ಬೆಂಗಳೂರು, ಜನವರಿ,7,2026 (www.justkannada.in): ಕೋಗಿಲು ಲೇಔಟ್ ನಲ್ಲಿ ಅಕ್ರಮ ಮನೆಗಳನ್ನ ತೆರವುಗೊಳಿಸಿದ ಹಿನ್ನೆಲೆಯಲ್ಲಿ ನಿರಾಶ್ರಿತರಿಗೆ ಸೂಕ್ತ ಪುನರ್ವಸತಿ ಮತ್ತು ಪರಿಹಾರ ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಜನವರಿ 22ಕ್ಕೆ ಮುಂದೂಡಿಕೆ ಮಾಡಿದೆ.
ಕೋಗಿಲು ಲೇಔಟ್ ನಿರಾಶ್ರಿತರಿಗೆ ಸೂಕ್ತ ಪರಿಹಾರ, ಪುನರ್ವಸತಿ ಕೋರಿ ಜೈಬಾ ತಬಸ್ಸುಮ್ ಮತ್ತಿತರರು ಸಲ್ಲಿಸಿರುವ ಈ ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆಯಿತು.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ‘ಕೋಗಿಲು ಬಡಾವಣೆಯ ವಸೀಂ ಮತ್ತು ಫಕೀರ್ ಕಾಲೋನಿಗಳಲ್ಲಿ ಕಳೆದ 28 ವರ್ಷಗಳಿಂದ ಸುಮಾರು 3 ಸಾವಿರ ಜನರು ವಾಸಿಸುತ್ತಿದ್ದಾರೆ. ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ತೆರವುಗೊಳಿಸಿರುವುದರಿಂದ ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.ಅವರಿಗೆ ಸೂಕ್ತ ಪುನರ್ವಸತಿ ಹಾಗೂ ಪರಿಹಾರ ನೀಡಬೇಕು’ ಎಂದು ಕೋರಿದರು.
ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ’28 ವರ್ಷಗಳಿಂದ ವಾಸಿಸುತ್ತಿದ್ದಾರೆ ಎಂಬುದು ಸಂಪೂರ್ಣ ಸುಳ್ಳು ಮಾಹಿತಿ. ಅಕ್ರಮವಾಗಿ ನಿರ್ಮಿಸಲಾದ ಪ್ರತಿ ಮನೆಯ ಬಗ್ಗೆ ನಮ್ಮ ಬಳಿ ಉಪಗ್ರಹ ಆಧಾರಿತ ಫೋಟೋಗಳಿವೆ (Satellite Photos). ಇದನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು’ ಎಂದು ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಸರ್ಕಾರ ಒಂದು ವಾರ ಕಾಲಾವಕಾಶ ಕೋರಿತು. ವಾದ-ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್, ಮುಂದಿನ ವಿಚಾರಣೆಯನ್ನು ಜನವರಿ 22ಕ್ಕೆ ನಿಗದಿಪಡಿಸಿದೆ.
Key words: compensation, Kogilu Layout, refugees, High Court, adjourns, hearing







