ಬೆಂಗಳೂರು,ಜನವರಿ,14,2026 (www.justkannada.in): ಶಿಡ್ಲಘಟ್ಟ ಪೌರಾಯುಕ್ತ ಅಮೃತಾಗೌಡ ಅವರಿಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಜೀವ ಬೆದರಿಕೆ ಹಾಕಿದ ಆರೋಪ ಪ್ರಕರಣ ಸಂಬಂಧ ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಪೌರಾಯುಕ್ತೆ ಆತನ ವಿರುದ್ದ ದೂರು ನೀಡಬೇಕು. ಆ ಪುಡಾರಿಯನ್ನ ಕೂಡಲೇ ಬಂಧಿಸಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಸರ್ಕಾರದಲ್ಲಿ ಅಧಿಕಾರಿಗಳ ಮೇಲೆ ದಬ್ಬಾಳಿಕೆ ಹೆಚ್ಚಾಗಿದೆ. ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ದಬ್ಬಾಳಿಕೆಗಳು ಹೆಚ್ಚಾಗುತ್ತಿದೆ. ಶಿಡ್ಲಘಟ್ಟ ನಗರಸಭೆ ಆಯುಕ್ತೆಗೆ ಜೀವ ಬೆದರಿಕೆ ಹಾಕಿದ್ದಾನೆ. ಆತ ಪದ ಬಳಕೆ ಮಾಡಿರುವ ಆಡಿಯೋ ನಾನು ಕೇಳಿಸಿಕೊಂಡಿದ್ದೇನೆ ಈ ವಿಚಾರವನ್ನು ಸರ್ಕಾರದ ಸಿಎಸ್ ಗಮನಕ್ಕೂ ತಂದಿದ್ದೇನೆ ಎಂದರು.
ಪುಡಾರಿಗಳಿಗೆ ಬೆಂಗಳೂರು ಸುತ್ತಮುತ್ತ ಹಣ ಸಂಪಾದನೆ ಇದೆ. ಹಣದ ಮದದಿಂದ ಪುಡಾರಿಗಳು ಈ ರೀತಿ ನಡೆದುಕೊಳ್ಳುತ್ತಾರೆ. ಅಧಿಕಾರಿಗಳಿಗೆ ಅವಾಜ್ ಹಾಕಿದರೆ ಹೇಗೆ ಕೆಲಸ ಮಾಡುವುದು. ಜೀವ ಬೆದರಿಕೆ ಹಾಕಿದ ಆರೋಪಿ ವಿರುದ್ದ ಕ್ರಮ ಕೈಗೊಳ್ಳಬೇಕು. ಈ ಸರ್ಕಾರಕ್ಕೆ ಮನುಷ್ಯತ್ವ ಇದ್ದರೆ ಈ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಹೆಚ್ ಡಿಕೆ ಒತ್ತಾಯಿಸಿದರು.
Key words: action, against, threatened, congress leader,Union Minister, HDK







