ಮೈಸೂರು,ಡಿಸೆಂಬರ್,31,2025 (www.justkannada.in): ತೆಲಂಗಾಣದ ಗಚಿಬೌಲಿ ಕ್ರೀಡಾಂಗಣದಲ್ಲಿ ಇತ್ತೀಚೆಗೆ (ಡಿಸೆಂಬರ್ 27 ರಿಂದ 29, 2025) ನಡೆದ ಪ್ರತಿಷ್ಠಿತ ’36ನೇ ದಕ್ಷಿಣ ವಲಯ ರಾಷ್ಟ್ರೀಯ ಈಜು ಚಾಂಪಿಯನ್ ಶಿಪ್ ‘ನಲ್ಲಿ (36th South Zone National Swimming Championship) ಕರ್ನಾಟಕದ ಭರವಸೆಯ ಈಜುಪಟು ರುತ್ವಾ ಎಸ್ ಅದ್ಭುತ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದಾರೆ.
ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಕ್ರೀಡಾಕೂಟದಲ್ಲಿ ರುತ್ವಾ ಎಸ್ ಅವರು ಒಟ್ಟು ಎರಡು ಪದಕಗಳನ್ನು ಗೆಲ್ಲುವ ಮೂಲಕ ರಾಜ್ಯದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. 4×50 ಮೀಟರ್ ವೈಯಕ್ತಿಕ ಮೆಡ್ಲೆ ರಿಲೇ (Individual Medley Relay) ವಿಭಾಗದಲ್ಲಿ ಮಿಂಚಿನ ವೇಗದ ಪ್ರದರ್ಶನ ನೀಡಿದ ಇವರು ಅಮೋಘ ‘ಚಿನ್ನದ ಪದಕ’ವನ್ನು ಮುಡಿಗೇರಿಸಿಕೊಂಡಿದ್ದಾರೆ.
ಇದಲ್ಲದೆ, ಅತ್ಯಂತ ಸವಾಲಿನ 100 ಮೀಟರ್ ಬಟರ್ ಫ್ಲೈ (Butterfly) ವಿಭಾಗದಲ್ಲಿ ಕೇವಲ 1:09.37 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ‘ಬೆಳ್ಳಿ ಪದಕ’ಕ್ಕೆ ಕೊರಳೊಡ್ಡಿದ್ದಾರೆ. ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಇಂತಹ ಅತ್ಯುತ್ತಮ ಟೈಮಿಂಗ್ ದಾಖಲಿಸಿರುವುದು ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವಕ್ಕೆ ಸಾಕ್ಷಿಯಾಗಿದೆ.
ಮೈಸೂರಿನ ಜೆ.ಪಿ.ನಗರದ ಜಿ.ಎಸ್.ಎ. ಈಜುಕೊಳದಲ್ಲಿ ಮುಖ್ಯ ತರಬೇತುದಾರ ಪವನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಜಿ.ಎಸ್.ಎ.ನ ಮುಖ್ಯತರಬೇತುದಾರರಾದ ಪವನ್ ಕುಮಾರ್ ಅವರು ಈ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡದ ತರಬೇತುದಾರರಾಗಿ ಆಯ್ಕೆಯಾಗಿದ್ದು ಸಹ ಸಾಧನೆಯಾಗಿದೆ.
ರಾಷ್ಟ್ರಮಟ್ಟದಲ್ಲಿ ರುತ್ವಾ ಎಸ್ ಸಾಧಿಸಿದ ಈ ಗಮನಾರ್ಹ ಸಾಧನೆಗೆ ಮುಖ್ಯತರುಬೇತುದಾರ ಪವನ್ ಕುಮಾರ್, ಶಿವಕುಮಾರ್, ಕಿಶೋರ್ ಕುಮಾರ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಮುಂಬರುವ ದಿನಗಳಲ್ಲಿ ಇವರು ದೇಶದ ಪರವಾಗಿ ಅಂತರರಾರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಸಾಧನೆ ಮಾಡಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
Key words: South Zone, National ,Swimming ,Championship, Mysore, gold, silver medals







