ಮೈಸೂರು,ಜನವರಿ,8,2026 (www.justkannada.in): ಮೈಸೂರು ನಗರದಲ್ಲಿ ದಿನೇ ದಿನೇ ವಾಹನ ದಟ್ಟಣೆ ಹೆಚ್ಚುತ್ತಿದ್ದು, ಸ್ಥಳೀಯಾಡಳಿತ ಶೀಘ್ರ ನೂತನ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್ ಮನವಿ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೆ.ವಿ ಮಲ್ಲೇಶ್, ಮೈಸೂರು ನಗರ ಬೆಳೆದಂತೆಲ್ಲ ವಾಹನ ದಟ್ಟಣೆಯೂ ಹೆಚ್ಚುತ್ತಿದೆ. ಹೆಚ್ಚುವರಿ ಟ್ರಾಫಿಕ್ ನಿಯಂತ್ರಿಸಲು ಎಲ್ಲೆಡೆ ಸಿಗ್ನಲ್ ಗಳನ್ನು ಅಳವಡಿಸಲಾಗುತ್ತಿದೆ. ಇದರಿಂದ ಸುಲಲಿತವಾಗಿ ಸಂಚರಿಸಬಹುದಾದ ರಸ್ತೆಗಳಲ್ಲೂ ಈಗ ಟ್ರಾಫಿಕ್ ಸಮಸ್ಯೆ ಕಾಣುತ್ತಿದೆ. ಅಲ್ಲದೆ ಉಚಿತ ಎಡತಿರುವುಗಳನ್ನು ಎಲ್ಲೆಡೆ ಕಾರ್ಯರೂಪಕ್ಕೆ ತರಬೇಕಿದೆ. ಈಗಾಗಲೇ ದೊಡ್ಡ ದೊಡ್ಡ ನಗರಗಳಲ್ಲಿ ಕೃತಕ ಬುದ್ಧಿಮತ್ತೆ ಆಧರಿತ ಸಿಗ್ನಲ್ ಗಳು, ಕ್ಯಾಮರೆಗಳು ಕಾರ್ಯನಿರ್ವಹಿಸುತ್ತಿವೆ. ಇದರಿಂದ ವಾಹನ ದಟ್ಟಣೆ ಅನುಸಾರ ಸಿಗ್ನಲ್ ಗಳು ಕೆಲಸ ಮಾಡುತ್ತವೆ. ಮೈಸೂರು ನಗರದಲ್ಲಿ ಇಂತಹ ವ್ಯವಸ್ಥೆಗಳನ್ನು ಜಾರಿಗೊಳಿಸಿದರೆ ಮುಂಬರುವ ದಿನಗಳಲ್ಲಿ ಆಗಬಹುದಾದ ಸಂಚಾರ ಒತ್ತಡವನ್ನು ನಿಭಾಯಿಸಬಹುದಾಗಿದೆ ಎಂದು ಸಲಹೆ ನೀಡಿದ್ದಾರೆ.
ರೈಲ್ವೆ ಅಂಡರ್ ಪಾಸ್ ಗಳು ವಿಸ್ತಾರಗೊಳ್ಳಲಿ
ನಗರದಲ್ಲಿ ಇರುವ ಜಯನಗರ, ಮೇಟಗಳ್ಳಿ, ಕುಕ್ಕರಳ್ಳಿ ಕೆರೆ ಬಳಿಯ ರೈಲ್ವೆ ಗೇಟ್ ಗಳನ್ನು ಬದಲಿಸಿ ಭವಿಷ್ಯದ ದೃಷ್ಟಿಯನ್ನಿಟ್ಟುಕೊಂಡು ವಿಶಾಲವಾದ ಮೇಲ್ಸೇತುವೆಗಳನ್ನು ನಿರ್ಮಿಸಬೇಕಿದೆ. ಅಲ್ಲದೇ, ಕೆ.ಜಿ.ಕೊಪ್ಪಲು, ಜಯನಗರ (ಇಸ್ಕಾನ್ ರಸ್ತೆ)ದ ರೈಲ್ವೆ ಅಂಡರ್ ಪಾಸ್ ಗಳನ್ನು ವಿಸ್ತರಿಸಬೇಕಿದೆ. ಈಗಿರುವ ಅಂಡರ್ ಪಾಸ್ ಗಳು ಕಿರಿದಾಗಿದ್ದು, ವಾಹನ ದಟ್ಟಣೆಯಿಂದ ಸಂಚಾರಕ್ಕೆ ಕಿರಿಕಿರಿಯಾಗುತ್ತಿದೆ. ಭವಿಷ್ಯದ ದೃಷ್ಟಿಯಿಂದ ಈಗಲೇ ಈ ಬಗ್ಗೆ ಗಮನಹರಿಸಿ ಅಂಡರ್ ಪಾಸ್ ಗಳನ್ನು ವಿಸ್ತರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ವಾಹನ, ಜನದಟ್ಟಣೆಯಿಂದ ಸಂಚಾರ ದುಸ್ತರವಾಗಲಿದೆ ಎಂದು ಕೆ.ವಿ ಮಲ್ಲೇಶ್ ತಿಳಿಸಿದ್ದಾರೆ.
