರು ನಿರ್ವಹಿಸಲಿದ್ದಾರೆ. ಹಿಂದಿನ ರಾಜ್ಯ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಕು. ಮುದ್ದು ತೀರ್ಥಹಳ್ಳಿ ಅವರು ಕವಿಗೋಷ್ಠಿಗೆ, ಕು. ಶ್ರಾವ್ಯ ಸಾಗರ ಅವರು ಕಥೆಗೋಷ್ಠಿಗೆ, ಕು. ಭಾವನಾ ಆರ್. ಗೌಡ ಆನವಟ್ಟಿ ಅವರು ಪ್ರಬಂಧ ಗೋಷ್ಠಿ ಸಮನ್ವಯಕಾರರಾಗಿ ಭಾಗವಹಿಸಲಿದ್ದಾರೆ,
ಉದ್ಘಾಟನೆ ಕಾರ್ಯಕ್ರಮದಲ್ಲಿ ಬಾಲ ಪ್ರತಿಭೆಗಳಾದ ಡಾ. ಪೃಥು ಪಿ. ಅದ್ವೈತ್, ಮೈಸೂರು, ಘಮನ್ ಮೂರ್ತಿ ಟಿ. ಜೆ. ತರೀಕೆರೆ, ಅಕ್ಷರ ಎಸ್. ಶೆಟ್ಟಿ ಸಣ್ಣಕೆರೆ ಅವರು ಭಾಗವಹಿಸಲಿದ್ದಾರೆ ಎಂದು ಕಸಾಪ, ಕಸಾಸಾಂ ವೇದಿಕೆ ಶಿವಮೊಗ್ಗ ಜಿಲ್ಲಾ ಅಧ್ಯಕ್ಷ, ರಾಜ್ಯ ಸಮ್ಮೇಳನದ ಸಂಚಾಲಕ ಡಿ. ಮಂಜುನಾಥ ಪತ್ರಿಕೆಗಳಿಗೆ ತಿಳಿಸಿದ್ದಾರೆ.
Key words: State Children’s Kannada Literature Festival, January 16