ಅಪಘಾತ ಮುಕ್ತವಲಯ ನಿರ್ಮಿಸಿ
ನಗರದಲ್ಲಿ ಜನಸಂಖ್ಯೆ ಹೆಚ್ಚಾದಂತೆ ವಾಹನದಟ್ಟಣೆಯೂ ಹೆಚ್ಚುತ್ತಿದೆ. ಹೆಚ್ಚುತ್ತಿರುವ ವಾಹನದಟ್ಟಣೆಗೆ ಅನುಗುಣವಾಗಿ ಅಪಘಾತಗಳೂ ಹೆಚ್ಚುತ್ತಿರುವುದು ಮಾತ್ರ ವಿಪರ್ಯಾಸ. ಅಂಕಿ ಅಂಶದ ಪ್ರಕಾರ ಕಳೆದ 5 ವರ್ಷಗಳಲ್ಲಿ 12ಸಾವಿರಕ್ಕೂ ಹೆಚ್ಚು ಗಂಭೀರ ಪ್ರಮಾಣದ ಅಪಘಾತಗಳು ಸಂಭವಿಸಿವೆ. ಸುಸಜ್ಜಿತ ರಸ್ತೆಗಳು ಸುಗಮ ಸಂಚಾರಕ್ಕೆ ಅನುಕೂಲವಾಗಬೇಕೇ ಹೊರತು ಅಪಘಾತ ವಲಯಗಳಾಗಬಾರದು. ಆದರೆ, ನಗರದಲ್ಲಿ ದಿನೇ ದಿನೇ ಅಪಘಾತಗಳು ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ಸ್ಥಳೀಯ ಆಡಳಿತ ಈ ಬಗ್ಗೆ ಗಮನಹರಿಸಿ ನಗರವನ್ನು ಅಪಘಾತ ಮುಕ್ತವಾಗಿಸುವತ್ತ ಗಮನಹರಿಸಬೇಕು ಎಂದು ಕೆ.ವಿ ಮಲ್ಲೇಶ್ ತಿಳಿಸಿದ್ದಾರೆ.
ರಸ್ತೆ ವಿಭಜಕಕ್ಕೆ ಸಿಮೆಂಟ್ ಬ್ರಿಕ್ಸ್ ಬಳಸಿ
ಜನದಟ್ಟಣೆ ನಿಯಂತ್ರಿಸಲು ನಗರದ ಬಹುತೇಕ ಕಡೆಗಳಲ್ಲಿ ಕಬ್ಬಿಣದ ಬ್ಯಾರಿಕೇಡ್ ಗಳನ್ನು ಹಾಕಲಾಗಿದೆ. ಆದರೆ, ಸಾರ್ವಜನಿಕರು ಅವುಗಳನ್ನು ಕೈಯಿಂದ ಬದಿಗೆ ಸರಿಸಿ ದಾಟಿ ಹೋಗುತ್ತಿದ್ದಾರೆ. ಇದು ಸುಗಮ ಸಂಚಾರಕ್ಕೆ ಅಡಚಣೆಯಾಗುವ ಜತೆಗೆ ಅಪಘಾತಕ್ಕೂ ಕಾರಣವಾಗುತ್ತಿದೆ. ಆದ್ದರಿಂದ ಕಬ್ಬಿಣದ ಬ್ಯಾರಿಕೇಡ್ ಗಳ ಬದಲು ಸಿಮೆಂಟ್ ಬ್ರಿಕ್ಸ್ ಗಳನ್ನು ಅಳವಡಿಸಬೇಕು. ಆಗಾದಾಗ ಮಾತ್ರ ಸಂಚಾರದಟ್ಟಣೆ ನಿಯಂತ್ರಣ ಸಾಧ್ಯ ಎಂದು ಕೆ.ವಿ ಮಲ್ಲೇಶ್ ಹೇಳಿದ್ದಾರೆ.
Key words: Mysore, new way, control, traffic, K.V. Mallesh







